ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

Team Udayavani, Jun 24, 2019, 3:00 AM IST

ಎಚ್‌.ಡಿ.ಕೋಟೆ: ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳು, ರಸ್ತೆ, ಮನೆಗಳು ನಾಶವಾಗುತ್ತಿದ್ದು, ಇಲ್ಲಿ ಗಣಿಗಾರಿಕೆ ತಡೆಯದಿದ್ದರೆ ನೂರಾರು ರೈತ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಇಲ್ಲಿನ ಗಣಿಗಾರಿಕೆಯಿಂದ ಈಗಾಗಲೇ ಲಕ್ಷಾಂತರ ರೂ. ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಗ್ರಾಮಸ್ಥರಲ್ಲಿ ಅತಂಕ ಮನೆ ಮಾಡಿದ್ದು, ತಮ್ಮ ಕುಟುಂಬ ಮತ್ತು ನೆಲ, ಜಲದ ರಕ್ಷಣೆಗಾಗಿ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಲು ಗ್ರಾಮಸ್ಥರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಸಚಿವರ ಸಂಬಂಧಿಕರಿಂದ ಗಣಿಗಾರಿಕೆ: ತಾಲೂಕಿನ ದೊಡ್ಡ ಕೆರೆಯೂರು ಕಾವಲ್‌ ಸಮೀಪ ಮೈಸೂರಿನ ಪ್ರಭಾವಿ ಕಾಂಗ್ರೆಸ್‌ ಮುಖಂಡ ಕೃಷ್ಣ ಮಾದೇಗೌಡ ಎಂಬ ಪ್ರಭಾವಿ ವ್ಯಕ್ತಿ ಸುಮಾರು 25 ಎಕರೆ ಜಮೀನಿನಲ್ಲಿ ಕೆಲ ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ಪ್ರಾರಂಭ ಮಾಡಿದ್ದರು.

ಈಗ ಅದೇ ಭೂಮಿಯನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರ ಸಂಬಂಧಿಕರಿಗೆ (ಅಕ್ಕನ ಮಕ್ಕಳು) ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡು ಕಳೆದ ಒಂದೂವರೆ ವರ್ಷದಿಂದ ಭಾರೀ ಪ್ರಮಾಣದ ಯಂತ್ರಗಳ ಸಹಾಯದಿಂದ ಗಣಿಗಾರಿಕೆ ನಡೆಸುತ್ತಿರುವುದು ಇಲ್ಲಿನ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಜಮೀನುಗಳಲ್ಲಿ ನಿರ್ಮಿಸಿರುವ ರೈತರ ಮನೆಗಳು, ದನದ ಕೊಟ್ಟಿಗೆ, ಮುಖ್ಯ ರಸ್ತೆ, ಜಮೀನು ಬೆಳೆದಿರುವ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳ ಮೌನ: ಜೊತೆಗೆ ರೈತರಿಗೆ ಬೆನ್ನೆಲಬು ಆಗಬೇಕಾಗಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಗಣಿಗಾರಿಕೆ ತಡೆಗಟ್ಟಲು ಮುಂದಾಗದೆ ಮೌನ ವಹಿಸಿರುವುದರಿಂದ ಇಲ್ಲಿನ ರೈತ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಈಗಾಗಲೇ ಅನೇಕ ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ಬೆಳೆ ಕಳೆದುಕೊಂಡು ಅಪಾರ ನಷ್ಟಕ್ಕಿಡಾಗಿದ್ದಾರೆ.

ಗೋಡೆ ಬಿರುಕು: ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೆ ಬೆಳೆ ಇಲ್ಲದೆ ಕಂಗಲಾಗಿರುವ ರೈತರಿಗೆ ಗಣಿಗಾರಿಕೆ ದೂಳಿನಿಂದ, ಗಣಿಗಾರಿಕೆ ಶಬ್ದ ಹಾಗೂ ನ್ಪೋಟಗಳಿಂದ ಮನೆ ಮತ್ತು ಜಮೀನುಗಳಿಗೆ ಕಲ್ಲು ಬೀಳುತ್ತಿದ್ದು, ಗೋಡೆಗಳು ಸೀಳು ಬಿಟ್ಟಿವೆ. ಜಮೀನುಗಳಲ್ಲಿ ಅಳವಡಿಸಿರುವ ಬೋರವೆಲ್‌ಗ‌ಳಲ್ಲಿ ಅಂತರ್ಜಲ ಕುಸಿತಗೊಂಡು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.

ಹೋರಾಟದ ರೂಪುರೇಷೆ: ಗಣಿಗಾರಿಕೆಯನ್ನು ನಿಯಂತ್ರಿಸದಿದ್ದಲ್ಲಿ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗಲಿದೆ ಎನ್ನುವುದನ್ನು ಮನಗಂಡಿರುವ ಚಿಕ್ಕಕೆರೆಯೂರು ಗ್ರಾಮದ ಪೈಲ್ವಾನ್‌ ಕಾಲೋನಿ, ಭೋಗೇಶ್ವರ ಕಾಲೋನಿ, ಕೊಡಸಿಗೆ, ದೊಡ್ಡಕೆರೆಯೂರು, ಮಾದಾಪು, ಹೆ„ರಿಗೆ ಇನ್ನಿತರ ಗ್ರಾಮಗಳ ರೈತರು ಮತ್ತು ಗ್ರಾಮದ ಮುಖಂಡರು ಸಭೆ ಸೇರಿ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಗಟ್ಟವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ತೀವ್ರ ಚೆರ್ಚೆ ನಡೆಸಿದರು.

ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ: ರೈತರು ತಮ್ಮ ಕುಟುಂಬ, ಭೂಮಿ, ನೀರು ಹಾಗೂ ಪರಿಸರ ಉಳಿವಿಗಾಗಿ ಗಣಿಗಾರಿಕೆ ತಡೆಗಟ್ಟುವವರೆಗೂ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.

ಸಭೆಯಲ್ಲಿ ಗ್ರಾಮಗಳ ಮುಖಂಡರಾದ ನಾಗೇಗೌಡ, ಡಾ.ಬಾಬುಜಗಜೀವನರಾಮ್‌ ವಿಚಾರ ವೇದಿಕೆ ಅಧ್ಯಕ್ಷ ಪಿ. ನಾಗರಾಜು, ಕೆಂಡಪ್ಪ, ಕೆಂಡಗಣ್ಣಗೌಡ, ರವಿ, ಮಹೇಶ್‌, ಬಸವೇಗೌಡ, ಶಿವಣ್ಣ, ಮಂಜೇಗೌಡ, ಸುಪೀತ್‌, ಶಶಿಧರ್‌, ದಾಸೇಗೌಡ, ಸಂಗರಾಜ, ಉಮೇಶ, ವಿಜಯಕುಮಾರ್‌, ಶಿವಣ್ಣಗೌಡ, ಸ್ವಾಮಿಗೌಡ, ಅಮೀರ್‌, ರಾಮೇಗೌಡ, ಶಿವರಾಜಪ್ಪ, ಮಹದೇವಸ್ವಾಮಿ, ಮಾದಪ್ಪ, ಕೊಂಡಿ ಕುಮಾರ, ಸೇರಿದಂತೆ ಇನ್ನಿತರ ಗ್ರಾಮದ ಜನರು ಉಪಸ್ಥಿತರಿದ್ದರು.

ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಕ್ರಮವಿಲ್ಲ: ಮಂಡ್ಯ ಮೂಲದ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಡೆದು ನಮ್ಮ ಕುಟುಂಬಗಳನ್ನು, ಬೆಳೆಗಳನ್ನು ರಕ್ಷಿಸುವಂತೆ ರೈತರು ತಾಲೂಕು ಆಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮಕೈಗೊಂಡಿಲ್ಲ,

ಕಾರಣ ಇಲ್ಲಿ ಗಣಿಗಾರಿಕೆ ನಡೆಸುತ್ತಿರುವವರು ಸಚಿವ ಪುಟ್ಟರಾಜು ಅವರ ಸಂಬಂಧಿಕರಾಗಿರುವ ಹಿನ್ನೆ°ಲೆಯಲ್ಲಿ ಯಾವುದೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ