ವಿಠ್ಠಲನ ಕಣ್ತುಂಬಿಕೊಂಡು ಹೊರಟ ಭಕ್ತರು

ತುಳಸಿ ಮಾಲೆ, ವಿಠ್ಠಲ ಫಲಕ ಖರೀದಿ ಜೋರು •ಬೆಂಡು-ಬೆತ್ತಾಸ್‌, ಬಡಂಗ ವ್ಯಾಪಾರ ಹೆಚ್ಚಳ

Team Udayavani, Jul 14, 2019, 9:52 AM IST

ಪಂಢರಪುರ: ವಾರಕರಿಗಳು ಹಾಗೂ ಭಕ್ತರು ಶನಿವಾರ ಚಂದ್ರಭಾಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದ್ವಾದಶ ವಿಠ್ಠಲನ ದರ್ಶನ ಪಡೆದರು.

ಜಿ.ಎಸ್‌. ಕಮತರ
ಪಂಡರಪುರ:
ವಿಠ್ಠಲ..ವಿಠ್ಠಲ ಎಂದು ಸ್ತುತಿಸುತ್ತ ಪಂಢರಪುರ ವಿಠ್ಠಲನಿಗೆ ಏಕಾದಶಿ ಉಪವಾಸ ವ್ರತಾಚರಣೆ ಮಾಡಿ ಭಕ್ತಿ ಪಾರಮ್ಯ ಮೆರೆದಿದ್ದ ವಾರಕರಿ ಭಕ್ತರು, ಶನಿವಾರ ಆಷಾಢ ದ್ವಾದಶ ದರ್ಶನ ಪಡೆದು ತವರಿನತ್ತ ಮುಖ ಮಾಡಿದರು.

ಏಕಾದಶಿಗೆ ಮುನ್ನ ಕೆಲ ದಿನಗಳಿಂದಲೇ ವಾರಕರಿ ಭಕ್ತರಿಂದ ತುಂಬಿ ತುಳುಕುತ್ತಿದ್ದ ಫಂಡರಪುರ ಶ್ರೀಕ್ಷೇತ್ರ ಶುಕ್ರವಾರ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಹಂತದಲ್ಲಿ ಭಕ್ತರ ಸಂಖ್ಯೆ 11ರಿಂದ 12 ಲಕ್ಷಕ್ಕೆ ಏರಿತ್ತು. ಏಕಾದಶಿ ಉಪವಾಸ ಹಾಗೂ ಚಂದ್ರಭಾಗಾ ನದಿಯಲ್ಲಿ ಪುಣ್ಯಸ್ನಾನ, ತಮ್ಮ ಆರಾಧ್ಯ ದೈವ ಪಂಢರಿನಾಥ ವಿಠ್ಠಲನ ದರ್ಶನ ಪಡೆದು, ಮಹಾ ರಥೋತ್ಸವದ ಮೆರವಣಿಗೆ ಕಣ್ತುಂಬಿಕೊಂಡು ಹರಕೆ ತೀರಿಸಿ ಕೃತಾರ್ಥತೆ ಪಡೆದು ಶ್ರೀಕ್ಷೇತ್ರದಲ್ಲೇ ತಂಗಿದ್ದರು. ಏಕಾದಶಿ ದಿನ ಇಡಿ ರಾತ್ರಿಯೂ ಪಂಢರಪುರ ಶ್ರೀಕ್ಷೇತ್ರದ ತುಂಬೆಲ್ಲ ವಾರಕರಿ ಭಕ್ತರು ದಂಡು ದಂಡಾಗಿ ಸುತ್ತುತ್ತಿದ್ದ ಕಾರಣ ಪಂಢರಪುರ ರಾತ್ರಿ ಕೂಡ ಎದ್ದು ಕುಳಿತಿತ್ತು.

ದ್ವಾದಶ ದಿನವಾದ ಶನಿವಾರ ಸೂರ್ಯೋದಯಕ್ಕೆ ಮುನ್ನವೇ ಎದ್ದು ತಮ್ಮೊಂದಿಗೆ ಬಂದಿದ್ದ ಎಲ್ಲ ವಾರಕರಿಗಳು ಭಕ್ತರೊಂದಿಗೆ ಮತ್ತೇ ಚಂದ್ರಭಾಗಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿದರು. ಬಳಿಕ ವಿಠ್ಠಲ.. ವಿಠ್ಠಲ.. ನಾಮ ಸ್ಮರಣೆಯೊಂದಿಗೆ ತಮ್ಮ ದೈವ ಪಂಢರಿನಾಥನ ಮಂದಿರಕ್ಕೆ ತೆರಳಿ ವಿಠಲ-ರುಕ್ಮಿಣಿ ದರ್ಶನ ಪಡೆದರು.

ಬಳಿಕ ತಮ್ಮ ಕುಟುಂಬದವರಿಗೆ, ಆಪ್ತೇಷ್ಟರಿಗೆ, ಸ್ನೇಹಿತರಿಗೆ ಪಂಢರಿನಾಥನ ವಿವಿಧ ಚಿತ್ರ, ಫೋಟೋ ಫಲಕ, ಪ್ರಸಾದ, ತುಳಸಿ ಮಾಲೆ, ವಿಠ್ಠಲನ ಲಾಕೆಟ್, ವಿಠ್ಠಲನ ವಿಶೇಷತೆ ಎನಿಸಿದ ನಾಮಗಳ ಧಾರಣೆಗೆ ಗಂಧ, ಕರಿಗಳನ್ನು ಹಾಗೂ ಕೈದಾರ, ಕಸಿದಾರ, ಉಡದಾರ ಹೀಗೆ ದೇವರ ಪ್ರಸಾದದ ಕಾಣಿಕೆ ನೀಡಲು ಖರೀದಿಯಲ್ಲಿ ತೊಡಗಿದ್ದರು. ಅಲ್ಲದೇ ದಿಂಡಿಗಳಲ್ಲಿ ಭಕ್ತರು ಭಜನೆ ಮಾಡಲು ತಾಳಗಳು, ಡೋಲುಗಳು, ತಪ್ಪಡಿಗಳಂಥ ಭಜನಾ ವಾದ್ಯಗಳ ಖರೀದಿಯಲ್ಲೂ ತೊಡಗಿದ್ದರು.

ಮಹಿಳೆಯರು ಬಳೆ ತೊಡಿಸಿಕೊಳ್ಳುವ, ತಮ್ಮ ಕುಟುಂಬದ ಸದಸ್ಯರಿಗೆ ವಿವಿಧ ಬಗೆಯ ಹಾಗೂ ಶೈಲಿಯ ಬಳೆಗಳನ್ನು ಕೊಳ್ಳುವಲ್ಲಿ ಮುಳುಗಿದ್ದರು. ಮತ್ತೂಂದೆಡೆ ಮಕ್ಕಳು, ಯುವತಿಯರಿಗೆ ಅಚ್ಚುಮೆಚ್ಚಿನ ಮುತ್ತಿನ ಸರಗಳು, ವಿಠ್ಠಲ-ರುಕ್ಮಿಣಿ ಲಾಕೆಟ್‌ಗಳನ್ನು ಕೊಳ್ಳುವುವುದು ಸಾಮಾನ್ಯವಾಗಿತ್ತು. ವಿಭೂತಿ, ಕುಂಕುಮ, ಭಂಡಾರ ಹೀಗೆ ಮಹಿಳೆಯರ ಆಗತ್ಯದ ವಸ್ತುಗಳ ಮಾರಾಟವೂ ಜೋರಾಗಿತ್ತು.

ವಾರಕರಿ ಭಕ್ತರ ಬಹು ಬೇಡಿಕೆಯ ಫಳಹಾರ ಪೂರೈಕೆಗೆ ಬೀದಿ ಬದಿಯಲ್ಲಿ ಎಲ್ಲೆಡೆ ಫಳಹಾರ ವ್ಯಾಪಾರಿ ಮಳಿಗೆಗಳು ತಲೆ ಎತ್ತಿದ್ದವು. ಬೆಂಡು, ಬೆತ್ತಾಸ, ಚುರುಮರಿ, ಬಡಂಗ ಸೇರಿದಂತೆ ವಿವಿಧ ಬಗೆಯ ಖಾದ್ಯಪ್ರಸಾದ ಖರೀದಿಯಲ್ಲಿ ತೊಡಗಿದ್ದರು.

ವಾರ-ಎರಡು ವಾರಗಳಿಂದ ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ಬಂದಿದ್ದ ವಾರಕರಿ ಭಕ್ತರು, ದ್ವಾದಶ ದಿನ ಊರಿಗೆ ಮರಳಲು ವಾಹನ ಏರಿದ್ದರು. ಕೆಲವು ದಿಂಡಿ ಯಾತ್ರಿಗಳು ತಮ್ಮೊಂದಿಗೆ ಸರಕು ಹೊತ್ತು ತಂದಿದ್ದ ವಾಹನದಲ್ಲೇ ತವರಿಗೆ ಮರಳಿದರು. ಪಂಢರಪುರ ಏಕಾದಶಿ ಜಾತ್ರೆಯ ಭಕ್ತರ ಅನುಕೂಲಕ್ಕಾಗಿ ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಿಂದ ನೂರಾರು ಬಸ್‌ಗಳು ವಿಶೇಷ ಸಾರಿಗೆ ಕಲ್ಪಿಸಿದ್ದವು. ವಾಹನ ಸೌಲಭ್ಯ ಇಲ್ಲದೇ ಕೇವಲ ಪಾದಯಾತ್ರೆಯಲ್ಲಿ ಬಂದಿದ್ದ ವಾರಕರಿಗಳು ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳು ಜಾತ್ರೆಯ ನಿಮಿತ್ತ ಓಡಿಸುತ್ತಿರುವ ಜಾತ್ರಾ ವಿಶೇಷ ಬಸ್‌ಗಳಲ್ಲಿ ತವರಿನತ್ತ ವಿಠ್ಠಲ..ವಿಠ್ಠಲ.. ಎನ್ನುತ್ತ ಪ್ರಯಾಣ ಬೆಳೆಸಲು ನೆರವಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ