ವೀರಶೈವ ಸಮಾಜ ಒಗ್ಗಟ್ಟಾಗಲಿ: ಶಾಮನೂರು

Team Udayavani, Sep 9, 2019, 3:00 AM IST

ಮೈಸೂರು: ರಾಜ್ಯದಲ್ಲಿ ವೀರಶೈವ ಸಮಾಜ ತಮ್ಮ ಒಳಪಂಗಡ ಮರೆತು, ಗಂಡು-ಹೆಣ್ಣು ಕೊಡುವಂತಾದರೆ ಒಳಪಂಗಡದಲ್ಲಿನ ತಾರತಮ್ಯ ಹೋಗಲಾಡಿಸಬಹುದು ಎಂದು ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು. ನಗರದ ಜೆಎಸ್‌ಎಸ್‌ ಕಲಾ ಮತ್ತು ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಭಾನುವಾರ ಮೈಸೂರು ನಗರ ಅಖೀಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.

ಪ್ರಶ್ನಿಸುವ ಶಕ್ತಿ ಬರಲಿದೆ: ಮೈಸೂರು, ತುಮಕೂರು ಭಾಗದಲ್ಲಿ ವೀರಶೈವ ಒಳಪಂಗಡ ಸಮಸ್ಯೆಯಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಒಳಪಂಗಡ ಜಾತೀಯತೆ ಹೆಚ್ಚಿದ್ದು, ಅದೆಲ್ಲವನ್ನೂ ಮರೆತು ಒಂದಾದರೆ ನಮ್ಮನ್ನು ಯಾರು ಒಡೆಯಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಸರ್ಕಾರವನ್ನು ಪ್ರಶ್ನಿಸುವ ಶಕ್ತಿಯಿದೆ ಎಂದರು.

ವಿದ್ಯಾಭ್ಯಾಸ ವೆಚ್ಚ ಭರಿಸುವೆ: ಮಹಾಸಭಾದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನಿಟ್ಟುಕೊಂಡು ಶ್ರಮಿಸಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ 2 ಎಕರೆಯನ್ನು ದಾನಿಗಳು ನೀಡಿದ್ದು, ಆ ಭೂಮಿಯಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲಾಗುವುದು. ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ವೆಚ್ಚವನ್ನು ಮಹಾಸಭಾದ ವತಿಯಿಂದ ಭರಿಸುವ ಗುರಿಯಿದೆ ಎಂದು ಹೇಳಿದರು.

ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಮಹಾಸಭಾ ಶ್ರೇಷ್ಠವಾದ ಇತಿಹಾಸ, ಪರಂಪರೆ ಹೊಂದಿದೆ. ಮಹಾಸಭಾದ ಸಂಸ್ಥಾಪಕ ಹಾನಗಲ್‌ ಕುಮಾರೇಶ್ವರರು ಸಮಾಜದ ಐಕ್ಯತೆ ಕಾಪಾಡುವುದರ ಜೊತೆಗೆ, ಅನೇಕ ಮಠ, ಮಾನ್ಯ ಉಪಪಂಗಡಗಳಿದ್ದು, ಅವುಗಳಲ್ಲಿನ ಸಮಸ್ಯೆ ಬಗೆಹರಿಸಿದರು. ಅಲ್ಲದೇ, ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಮೂಲಕ ವೀರಶೈವ ಸಮಾಜಕ್ಕೆ ಭದ್ರ ಬುನಾದಿ ಹಾಕಿದರೆಂದರು.

ಶೋಷಣೆ ತೊಲಗಿಸಿ: ಪ್ರಕೃತಿಯಲ್ಲಿ ಪ್ರವಾಹ, ಬರಗಾಲ, ರೋಗ ಎದುರಾಗುತ್ತಿವೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕು. ಭ್ರಷ್ಟಾಚಾರ, ಮಹಿಳೆಯರ ಶೋಷಣೆ ತೊಲಗಿಸುವ ನಿಟ್ಟಿನಲ್ಲಿ ಶ್ರಮಿಸುವುದು ಯುವಶಕ್ತಿ ಜವಾಬ್ದಾರಿ ಎಂದು ಹೇಳಿದರು. ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿರುವ ಲಿಂಗಾಯತ ಸಮುದಾಯಕ್ಕೆ ಸೇರಿದ ಎಲ್ಲರನ್ನೂ ಒಂಡು ಕಡೆ ಸೇರಿಸುವ ಕಾರ್ಯವನ್ನು ಮಹಸಭಾದ ವತಿಯಿಂದ ಮಾಡಲಾಗಿದೆ.

ರಾಜ್ಯದಲ್ಲಿ ಮಾತ್ರವಲ್ಲದೇ, ಇತರೆ ರಾಜ್ಯಗಳಲ್ಲಿ ಸಮುದಾಯದಲ್ಲಿ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದು ಹೇಳಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಗುರುಬಸವಲಿಂಗಸ್ವಾಮೀಜಿ, ಮೈಸೂರು ನಗರ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಿವಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿ.ಎಸ್‌.ಸದಾಶಿವ, ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ, ಮಹಾಸಭಾದ ಕೇಂದ್ರ ಘಟಕ ಕಾರ್ಯದರ್ಶಿ ರೇಣುಕಾಪ್ರಸನ್ನ, ವರುಣಾ ಮಹೇಶ್‌, ಎಚ್‌.ಎಸ್‌.ಮಹದೇವಸ್ವಾಮಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ