ಮಂದಿರಗಳಿಂದ ಪ್ರಯೋಜನವಿಲ್ಲ

Team Udayavani, Nov 18, 2019, 3:00 AM IST

ಮೈಸೂರು: ನಾನು ಸಾಮಾಜಿಕ ನ್ಯಾಯದ ಪರವಿರುವುದರಿಂದಲೇ ಎಲ್ಲರೂ ನನ್ನ ವಿರುದ್ಧ ಮುಗಿ ಬೀಳ್ತಿದ್ದಾರೆ. ಈ ನಡುವೆ ನೀವೂ ಕೂಡ (ತಳ ವರ್ಗದವರು) ಯಾರ ಪರವಿರಬೇಕೆನ್ನುವುದನ್ನು ಮರೆತಿದ್ದೀರಿ. ಯಾರು ನಿಮ್ಮ ಪರ ಕೆಲಸ ಮಾಡುತ್ತಾರೋ ಅಂತವರ ಜತೆ ನಿಲ್ಲಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಬೋವಿ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಲಲಿತಾದ್ರಿಪುರ ಬಡಾವಣೆಯಲ್ಲಿ ಉದ್ದೇಶಿತ ಬೋವಿ ಸಮುದಾಯದ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ಹಾಗೂ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಗುತ್ತಿಗೆ ಮೀಸಲು ಪದ್ಧತಿ ಜಾರಿಗೊಳಿಸಿಲ್ಲ: ಈ ಹಿಂದೆ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ ಸರ್ಕಾರವಿದ್ದಾಗ ಎಸ್ಸಿ, ಎಸ್ಟಿ ಜನಾಗಂದರಿಗೆ ಜನಸಂಖ್ಯೆಗೆ ಅನುಗುಣವಾಗಿ 24.1 ರಂತೆ ಎಸ್‌ಸಿಪಿ- ಟಿಎಸ್‌ಪಿ ಯೋಜನೆಗೆ ಹಣ ಮೀಸಲಿಟ್ಟೆ. ಗುತ್ತಿಗೆ ಪದ್ಧತಿಯಲ್ಲಿ ಮೀಸಲಾತಿ ಜಾರಿಗೆ ತಂದೆ. ಬಡ್ತಿ ಮೀಸಲಾತಿ ಮುಖಾಂತರ ನ್ಯಾಯ ಒದಗಿಸಿದೆ.

ಆದರೆ ಮೈತ್ರಿ ಸರ್ಕಾರದ ಕುಮಾರಸ್ವಾಮಿಯಾಗಲಿ ಹಾಗೂ ಈಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಸರ್ಕಾರವಾಗಲಿ ಗುತ್ತಿಗೆ ಮೀಸಲು ಪದ್ಧತಿಯನ್ನು ಜಾರಿಗೊಳಿಸಿಲ್ಲ. ಇದನ್ನೆಲ್ಲ ಕೇಳುವವರು ಯಾರು. ವಿಧಾನಸಭೆಯಲ್ಲಿ ಯಾರು ಕೇಳುತ್ತಾರೋ ಅಂತವರನ್ನು ನೀವು ಬೆಂಬಲಿಸಬೇಕಲ್ಲವೇ? ಎಂದು ಸಭಿಕರನ್ನು ಪ್ರಶ್ನಿಸಿ, ನಾವು ಮಾಡಿದ ಕಾಯಿದೆಯನ್ನು ಜಾರಿಗೊಳಿಸದವರು ಇನ್ನು ನಿಮ್ಮ ಪರ ಯೋಜನೆ ರುಪಿಸುತ್ತಾರಾ ಎಂದರು.

ಮಂದಿರಗಳಿಂದ ಪ್ರಯೋಜನವಿಲ್ಲ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲಿ, ಬೇಡ ಅನ್ನಲ್ಲ. ಆದರೆ ಮಂದಿರ, ಮನ್‌ ಕೀ ಬಾತ್‌ನಿಂದಲೇ ಜನರ ಹೊಟ್ಟೆ ತುಂಬುವುದಿಲ್ಲ. ಜನಪರ ಸರ್ಕಾರಗಳು ಸಾರ್ವಜನಿಕರ ಹೊಟ್ಟೆ, ಬಟ್ಟೆ, ಸೂರು ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಕೇವಲ ಮಂದಿರಗಳಿಂದ ಏನು ಪ್ರಯೋಜನವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಮೊದಲು ಶಿಕ್ಷಿತರಾಗಿ: ಹಿಂದೂ ಧರ್ಮದಲ್ಲಿ ಚಾತುರ್ವರ್ಣ ವ್ಯವಸ್ಥೆಯಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವ್ಯವಸ್ಥೆ ಹುಟ್ಟಿಕೊಂಡಿತು. ಲಿಂಗಾಯಿತರು, ಒಕ್ಕಲಿಗರು ಸೇರಿದಂತೆ ನಾವೆಲ್ಲರು ಶೂದ್ರರಾಗಿ, ಶಿಕ್ಷಣದಿಂದ ವಂಚಿತರಾದೆವು. ಇದರಿಂದಾಗಿ ಮೇಲ್ವರ್ಗದವರ ಹಿಂಬಾಲಕರಾಗಿ ಪರಿವರ್ತನೆಯಾಗಿದ್ದೇವೆ. ನಾವು ಶಿಕ್ಷಣ ಪಡೆದು, ಪ್ರಜ್ಞಾವಂತರಾದರೆ ಮಾತ್ರ ಸ್ವಾಭಿಮಾನ ಬೆಳೆಸಿಕೊಳ್ಳಲು ಸಾಧ್ಯ. ಬೋವಿ ಜನಾಂಗದವರು ಶಿಕ್ಷಣ ಪಡೆದು ಆರ್ಥಿಕ ಮತ್ತು ರಾಜಕೀಯವಾಗಿ ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.

ಒಗ್ಗಟ್ಟಿದ್ದರೆ ಸರ್ಕಾರದಿಂದ ಸವಲತ್ತು: ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಬೋವಿ ಸಮಾಜದವರು ಶಿಕ್ಷಣ ಪಡೆದು ಪ್ರಜ್ಞಾಪೂರ್ವಕವಾಗಿ ಚಿಂತಿಸಬೇಕು. ಒಗ್ಗಟ್ಟಿದ್ದರೆ ಸರ್ಕಾರದಿಂದ ಸವಲತ್ತು ಪಡೆದುಕೊಳ್ಳಬೇಕು. ಬೋವಿ ಸಮಾಜಕ್ಕೆ ಸಿದ್ದರಾಮಯ್ಯ ಸಾಕಷ್ಟು ಕೆಲಸ ಮಾಡಿದ್ದಾರೆ. ಹಾಗಾಗಿಯೇ ಉಪಚುನಾವಣೆ ನಡೆಯುತ್ತಿದ್ದರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.

ಸಿದ್ದರಾಮಯ್ಯ ಅಲಕ್ಷ್ಯ ಸಮುದಾಯದ ನಾಯಕರಾಗಿದ್ದಾರೆ. ಆದರೆ ಚುನಾವಣೆ ಸಂದರ್ಭ ಅಲಕ್ಷ್ಯ ಸಮುದಾಯವೇ ಅವರನ್ನು ಸೋಲಿಸಿತು. ಕೆಳ ವರ್ಗದವರನ್ನು ಮೇಲೆತ್ತುವ ಸಲುವಾಗಿ ಅವರು ರಾಜಕೀಯದಲ್ಲಿದ್ದಾರೆ ಎಂದರು. ಸಂಘದ ಜಿಲ್ಲಾದ್ಯಕ್ಷ ಜಿ. ನಾಗರಾಜು, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್‌, ಕಾಂಗ್ರೆಸ್‌ ಮುಖಂಡರಾದ ಸಿ.ಎನ್‌. ಮಂಜೇಗೌಡ, ಕೆ. ಮರೀಗೌಡ, ಬೋವಿ ಸಮಾಜದ ರಾಮಪ್ಪ, ಎಚ್‌.ಸಿ. ದಾಸಪ್ಪ, ಸುಬ್ರಹ್ಮಣ್ಯ, ಡಿ. ಸಿದ್ದರಾಮಯ್ಯ, ಎಸ್‌. ರಾಮು ಇದ್ದರು. ಬೋವಿ ಸಮಾಜದ ಮುಖಂಡರು ಹಾಸ್ಟೆಲ್‌ ನಿರ್ಮಾಣಕ್ಕಾಗಿ ಸುಮಾರು 25 ಲಕ್ಷ ರು. ನೀಡುವುದಾಗಿ ಘೋಷಿಸಿದರು. ಸಿದ್ಧಲಿಂಗಪುರದ ನಾಗಮ್ಮ ಎಂಬವರು ಪ್ರತ್ಯೇಕವಾಗಿ 5 ಲಕ್ಷ ರು. ಚೆಕ್‌ ನೀಡಿದರು.

ವಿಶ್ವನಾಥ್‌ ಗಿಮಿಕ್‌ ನಡೆಯಲ್ಲ: ಸಿದ್ದು
ಮೈಸೂರು: ಶಿವಸೇನೆ ಅಧಿಕೃತವಾಗಿ ಎನ್‌ಡಿಎಯಿಂದ ಹೊರಬಂದು, ಕೋಮುವಾದದಿಂದ ದೂರ ಉಳಿಯುವುದಾಗಿ ಹೇಳಿದೆ. ಹಾಗಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಶಿವಸೇನೆಯೊಂದಿಗೆ ಕೈಜೋಡಿಸಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎಯಿಂದ ಶಿವಸೇನೆ ಹೊರಬಂದಿದ್ದು, ಈಗ ಅದು ಕೋಮುವಾದಿ ಪಕ್ಷವಲ್ಲ.

ಒಂದು ವೇಳೆ ಮತ್ತೂಮ್ಮೆ ಅದು ಎನ್‌ಡಿಎ ಜತೆ ಹೋದರೆ ನಾವೂ ದೂರವಾಗುತ್ತೇವೆ ಎನ್ನುವ ಮೂಲಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ವಿಶ್ವನಾಥ್‌ ಅನರ್ಹರಾಗಿರುವುದರಿಂದ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ. ಹಾಗಾಗಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವುದಾಗಿ ಗಿಮಿಕ್‌ ಮಾಡುತ್ತಿದ್ದಾರೆ. ಆದರೆ ಇದು ಚುನಾವಣೆಯಲ್ಲಿ ವರ್ಕೌಟ್‌ ಆಗುವುದಿಲ್ಲ. ಇದು ಕೇವಲ ಗಿಮಿಕ್‌ ಆಗಿದ್ದು, ಇಷ್ಟು ವರ್ಷ ಏಕೆ ಈ ಮಾತನಾಡಿರಲಿಲ್ಲ. ಇಷ್ಟು ವರ್ಷ ಕಾಲ ಯಾಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಈಗ ಯಾಕೆ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಉಪ ಚುನಾವಣೆಗೆ ಸ್ಪರ್ಧಿಸಿರುವ ಅನರ್ಹರೆಲ್ಲರು ವಿಚಲಿತರಾಗಿದ್ದಾರೆ. ಪರಿಣಾಮ ಏನೇನೋ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯಾಗ್ತಿವಿ. ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ ಎಂದೆಲ್ಲಾ ಅನರ್ಹರು ಭರವಸೆ ನೀಡುತ್ತಿದ್ದಾರೆ. ಆದರೆ ಜನ ಇವರ ಮಾತಿಗೆ ಮರುಳಾಗುವುದಿಲ್ಲ. ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ