ನಾಡಹಬ್ಬಕ್ಕೆ ಪಾರಂಪರಿಕ ಮೆರಗು

Team Udayavani, Oct 12, 2018, 4:23 PM IST

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ನಡೆದ ಪಾರಂಪರಿಕ ನಡಿಗೆ ಕಾರ್ಯಕ್ರಮ ನಾಡಹಬ್ಬದ ಸಂಭ್ರಮಕ್ಕೆ ಪಾರಂಪರಿಕ ಮೆರಗು ನೀಡಿತು.

ನಗರದ ಪುರಭವನದ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯೋಜಿಸಿದ್ದ “ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ’ ಎಂಬ ಶೀರ್ಷಿಕೆಯಡಿ ನಡೆದ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಸಚಿವ ಸಾ.ರಾ.ಮಹೇಶ್‌ ಬಿಳಿ ಶರ್ಟ್‌, ಪಂಚೆ ಹಾಗೂ ಮೈಸೂರು
ಪೇಟ ಧರಿಸಿದ ಸಾಂಪ್ರದಾಯಿಕ ಉಡುಗೆಯಲ್ಲಿ ಚಾಲನೆ ನೀಡಿದರು. 

ಮೈಸೂರು ಅರಸರ ಆಳ್ವಿಕೆಗೆ ಸಾಕ್ಷಿ ಯಾಗಿರುವ ಸಾಂಸ್ಕೃತಿಕ ನಗರಿಯಲ್ಲಿನ ಪಾರಂಪರಿಕ ಕಟ್ಟಡಗಳ ಕುರಿತು
ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಜನಸಾಮಾನ್ಯರಿಗೆ ಪರಿಚಯ ಮಾಡಿ ಕೊಡುವುದು ಪಾರಂಪರಿಕ ನಡಿಗೆಯ
ಉದ್ದೇಶವಾಗಿತ್ತು. ಇನ್ನು ಬೆಳ್ಳಂಬೆಳಗ್ಗೆಯೇ ನಡೆದ ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ಕಾರ್ಯಕ್ರಮದಲ್ಲಿ ಪುರುಷರು ಮೈಸೂರು ಪೇಟ, ಪಂಚೆ, ಶರ್ಟ್‌ ಧರಿಸಿದ್ದರೆ, ಮಹಿಳೆಯರು ವಿವಿಧ ಬಣ್ಣದ ಸೀರೆಯನ್ನುಟ್ಟು ಮಧುವಣಗಿತ್ತಿಯಂತೆ ಸಿಂಗಾರಗೊಂಡು ಮೈಸೂರಿನ ಪಾರಂಪರಿಕ ಕಟ್ಟಡಗಳ ಮಾರ್ಗದಲ್ಲಿ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ, ಸಿದ್ಧಾರ್ಥನಗರ ಸರ್ಕಾರಿ ಪ್ರಧಮ ದರ್ಜೆ ಕಾಲೇಜು, ಜೆಎಸ್‌ಎಸ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಜತೆಗೆ ಪ್ರಾಧ್ಯಾಪಕರು, ವೃದ್ಧರೂ ಭಾಗವಹಿಸಿದ್ದರು.

ಹಳೆಕಟ್ಟಡಗಳ ಪರಿಚಯ: ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮೈಸೂರಿನ ಪಾರಂಪರಿಕ ಕಟ್ಟಡಗಳು, ಪ್ರಮುಖ ವೃತ್ತಗಳ ಇತಿ ಹಾಸದ ಬಗ್ಗೆ ಮಾಹಿತಿ ನೀಡಲಾಯಿತು. ಪುರಭವನದಿಂದ ಆರಂಭಗೊಂಡ ನಡಿ ಗೆಯು ದೊಡ್ಡ ಗಡಿಯಾರ, ಫೀಮೇಸನ್ಸ್‌ ಕ್ಲಬ್‌, ಚಾಮರಾಜ ಒಡೆಯರ್‌ ವೃತ್ತ, ಅರಮನೆ, ಕೃಷ್ಣರಾಜ ಒಡೆಯರ್‌ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೆ.ಆರ್‌. ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್‌ ಇನ್ಸ್ಟಿಟ್ಯೂಟ್‌ (ಕಾವೇರಿ ಎಂಪೋರಿಯಂ), ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಮೈಸೂರು ಮೆಡಿಕಲ್‌ ಕಾಲೇಜು ಕಟ್ಟಡಗಳ ಬಗ್ಗೆ ಹಿರಿಯ ಪತ್ರಕರ್ತ ಈಚನೂರು ಕುಮಾರ್‌ ಹಾಗೂ ಪುರಾತತ್ವ ತಜ್ಞ ಡಾ.ಎನ್‌.ಎಸ್‌. ರಂಗರಾಜು ಮಾಹಿತಿ ನೀಡಿದರು.

ಶಾಸಕ ಎಲ್‌. ನಾಗೇಂದ್ರ, ಮಾಜಿ ಮೇಯರ್‌ ಎಂ.ಜೆ.ರವಿಕುಮಾರ್‌, ಪುರಾತತ್ವ, ಸಂಗ್ರಹಾಲ ಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿ ನಿರ್ಮಲ ಮಠಪತಿ ಇನ್ನಿತರರು ಭಾಗವಹಿಸಿದ್ದರು.  ದಸರಾ ಸಂದರ್ಭದಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಇಲ್ಲಿನ ಪರಂಪರೆ ಹಾಗೂ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡುವ
ಉದ್ದೇಶದಿಂದ ಪಾರಂಪರಿಕ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸುವ ಪ್ರಶ್ನೆಯೇ ಇಲ್ಲ. ದಸರಾ ಮುಗಿದ ಕೂಡಲೇ ಪಾರಂಪರಿಕ ಕಟ್ಟಡಗಳ ನವೀಕರಣ ಮಾಡಲಾಗುವುದು. ಮೈಸೂರಿನ ಪಾರಂಪರಿಕ ಕಟ್ಟಡವನ್ನು ಹಂಪಿಗೆ ಸ್ಥಳಾಂತರಿಸುವುದಿಲ್ಲ, ಮೈಸೂರಿನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.
  ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ