ವಿಶ್ವನಾಥ್, ನಾಗರಾಜ್, ಶಂಕರ್ ಹೆಸರು ಶಿಫಾರಸು
Team Udayavani, Jun 17, 2020, 5:44 AM IST
ಮೈಸೂರು: ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿಯಿಂದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಹೆಸರನ್ನು ಅಂತಿಮಗೊಳಿಸಿ ಶಿಫಾರಸು ಮಾಡಲಾಗಿದೆ ಎಂದು ಸಚಿವ ಸೋಮಶೇಖರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಕೋರ್ ಕಮಿಟಿಯಲ್ಲಿ ಈ ಮೂವರ ಹೆಸರುಗಳ ಜತೆ ಇನ್ನೂ ಹಲವು ಪ್ರಮುಖ ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಿ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದೆ. ಹೈಕಮಾಂಡ್ ಅಧಿಕೃತವಾಗಿ ಯಾರನ್ನು ಅಭ್ಯರ್ಥಿಗಳನ್ನಾಗಿ ಮಾಡುತ್ತದೋ ಕಾದು ನೋಡಬೇಕು ಎಂದರು. ಕೋರ್ ಕಮಿಟಿ ಶಿಫಾರಸು ಮಾಡಿದ ಈ ಮೂವರು ಒಂದೇ ಕೋಮಿನವರು ಎಂಬ ಪ್ರಶ್ನೆಗಳು ಈಗ ಇಲ್ಲ.
ಈ ಮೂವರು ರಾಜೀನಾಮೆ ಕೊಟ್ಟಿರುವುದಕ್ಕೆ ಸರ್ಕಾರ ಬಂದಿರುವುದು. ಸಿಎಂ ಕೊಟ್ಟ ಭರವಸೆಯೇನು ಎಂಬುದು ನಮಗೂ ಅವರಿಗೂ ಗೊತ್ತು, ಅದಕ್ಕಾಗಿ ಮುಖ್ಯಮಂತ್ರಿಗಳು ಈ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಈ ಮೂವರಿಗೂ ಹೈಕಮಾಂಡ್ ಕೂಡ ಅವಕಾಶ ಮಾಡಿಕೊಡಲಿದೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದರು. ಅರಣ್ಯ ಸಚಿವ ಆನಂದ್‌ಸಿಂಗ್ ಮಾತನಾಡಿ, ನಾವ್ಯಾರೂ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಬಿಟ್ಟು ಬಂದವರಲ್ಲ.
ಅಲ್ಲಿನ ವ್ಯವಸ್ಥೆ ಸಹಿಸದೇ ನಾವು ಪಕ್ಷ ಬಿಡಬೇಕಾಯಿತು. ಇದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿಗಳೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಮಗೆಲ್ಲಾ ಸಚಿವ ಸ್ಥಾನ ನೀಡಿದ್ದಾರೆ. ಈಗ ಉಳಿದ ಈ ಮೂವರಿಗೂ ಪರಿಷತ್ ಟಿಕೆಟ್ ಕೊಡಿಸಲಿದ್ದಾರೆ. ಸಭೆಯಲ್ಲೂ ನಮ್ಮ ಅಭಿಪ್ರಾಯ ಕೇಳಿ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಈ ಮೂವರಿಗೂ ಟಿಕೆಟ್ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.