ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಟ್ರಾಫಿಕ್‌ ಜಾಮ್‌

ಪೊಲೀಸರ ನಿರ್ಲಕ್ಷ್ಯದಿಂದ ಸಂಚಾರ ದಟ್ಟಣೆ • ವಾಹನ ಸವಾರರು, ಪಾದಚಾರಿಗಳ ಪರದಾಟ • ಸಾರ್ವಜನಿಕರ ಆಕ್ರೋಶ

Team Udayavani, Jul 12, 2019, 12:13 PM IST

ಕೆ.ಆರ್‌.ನಗರದಲ್ಲಿ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿರುವುದು.

ಕೆ.ಆರ್‌.ನಗರ: ಪೊಲೀಸರ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನಗಳು ಮತ್ತು ಸಾರ್ವಜನಿಕರು ಓಡಾಡಲು ಹರಸಾಹಸ ಪಡುವಂತಾಗಿದೆ. ನಗರದ ವಾಣಿ ವಿಲಾಸ ರಸ್ತೆ, ಚಂದ್ರಮೌಳೇಶ್ವರ ರಸ್ತೆ, ಬಜಾರ್‌ ರಸ್ತೆ ಹಾಗೂ 7ನೇ ರಸ್ತೆಗಳಲ್ಲಿ ಬೈಕ್‌ ಮಾಲೀಕರು ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆ ಮಾಡುತ್ತಿದ್ದು, ಇದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ.

ರಸ್ತೆ 2 ಬದಿಯೂ ನಿಲುಗಡೆ: ಚಂದ್ರಮೌಳೇಶ್ವರ ರಸ್ತೆಯಲ್ಲಿರುವ ನವನಗರ ಅರ್ಬನ್‌ ಬ್ಯಾಂಕ್‌ ಮತ್ತು ಹೋಟೆಲ್ಗಳಿಗೆ ಬರುವಂತಹ ಗ್ರಾಹಕರು ರಸ್ತೆಯ ಎರಡೂ ಬದಿಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿದ್ದಾರೆ. ಇದರ ಜೊತೆಗೆ ಮೈಸೂರಿಗೆ ತೆರಳುವಂತಹ ಕೆಲವು ನೌಕರರು ತಮ್ಮ ಬೈಕ್‌ಗಳನ್ನು ಇದೇ ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಪಾರ್ಕಿಂಗ್‌ ಮಾಡುತ್ತಿದ್ದು, ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆಯಲ್ಲೇ ಮರಳು, ಜಲ್ಲಿ: ಅಲ್ಲದೇ ಪುರಸಭೆ ಮಾಜಿ ಸದಸ್ಯ ಎನ್‌.ಶಿವಕುಮಾರ್‌ ಸೇರಿದಂತೆ ಹಲವು ಮಂದಿ ತಮ್ಮ ಕಟ್ಟಡದ ನಿರ್ಮಾಣ ಮತ್ತು ದುರಸ್ತಿಗಾಗಿ ರಸ್ತೆಯಲ್ಲಿಯೇ ಹಲವು ದಿನಗಳಿಂದ ಮರಳು ಮತ್ತು ಜಲ್ಲಿಯನ್ನು ಸುರಿದು ರಾಶಿ ಹಾಕಿರುವುದರಿಂದ ಸಾರ್ವಜನಿಕರು ಮತ್ತು ವಾಹನಗಳ ಓಡಾಡಲು ಹರಸಾಹಸ ಪಡಬೇಕಾಗಿದೆ.

ಪಾರ್ಕಿಂಗ್‌ ಇಲ್ಲ: 7ನೇ ರಸ್ತೆಯಲ್ಲಿ ಕರ್ನಾಟಕ ಬ್ಯಾಂಕ್‌, ಎರಡು ಕಲ್ಯಾಣ ಮಂಟಪಗಳು, ಆಸ್ಪತ್ರೆ ಸೇರಿದಂತೆ ಟೀ ಹೋಟೆಲ್ಗಳು ಇರುವುದರಿಂದ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿದೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಜೊತೆಗೆ ಕಲ್ಯಾಣ ಮಂಟಪಗಳ ಮಾಲೀಕರು ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡದೇ ಇರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗಿದ್ದು, ಪೊಲೀಸರು ಇತ್ತ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರು ದೂರುತ್ತಿದ್ದಾರೆ.

ತಳ್ಳುವ ಗಾಡಿಗಳು: ಬಜಾರ್‌ ರಸ್ತೆಯ ಎರಡೂ ಬದಿಗಳಲ್ಲಿ ವಾಣಿಜ್ಯ ಮಳಿಗೆಗಳಿದ್ದು, ರಸ್ತೆ ಬದಿಯಲ್ಲಿ ತರಕಾರಿ ಅಂಗಡಿಗಳು ಮತ್ತು ಹಣ್ಣು ಮತ್ತಿತರ ಸರಕು ಸಾಮಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ತಳ್ಳುವ ಗಾಡಿಗಳನ್ನು ನಿಲ್ಲಿಸುವುದರಿಂದ ರಸ್ತೆಯು 40 ಅಡಿಗೂ ಹೆಚ್ಚು ಅಗಲವಾಗಿದ್ದರೂ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ. ಹಬ್ಬ ಹರಿದಿನಗಳಲ್ಲಂತೂ ಸಾರ್ವಜನಿಕರು ಮತ್ತು ವಾಹನಗಳು ಓಡಾಡಲು ಸಾಧ್ಯವೇ ಇಲ್ಲ. ಈ ಮೊದಲು ಇದ್ದಂತಹ ಪೊಲೀಸರು ಸುಗಮ ಸಂಚಾರಕ್ಕಾಗಿ ಹಲವು ಕಾನೂನನ್ನು ಜಾರಿಗೆ ತಂದಿದ್ದರು. ಇಂದು ಅವುಗಳು ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ. ಡಿ.ಚೆನ್ನಣ್ಣನವರ್‌ ಅವಧಿಯಲ್ಲಿ ಸುಗಮ ಸಂಚಾರಕ್ಕೆ ಹಲವು ರೀತಿಯ ನಿಯಮಗಳನ್ನು ರೂಪಿಸುವುದರ ಜತೆಗೆ ಪಟ್ಟಣದಲ್ಲಿ 2 ಪೊಲೀಸ್‌ ಚೌಕಿ ನಿರ್ಮಿಸ ಲಾಗಿತ್ತು. ಆದರೆ ಸರಿಯಾಗಿ ಪಾಲನೆಯಾಗು ತ್ತಿಲ್ಲ. ಸಿಸಿ ಕ್ಯಾಮರಾ ಅಳವಡಿಸುವುದರ ಜತೆಗೆ ಹೈವೇ ಪೆಟ್ರೋಲ್ ವಾಹನವನ್ನು ಪೊಲೀಸ್‌ ಇಲಾಖೆಗೆ ನೀಡಿ ಟ್ರಾಫಿಕ್‌ ಸಮಸ್ಯೆ ಇಲ್ಲದಂತೆ ಮಾಡುತ್ತೇವೆ ಎಂದು ನೀಡಿದ ಭರವಸೆ ಹಾಗೆಯೇ ಉಳಿದಿದೆ.

ಕ್ರಮ ಕೈಗೊಳ್ಳಿ: ಪೊಲೀಸ್‌ ಇಲಾಖೆಯವರು ಬಸ್‌ ನಿಲ್ದಾಣ, ಗರುಡಗಂಭದ ವೃತ್ತ, ಪುರಸಭೆ ವೃತ್ತ ಮತ್ತು ಪೊಲೀಸ್‌ ಠಾಣೆಯ ಎದುರು ವಾಹನಗಳನ್ನು ಅಡ್ಡ ಹಾಕಿ ದೂರು ದಾಖಲು ಮಾಡುವುದರ ಜತೆಗೆ ಮರಳು ಸಾಗಣೆದಾರರನ್ನು ಹಿಡಿದು ದೂರು ದಾಖಲಿಸುವುದರಲ್ಲಿ ನಿರತರಾಗಿದ್ದು, ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಗಮನಹರಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟನ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಹಾಗೂ ಪಾದಚಾರಿಗಳು ಆಗ್ರಹಿಸಿದ್ದಾರೆ.

ಪೊಲೀಸ್‌ ವಸತಿ ಗೃಹ ಬಳಿ ಮರಳು ಶೇಖರಣೆ:

ಅಕ್ರಮವಾಗಿ ಮರಳು ಸಾಗಣೆ ಮಾಡಿದವರಿಂದ ವಶಪಡಿಸಿಕೊಂಡ ಮರಳನ್ನು ನಿಯಮಾನುಸಾರ ಸರ್ಕಾರ ಲೋಕೋಪಯೋಗಿ ಇಲಾಖೆಯ ವತಿಯಿಂದ ತೆರೆದಿರುವ ಯಾರ್ಡ್‌ಗೆ ಹಸ್ತಾಂತರಿಸಬೇಕು. ಆದರೆ, ಈ ಮರಳನ್ನು ಪೊಲೀಸ್‌ ವಸತಿ ಗೃಹದಲ್ಲಿ ಸಂಗ್ರಹಣೆ ಮಾಡಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್‌ ಇಲಾಖೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
● ಗೇರದಡ ನಾಗಣ್ಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ