ಕ್ಷಯ ಪತ್ತೆಗೆ ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿ

Team Udayavani, Jul 11, 2019, 3:00 AM IST

ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಜುಲೈ 15 ರಿಂದ 27ರವರೆಗೆ ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಂಡಿದ್ದು, ನಗರಸಭೆ, ಪುರಸಭೆ, ಸ್ಲಂಬೋರ್ಡ್‌ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ-2019 ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ಷಯ ಸೋಂಕು ರೋಗವಾಗಿದ್ದು, ಸ್ಲಂಗಳಲ್ಲಿ ವಾಸಿಸುವ ಪೌರ ಕಾರ್ಮಿಕರು, ಗಾರ್ಮೆಂಟ್ಸ್‌ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬರುವ ಸಾಧ್ಯತೆ ಹೆಚ್ಚು , ಅಂತಹವರನ್ನು ಪರೀಕ್ಷಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಾಹಿತಿ ಫ‌ಲಕ: ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ಫ‌ಲಕಗಳಲ್ಲಿ ಕ್ಷಯರೋಗ ಹರಡುವ ಬಗ್ಗೆ ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ಫ‌ಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು. ಹಾಗಾದರೆ ಮಾತ್ರ 2025ರೊಳಗೆ ಕ್ಷಯರೋಗ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿರುವ ಸರ್ಕಾರದ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿ ಪಿ. ಮಾತನಾಡಿ, ಕ್ಷಯರೋಗವು ಒಂದು ಅಂಟು ರೋಗವಾಗಿದ್ದು, ಗ್ರಾಮೀಣ ಜನರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸುವುದು ತುಂಬಾ ಮುಖ್ಯವಾಗಿದೆ. ಭಾರತ ಸರ್ಕಾರದ ಆಶಯದಂತೆ 2025ರೊಳಗೆ ಸಂಪೂರ್ಣ ಕ್ಷಯರೋಗ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಆರೋಗ್ಯ ಇಲಾಖೆಯ ಜೊತೆ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದರು.

ಅರಿವು: ಜಿಲ್ಲೆಯಾದ್ಯಂತ ಜುಲೈ 15 ರಿಂದ 27ರವರೆಗೆ ಕ್ಷಯರೋಗದ ಪತ್ತೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು, ಕೆಲವು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಹಾಗೂ ಯಾವ ಭಾಗದಲ್ಲಿ ಹೆಚ್ಚು ಕ್ಷಯರೋಗ ಪ್ರಕರಣಗಳು ದಾಖಲಾಗಿದೆಯೋ ಅಂತಹ ಭಾಗಗಳಲ್ಲಿ ಮನೆ – ಮನೆಗೆ ತೆರಳಿ ಕ್ಷಯರೋಗ ಲಕ್ಷಣವುಳ್ಳ ವ್ಯಕ್ತಿಗಳನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸಲಾಗುವುದು ಮತ್ತು ಅರಿವು ಮೂಡಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌.ವೆಂಕಟೇಶ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜು, ಡಾ. ಜಯಂತ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಶಾಲೆಯಲ್ಲಿ ಪ್ರಾರ್ಥನೆ ವೇಳೆ ಅರಿವು ಮೂಡಿಸಿ: ಜಿಲ್ಲೆಯಾದ್ಯಂತ ಒಟ್ಟು 371 ಗಂಪನ್ನು ಗುರುತಿಸಲಾಗಿದೆ, ಒಟ್ಟು 1,19,978 ಮನೆಗಳಿಗೆ ಭೇಟಿ ನೀಡಲಿದ್ದು, 5,99,893 ಜನಸಂಖ್ಯೆಯಲ್ಲಿ ಕ್ಷಯರೋಗ ಪತ್ತೆ ಹಚ್ಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕರ್ತವ್ಯಕ್ಕೆ 1328 ತಂಡಗಳನ್ನು ಆಯ್ಕೆ ಮಾಡಿದ್ದು, 2670 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿ ಮಾಹಿತಿ ನೀಡಿದರು.

ಆಂದೋಲನದಲ್ಲಿ ಶಾಲೆಗಳ ಪ್ರಾರ್ಥನೆ ಸಮಯದಲ್ಲಿ ರೋಗದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು, ಅಂಗನವಾಡಿ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ರೋಗದ ಲಕ್ಷಣಗಳನ್ನು ತಿಳಿಸುವುದು, ಮೈಸೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನಗಳಲ್ಲಿ ಕ್ಷಯರೋಗದ ಅರಿವು ಮೂಡಿಸುವ ಮಾಹಿತಿ ಹಾಕುವುದು ಮತ್ತು ಸಾರಿಗೆ ಸಂಸ್ಥೆ ವತಿಯಿಂದ ಬಸ್‌ಗಳಲ್ಲಿ ಮಾಹಿತಿ ಫ‌ಲಕ ಅಳವಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ