ಭಕ್ತನ ಮನೆಗೆ ಹೋಗಿ ದರ್ಶನ!

ಪಾದಯಾತ್ರೆಯಲ್ಲಿ ಭಕ್ತರು ಬರೋದಕ್ಕೆ ವಾರಕರಿ ಪರಂಪರೆ ಎನ್ನುತ್ತಾರೆ

Team Udayavani, Jul 13, 2019, 12:53 PM IST

ಪಂಢರಪುರ: ವಿಠuಲ ದೇವಸ್ಥಾನದ ಬಳಿ ನೆರೆದ ಭಕ್ತ ಸಮೂಹ.

ಪಂಢರಪುರ: ಮಹಾರಾಷ್ಟ್ರದ ಪಂಢರಪುರ ಶ್ರೀ ಕ್ಷೇತ್ರದಲ್ಲಿ ಆಷಾಢ ಏಕಾದಶಿ ದಿನವಾದ ಶುಕ್ರವಾರ ಜರುಗಿದ ಪಂಢರಿನಾಥ ವಿಠ್ಠಲನ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಲಕ್ಷ ಲಕ್ಷ ಭಕ್ತರು ವಿಠ್ಠಲ ನಾಮಸ್ಮರಣೆ ಜೊತೆಗೆ ವಿಠ್ಠಲನ ಪರಮ ಭಕ್ತರಾದ ಸಂತ ಜ್ಞಾನೇಶ್ವರರ ಪರಂಪರೆಯಂತೆ ಮಾವುಲಿ ಎಂದು ಭಜಿಸುತ್ತ ಭಕ್ತಿ ಸಮರ್ಪಿಸುತ್ತಿದ್ದರು.

ಹೂ-ಹಣ್ಣು ಕಾಯಿಗಳ ಬೇಡುವವನಲ್ಲ: ವಿಠ್ಠಲನಿಗೆ ಪರಮ ಭಕ್ಷಗಳ ಪ್ರಸಾದ ಬೇಕಿಲ್ಲ, ಹೂ-ಹಣ್ಣು ಕಾಯಿಗಳ ಬೇಡುವವನಲ್ಲ. ಬದಲಾಗಿ ಆಷಾಢ ಏಕಾದಶಿ ದಿನದ ಲಕ್ಷಾಂತರ ಭಕ್ತರು ತನ್ನ ದರ್ಶನ ಪಡೆದು, ಮಹಾರಥೋತ್ಸವ ವೈಭವ ಕಣ್ತುಂಬಿಕೊಂಡರೆ, ನಂತರ ಬರುವ ಏಕಾದಶಿ ದಿನದಂದು ವಿಠ್ಠಲ ಪರಮ ಭಕ್ತನಾದ ದೀನನೊಬ್ಬನ ಮನೆಗೆ ಅರಣ ಎಂಬ ಕುಗ್ರಾಮದಲ್ಲಿರುವ ತನ್ನ ದೀನ ಭಕ್ತ ಸಾವಂತ ಮಾಳಿ ಮನೆಗೆ ಖುದ್ದು ತಾನೇ ಹೋಗಿ ದರ್ಶನ ನೀಡುತ್ತಾನೆ. ಈ ಮೂಲಕ ಇತರೆ ದೈವಗಳಿಗಿಂತ ಭಿನ್ನ ಹಾಗೂ ಬಯಕೆ ಇಲ್ಲದ ಸರಳ ದೇವತೆ ಎನಿಸಿದ್ದು, ಕೋಟಿ ಕೋಟಿ ಭಕ್ತರನ್ನು ಸಂಪಾದಿಸಲು ಕಾರಣವಾಗಿದೆ. ಸಾಮಾನ್ಯ ದೀನ ಭಕ್ತ ನೆಲೆಸಿರುವ ಪುಟ್ಟ ಗ್ರಾಮ ಕೂಡ ಶ್ರೀಕ್ಷೇತ್ರ ಎನಿಸಿದೆ. ಇದರಿಂದಾಗಿಯೇ ತಿರುಪತಿ ತಿಮ್ಮಪ್ಪ ಸಿರಿವಂತರ ದೇವತೆ ಎನಿಸಿದ್ದರೆ, ಪಂಢರಪುರದ ವಿಠ್ಠಲ ದೀನರ ದೇವತೆ ಎನಿಸಿದ್ದಾನೆ. ಆಷಾಢ ಏಕಾದಶಿ ನಿಮಿತ್ತ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಪಂಢರಪುರ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಬಂದು ಶ್ರೀಕ್ಷೇತ್ರದ ಪಕ್ಕದಲ್ಲಿ ಹರಿಯುತ್ತಿದ್ದ ಚಂದ್ರಭಾಗಾ (ಭೀಮಾ ನದಿ) ನದಿಯಲ್ಲಿ ದಿಂಡಿ, ವಿಠ್ಠಲ ಮೂರ್ತಿ- ಭಾವಚಿತ್ರ ಹಾಗೂ ಪಲ್ಲಕ್ಕಿ ಸಹಿತ ಪುಣ್ಯ ಸ್ನಾನ ಮಾಡುತ್ತಾರೆ. ಹೀಗೆ ಪಾದಯಾತ್ರೆಯಲ್ಲಿ ಬರುವ ಭಕ್ತರನ್ನು ವಾರಕರಿ ಪರಂಪರೆ ಎನ್ನುತ್ತಾರೆ. ವಾರಕರಿ ಪರಂಪರೆಯೊಂದಿಗೆ ದಿಂಡಿ ಹೊತ್ತು ಬರುವ ಭಕ್ತರಿಗೆ ಯಾವ ಜಾತಿಯ ಹಂಗೂ ಇರುವುದಿಲ್ಲ ಎಂಬುದು ಗಮನೀಯ.

ದಿಂಡಿ-ಮಹಾಮಾತೆ ಮಾವುಲಿ: ಪಂಢರಪುರ ಶ್ರೀ ಕ್ಷೇತ್ರದ್ದು ವಿಶಿಷ್ಟ ಪರಂಪರೆ. ಕರ್ನಾಟಕದಲ್ಲಿ ಹರಿದಾಸ ಪರಂಪರೆಯಂತೆ ಮಹಾರಾಷ್ಟ್ರದ ಪಂಢರೀನಾಥ ವಿಠuಲನ ಪರಮ ಭಕ್ತರು ಹಾಗೂ ಅನುಯಾಯಿಗಳೇ ವಿಶಿಷ್ಟ ಪರಂಪರೆ ಹುಟ್ಟು ಹಾಕಿದ್ದಾರೆ. ದಾಸರು ಶ್ರೀಹರಿಯನ್ನು ಸ್ತುತಿಸುವಂತೆ ಸಂತ ಜ್ಞಾನೇಶ್ವರ ಹಾಗೂ ಅವರ ಸಹೋದರ-ಸಹೋದರಿಯರು ಅಭಂಗಗಳ ಮೂಲಕ ವಿಠ್ಠಲನನ್ನು ಸ್ಮರಿಸುತ್ತಾರೆ. ಆಳಂದಿ ಕ್ಷೇತ್ರದ ಜ್ಞಾನೇಶ್ವರರ, ದೇಹು ಕ್ಷೇತ್ರ ಸಂತ ತುಕಾರಾಮರ, ಪೈಠಾಣದ ಸಂತ ಏಕನಾಥ, ಶೇಗಾಂವ ಕ್ಷೇತ್ರದ ಸಂತ ಗಣಪತಿ, ಮುಕ್ತಾನಗರದ ಸಂತ ಮುಕ್ತಾಬಾಯಿ ಸೇರಿದಂತೆ ಸಂತ ಜ್ಞಾನೇಶ್ವರ ಪರಿವಾರ ಹಾಗೂ ಇತರೆ ನೂರಾರು ಸಂತರ ಅಭಂಗಗಳ ಮೂಲಕ ವಿಠ್ಠಲನನ್ನು ಹಾಡಿ ಹೊಗಳಿದ್ದಾರೆ.

ಸಂತ ಜ್ಞಾನೇಶ್ವರರು ಆಳಂದಿ ಕ್ಷೇತ್ರದಿಂದ ಪಾದಯಾತ್ರೆ ಮೂಲಕ ದಿಂಡಿಯೊಂದಿಗೆ ವಿಠuಲ ನಾಮ ಸ್ಮರಣೆಯೊಂದಿಗೆ ಏಕಾದಶಿ ದಿನವೇ ತಲುಪಿ, ಅಂದು ಇಡೀ ದಿನ ಉಪವಾಸ ಮಾಡಿ ತಮ್ಮ ಹರಕೆ ತೀರಿಸಿದ್ದರಿಂದ ಏಕಾದಶಿ ದಿನವೇ ಪಂಢರಿನಾಥ ವಿಠ್ಠಲನ ಮಹಾರಥೋತ್ಸವ ನಡೆಯುತ್ತದೆ. ಆಗ ಎಲ್ಲ ಸಂತಗಣ ಹಾಗೂ ಜ್ಞಾನೇಶ್ವರರ ಆನುಯಾಯಿಗಳು ದಿಂಡಿಗಳೊಂದಿಗೆ ಬಂದಿದ್ದರು. ಈ ಹಂತದಲ್ಲಿ ತಮ್ಮ ದಂಡಿನ ನಾಯಕ ಸಂತ ಜ್ಞಾನೇಶ್ವರರು ಭಕ್ತರು ಹಾಗೂ ಅನುಯಾಯಿಗಳ ಪಾಲಿಗೆ ಮಹಾ ತಾಯಿಯಂತೆ ಕಂಡರು. ಹೀಗಾಗಿ ಇಡೀ ಅನುಯಾಯಿಗಳು ಹಾಗೂ ಭಕ್ತರು ಮಾವುಲಿ-ಮಾಹುಲಿ ಎಂದು ಕರೆಯುವ ಮೂಲಕ ಜ್ಞಾನೇಶ್ವರ ಸಂತರಿಗೆ ತಾಯಿಯ ಸ್ಥಾನ ನೀಡಿದ್ದರು. ಪರಿಣಾಮ ಈ ಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಯಾರೂ ಯಾರ ಹೆಸರನ್ನು ಕರೆಯದೇ ಪರಸ್ಪರರು ಮಾವುಲಿ ಎಂದೇ ಸಂಬೋಧಿಸುತ್ತಾ ಎಲ್ಲರಲ್ಲೂ ಸಂತ ಜ್ಞಾನೇಶ್ವರರ ಮೂಲಕ ಮಹಾತಾಯಿಯನ್ನು ಕಾಣುತ್ತಾರೆ.

12 ಕುಲದವರಿಂದ ಮಹಾರಥ ಎಳೆಯುವ ಬಾಬು: ಈ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುವ ವಾರಕರಿ ಪರಂಪರೆ ಭಕ್ತರು ಕೂಡ ದಿಂಡಿಯೊಂದಿಗೆ ಪಾದಯಾತ್ರೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಿ, ಏಕಾದಶಿ ದಿನವೇ ತಮ್ಮ ಹರಕೆ ತೀರಿಸುತ್ತಾರೆ. ಮಾಹೇಶ್ವರಿ ಧರ್ಮಶಾಲಾದಿಂದ ಆಗಮಿಸಿದ ಮಹಾರಥೋತ್ಸವ ಮರಳಿ ಮಾಹೇಶ್ವರಿ ಧರ್ಮಶಾಲಾ ಪ್ರದೇಶಕ್ಕೆ ತೆರಳಿ ಮುಕ್ತಾಯ ಕಾಣುತ್ತದೆ. ಗಮನೀಯ ಅಂಶ ಎಂದರೆ ಈ ರಥವನ್ನು ಹಗ್ಗದ ಮೂಲಕ ಎಳೆಯುವಲ್ಲಿ ಎಲ್ಲ ಜಾತಿ-ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗುತ್ತದೆ. ವರ್ಣಾಶ್ರಮದ ಮೂಲಕ ಗುರುತಿಸಲಾಗಿರುವ ಚಾತುವರ್ಣಗಳು ಹಾಗೂ ಅದರ ಉಪ ಜಾತಿಗಳ ಹರಿಜನ, ಅಂಬಿಗ, ಭೋವಿ, ನಾಯಕ, ಕ್ಷತ್ರೀಯ, ಮರಾಠಾ, ಮಾಳಿ, ಲಿಂಗಾಯತ, ವೈಶ್ಯ ಸೇರಿದಂತೆ ವಿವಿಧ 12 ಜಾತಿಗಳ ಜನರು ಹಗ್ಗ ಎಳೆಯುವ ಬಾಬು ಹೊಂದಿದ್ದಾರೆ. ಈ ಸಮುದಾಯಗಳ ಜನರಿಂದಲೇ ರಥದ ಹಗ್ಗ ಎಳೆಯಲ್ಪಡುವುದು ಇಲ್ಲಿನ ಮಹಾರಥೋತ್ಸವದ ವಿಶೇಷ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ