ಕಾಂಕ್ರೀಟ್‌ ಯಂತ್ರದ ವಾಹನದಲ್ಲೇ ಕಾರ್ಮಿಕರ ಪ್ರಯಾಣ!

Team Udayavani, May 13, 2019, 3:00 AM IST

ಎಚ್‌.ಡಿ.ಕೋಟೆ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುವ ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ತಾರಸಿ ಕಾಮಗಾರಿಯಲ್ಲಿ ಪಾಲ್ಗೊಳ್ಳಲು ತೆರಳುವ ಕಾರ್ಮಿಕರು, ಕಾಂಕ್ರೀಟ್‌ ಮಿಕ್ಸರ್‌ ಸಾಗಿಸುವ ವಾಹನದಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ.

ಒಂದು ವೇಳೆ ಆಕಸ್ಮಿಕ ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದರೂ ಇದನ್ನು ತಡೆಗಟ್ಟಬೇಕಾದ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ಹೊಟ್ಟೆ ಪಾಡಿಗಾಗಿ ಮತ್ತು ಹೆಚ್ಚಿನ ಕೂಲಿ ಸಿಗುತ್ತದೆ ಎಂಬ ಕಾರಣದಿಂದಾಗಿ ಬಡ ಕೂಲಿ ಕಾರ್ಮಿಕರು ಕಾಂಕ್ರೀಟ್‌ ಕಾಮಗಾರಿಯಲ್ಲಿ ತೊಡಗುತ್ತಿದ್ದಾರೆ. ಗುತ್ತಿಗೆದಾರ ಕಾರ್ಮಿಕರನ್ನು ಬೇರೊಂದು ವಾಹನದಲ್ಲಿ ಕರೆದೊಯ್ಯದೇ ಕಾಂಕ್ರೀಟ್‌ ಮಿಕ್ಸರ್‌ ಸಾಗಿಸುವ ವಾಹನದಲ್ಲೇ, ಮಿಕ್ಸರ್‌ ಯಂತ್ರದ ಮೇಲೆ ಅಕ್ಕಪಕ್ಕ ಸ್ಥಳಗಳಿಗೆ ಕುರಿಗಳಂತೆ ತುಂಬಿಕೊಂಡು ಹೋಗುತ್ತಿದ್ದಾರೆ.

ಏನಾದರೂ ಆಕಸ್ಮಿಕ ಅಪಘಾತ ಸಂಭವಿಸಿದರೇ ಮಿಕ್ಸರ್‌ ಯಂತ್ರಕ್ಕೆ ಸಿಕ್ಕಿ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಈ ವಿಷಯ ಕಾರ್ಮಿಕರಿಗೆ ತಿಳಿದಿದ್ದರೂ ತಮ್ಮ ಕುಟುಂಬದ ಆರ್ಥಿಕ ಬಡತನ ದೂರಾಗಿಸಿ ದೈನಂದಿನ ಹೊಟ್ಟೆ ತುಂಬಿಸಿಕೊಳ್ಳ ಬೇಕಾದರೇ ಈ ಕೆಲಸ ಕೆಲವರಿಗೆ ಅನಿವಾರ್ಯ ಎಂಬಂತಾಗಿದೆ.

ತಲುಪದ ಸೌಕರ್ಯ: ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರದಲ್ಲಿ ಸಾಕಷ್ಟು ಅನುದಾನವಿದ್ದರೂ, ಕಾರ್ಮಿಕರಿಗೆ ತಲುಪುತ್ತಿಲ್ಲ. ಅವಘಡ ಸಂಭವಿಸಿದಾಗ ಅಸ್ಪತ್ರೆಯ ಚಿಕಿತ್ಸೆ ಖರ್ಚಿ ನೀಡಬಹುದಾದ ಹಣ ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಸಿಕ, ವಾರ್ಷಿಕ ನೀಡುವ ವಿದ್ಯಾರ್ಥಿವೇತನ ಪಡೆಯಲು ಸಾಧ್ಯವಾಗುತ್ತಿಲ್ಲ.

ಒಟ್ಟಾರೆ ಕಾಂಕ್ರೀಟ್‌ ಕಾಮಗಾರಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಂಕ್ರೀಟ್‌ ಯಂತ್ರದ ಮೇಲೆ ಕೂತು ಜೀವ ಕೈಯಲಿಡಿದು ಸರಕು ಯಂತ್ರದಲ್ಲಿ ಪಯಾಣ ಬೆಳೆಸುವ ಕಾರ್ಮಿಕನ ಸ್ಥಿತಿ ಹೊಟ್ಟೆ ಪಾಡೋ ಅಥವಾ ಸಾವಿನೊಂದಿಗೆ ಸರಸಾಟವೋ ಎಂಬಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಪೊಲೀಸ್‌ ಮತ್ತು ಸಾರಿಗೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಬಡ ಕೂಲಿ ಕಾರ್ಮಿಕರ ನೆರವಿಗೆ ಬರಬೇಕಿದೆ.

ಕಳೆದ ಆರೇಳು ವರ್ಷದ ಹಿಂದೆ ಬಡ ಕೂಲಿ ಕಾರ್ಮಿಕರಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿತ್ತು. ಅದರ ಭೀಕರತೆಯನ್ನು ನೆನೆಯಲು ಸಹ ಆಗದು. ಅಂತಹ ಘಟನೆ ಮರುಕಳಿಸದ ಹಾಗೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
-ಕುಮಾರ್‌, ಸಿದ್ದಪುರ ನಿವಾಸಿ

* ಬಿ.ನಿಂಗಣ್ಣಕೋಟೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ