ಹೆಣ್ಣುಮಕ್ಕಳ ಪೋಷಕರ ದಿಕ್ಕು ತಪ್ಪಿಸಿದ ಅರ್ಜಿ ವದಂತಿ!

Team Udayavani, Jul 12, 2019, 12:13 PM IST

ನಾಯಕನಹಟ್ಟಿ: ಒಂದು ಹೆಣ್ಣುಮಗು ಇರುವ ಮಗುವಿಗೆ ಎರಡು ಲಕ್ಷ ರೂ. ನೀಡಲಾಗುವುದು ಎಂದು ದಿಕ್ಕು ತಪ್ಪಿಸುತ್ತಿರುವ ಹಿಂದಿ ಭಾಷೆಯಲ್ಲಿರುವ ಅರ್ಜಿ ಫಾರಂ.

ನಾಯಕನಹಟ್ಟಿ: ಒಂದು ಹೆಣ್ಣುಮಗುವಿರುವ ಪೋಷಕರಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ಲಕ್ಷ ರೂ. ನೀಡುತ್ತದೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಸಾವಿರಾರು ಪೋಷಕರು ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಇಂತಹ ಯಾವುದೇ ಘೋಷಣೆ ಮಾಡಿರುವ ಕುರಿತು ಕೇಂದ್ರ ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ಒಂದು ಹೆಣ್ಣುಮಗು ಇರುವ ಪೋಷಕರ ಬ್ಯಾಂಕ್‌ ಖಾತೆಗೆ ನೇರವಾಗಿ ಎರಡು ಲಕ್ಷ ರೂ. ಜಮಾ ಮಾಡಲಿದೆ, 8 ರಿಂದ 32 ವರ್ಷದವರೆಗಿನವರಿಗೆ ಈ ಯೋಜನೆ ಅನ್ವಯವಾಗುತ್ತದೆ ಎನ್ನುವ ಆಧಾರ ರಹಿತ ವದಂತಿ ಚಳ್ಳಕೆರೆ ತಾಲೂಕಿನಲ್ಲಿ ಹರಿದಾಡುತ್ತಿದೆ. ನಾಯಕನಹಟ್ಟಿ, ಚಳ್ಳಕೆರೆ, ತಳಕು ಸೇರಿದಂತೆ ನಾನಾ ಪ್ರದೇಶಗಳಲ್ಲಿ ಪೋಷಕರು ಸಮೂಹ ಸನ್ನಿಯಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದನ್ನು ಪರೀಕ್ಷಿಸುವ ಗೋಜಿಗೆ ಹೋಗದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಅಂಚೆ ಕಚೇರಿ, ಶಾಲೆ, ಜೆರಾಕ್ಸ್‌ ಅಂಗಡಿಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಶಾಲೆಗಳಲ್ಲಿ ಮುಖ್ಯಶಿಕ್ಷಕರ ಮೇಲೆ ಕಾರ್ಯಭಾರದ ಒತ್ತಡ ಬೀಳುತ್ತಿದೆ.

ಶಾಲಾ ಮಾಹಿತಿ, ಗ್ರಾಪಂ ಅಥವಾ ಪಪಂ ದೃಢೀಕರಣ ಅರ್ಜಿ ನಮೂನೆ ಎಂಬ ಮೂರು ನಮೂನೆಗಳನ್ನು ಅರ್ಜಿ ಹೊಂದಿದೆ. ಒಂದು ನಮೂನೆಯನ್ನು ಸ್ಥಳೀಯ ಸಂಸ್ಥೆ, ಮತ್ತೂಂದು ನಮೂನೆಯನ್ನು ಮಗು ಓದುತ್ತಿರುವ ಶಾಲೆಯವರು ತುಂಬಿಸಬೇಕು ಎಂದು ಪೋಷಕರು ಓಡಾಟ ನಡೆಸುತ್ತಿದ್ದಾರೆ ಕೆಲವು ಕಿಡಿಗೇಡಿಗಳು ಜೆರಾಕ್ಸ್‌ ಅಂಗಡಿಗಳ ಮೂಲಕ ಇಂತಹ ನಕಲಿ ಅರ್ಜಿಗಳನ್ನು ಹರಿಬಿಟ್ಟಿದ್ದಾರೆ. ಇದರ ಹಿಂದೆ ಕಂಪ್ಯೂಟರ್‌ ಸೆಂಟರ್‌ಗಳು ಮತ್ತು ಜೆರಾಕ್ಸ್‌ ಅಂಗಡಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಅರ್ಜಿಗಳನ್ನು ರಕ್ಷಾ ಮಂತ್ರಾಲಯ, ಬಾಲವಿಕಾಸ ಮಂತ್ರಾಲಯ, ಶಕ್ತಿ ಭವನ, ನವದೆಹಲಿ ಈ ವಿಳಾಸಕ್ಕೆ ಕಳಿಸಲಾಗುತ್ತಿದೆ. ಇಂತಹ ನೂರಾರು ಅರ್ಜಿಗಳು ಅಂಚೆ ಕಚೇರಿ ಮೂಲಕ ಪ್ರತಿ ದಿನ ರವಾನೆಯಾಗುತ್ತಿವೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೋಸ್ಟ್‌ಮಾಸ್ಟರ್‌ಗಳು ರೋಸಿ ಹೋಗಿದ್ದಾರೆ. ಎರಡು ಲಕ್ಷದ ಆಸೆಗೆ ಅರ್ಜಿ ಫಾರಂ ತುಂಬಿಸಿ ನೂರಾರು ರೂ. ಗಳನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ಮನವರಿಕೆ ಮಾಡಿದರೂ ಪೋಷಕರು ನಂಬುವ ಸ್ಥಿತಿಯಲ್ಲಿಲ್ಲ.

ಶಿಕ್ಷಣ ಇಲಾಖೆಗೆ ಮಾಹಿತಿ ಇಲ್ಲ
ಒಂದು ಹೆಣ್ಣುಮಗುವನ್ನು ಹೊಂದಿರುವ ಪೋಷಕರು ಶಾಲೆಗಳಿಗೆ ಬಂದು ಅರ್ಜಿ ತುಂಬಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಅರ್ಜಿ ನಕಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ಯಾವುದೇ ಯೋಜನೆಗಳು ಸಂಬಂಧಿಸಿದ ಇಲಾಖೆಗಳ ಮೂಲಕವೇ ಜಾರಿಯಾಗುತ್ತವೆ. ಶಿಕ್ಷಣ ಇಲಾಖೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಯಾವುದೇ ಯೋಜನೆ ಕೇಂದ್ರ ಅಥವಾ ರಾಜ್ಯದಲ್ಲಿಲ್ಲ. ಈ ಬಗ್ಗೆ ಮುಖ್ಯಶಿಕ್ಷಕರು ಪೋಷಕರಿಗೆ ತಿಳಿ ಹೇಳಬೇಕು. ಈ ಬಗ್ಗೆ ತಾಲೂಕಿನ ಎಲ್ಲ ಮುಖ್ಯಶಿಕ್ಷಕರಿಗೆ ಪ್ರಕಟಣೆ ನೀಡಲಾಗಿದೆ. ಈ ಪ್ರಕಟಣೆಯನ್ನು ಎಲ್ಲ ಶಾಲೆಗಳ ನೋಟಿಸ್‌ ಬೋರ್ಡ್‌ಗೆ ಹಾಕುವಂತೆ ಸೂಚಿಸಲಾಗಿದೆ. ಇದರಿಂದ ಶಾಲಾ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್‌. ವೆಂಕಟೇಶಪ್ಪ ತಿಳಿಸಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ