ತೆರವುಗೊಳಿಸಿದ ಶಾಲೆಯಲ್ಲೇ ಮಕ್ಕಳ ಕಲಿಕೆ

Team Udayavani, Jun 5, 2018, 12:45 PM IST

ರಾಯಚೂರು: ಹೊರಗಿನಿಂದ ನೋಡಿದರೆ ನಿಮಗಿದು ಶಾಲೆ ಎಂಬ ಭಾವನೆ ಕಿಂಚಿತ್ತೂ ಮೂಡುವುದಿಲ್ಲ. ಆದರೂ ಇದು ಶಾಲೆಯೇ. ನೇತಾಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ ಇದು.

ಚಿತ್ರದಲ್ಲಿ ನಿಮಗೆ ಕಾಣುತ್ತಿರುವ ಭಾಗ ಶಾಲೆಯ ಒಂದು ಮುಖ. ಎರಡು ವರ್ಷಗಳ ಹಿಂದೆ ನಗರಸಭೆಯವರು ರಸ್ತೆ ಅಗಲೀಕರಣ ಮಾಡಬೇಕು. ನಿಮ್ಮ ಶಾಲೆಯ ಎರಡು ಕೋಣೆಗಳನ್ನು ಕೂಡ ತೆರವು ಮಾಡಬೇಕು. ನಂತರ ನಾವೇ ನಿರ್ಮಿಸಿಕೊಡುತ್ತೇವೆ ಎಂಬ ಪ್ರಸ್ತಾವನೆ ಇಟ್ಟಾಗ, ವಿಧಿ ಇಲ್ಲದೇ ಶಾಲೆ ಮುಖ್ಯ ಶಿಕ್ಷಕರು ಒಪ್ಪಿಗೆ ಸೂಚಿಸಿದ್ದರು. ಇದೇ ಕಟ್ಟಡ ಪ್ರಭಾವಿ ರಾಜಕಾರಣಿಯೋ, ಉದ್ಯಮಿಗಳದ್ದಾಗಿದ್ದರೆ ನಗರಸಭೆ ಅಷ್ಟು ಸುಲಭಕ್ಕೆ ತೆರವು ಮಾಡುತ್ತಿತ್ತೋ ಇಲ್ಲವೋ? ಆದರೆ, ಸರ್ಕಾರಿ ಶಾಲೆ ಎಂದರೆ ಮುಲಾಜಿಲ್ಲದೇ ತೆರವು ಮಾಡಿದೆ. 

ಆಗಿದ್ದಾಯಿತು ಹೊಸ ಕಟ್ಟಡಗಳನ್ನಾದರೂ ಕಟ್ಟಿಕೊಡಿ ಎಂದರೆ ನಗರಸಭೆಯವರು ಹೊಸ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಬೇಕಿದ್ದರೆ ಗೋಡೆ ನಿರ್ಮಿಸಿ ದುರಸ್ತಿ ಮಾಡಿಕೊಡುತ್ತೇವೆ ಎಂದಿದ್ದಾರೆ. ಆದರೆ, ಮಕ್ಕಳ ಜೀವದ ಪ್ರಶ್ನೆ. ಗುಣಮಟ್ಟದ ಕೆಲಸ ಮಾಡಿಕೊಡಿ ಎಂದು ಮುಖ್ಯಶಿಕ್ಷಕರು ಪಟ್ಟು ಹಿಡಿದಾಗ ನೀವು ಸರ್ಕಾರಕ್ಕೆ ಒತ್ತಾಯಿಸಿ ಎಂದು ನಗರಸಭೆಯವರು ಕೈತೊಳೆದುಕೊಂಡಿದ್ದಾರೆ. 

ಅಲ್ಲಿಂದ ಶುರುವಾದ ರಗಳೆ ಇಂದಿಗೂ ಮುಗಿದಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿ, ಶಾಸಕರವರೆಗೂ ದೂರು ಸಲ್ಲಿಸಿ ಮುಖ್ಯಶಿಕ್ಷಕರು ಹೈರಾಣಾಗಿದ್ದಾರೆ. ಆದರೆ, ಇನ್ನೂ ಕಟ್ಟಡ ನಿರ್ಮಾಣ ಮಾತ್ರ ಶುರುವಾಗಿಲ್ಲ.

14 ಲಕ್ಷ ರೂ. ಬಿಡುಗಡೆ: ಎರಡು ಕೋಣೆಗಳ ನಿರ್ಮಾಣಕ್ಕೆ ಈಗಾಗಲೇ 14 ಲಕ್ಷ ರೂ. ಬಿಡುಗಡೆಯಾಗಿದ್ದು, ಸಂಸ್ಥೆಯೊಂದಕ್ಕೆ ಕಾಮಗಾರಿ ವಹಿಸಲಾಗಿದೆ ಎಂಬ ಮಾಹಿತಿ ಇದೆ. ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ ಎಂದು ಅಧಿ ಕಾರಿಗಳು ತಿಳಿಸಿದ್ದರು. ಅಷ್ಟರಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದರಿಂದ ಕಾಮಗಾರಿ ಮತ್ತೆ ನನೆಗುದಿಗೆ ಬಿದ್ದಿತು. ಆದರೆ, ಚುನಾವಣೆ ಮುಗಿದು 20 ದಿನ ಕಳೆದರೂ ಈವರೆಗೆ ಈ ಕುರಿತು ಯಾರೂ ಕ್ರಮ ಕೈಗೊಂಡಿಲ್ಲ.

ಅಪಾಯದಲ್ಲಿ ಮಕ್ಕಳು: ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಬೋಧನೆ ಮಾಡಲಾಗುತ್ತಿದೆ. 100ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಇದು ಎರಡಂತಸ್ತಿನ ಕಟ್ಟಡವಾಗಿದ್ದು, ಮೇಲೆ ಕಚೇರಿ ಹಾಗೂ ಹಿರಿಯ ತರಗತಿ ಮಕ್ಕಳಿಗೆ, ಕೆಳಗೆ ಕಿರಿಯ ತರಗತಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿತ್ತು. ಒಂದು ಭಾಗದಿಂದ ಎರಡು ಕೋಣೆಗಳನ್ನು ತೆರವುಗೊಳಿಸಿದ್ದರಿಂದ ಮೇಲಿನ ಒಂದು ಕೋಣೆ ಕೂಡ ತೆರವಾಗಿದೆ. ಇದರಿಂದ ಸಣ್ಣ ಮಕ್ಕಳನ್ನು ಕೂಡ ಮೇಲೆಯೇ ಕೂಡಿಸಿ ಪಾಠ ಮಾಡಲಾಗುತ್ತಿದೆ. ಅಲ್ಲದೇ, ಮೇಲಕ್ಕೇರಲು ಇರುವ ಮೆಟ್ಟಿಲುಗಳು ಕೂಡ ಶಿಥಿಲಗೊಂಡಿವೆ. ಊಟಕ್ಕೆ
ಬಿಟ್ಟಾಗ, ಆಟದ ಸಮಯದ ವೇಳೆ ಮಕ್ಕಳು ಮೇಲಿಂದ ಬಿದ್ದು ಅನಾಹುತ ಸಂಭವಿಸಿದರೆ ಏನುಗತಿ ಎಂಬುದು ಪಾಲಕರ ಆತಂಕ.

ಆಟದ ಮೈದಾನವಿಲ್ಲ: ನಗರದ ಬಹುತೇಕ ಶಾಲೆಗಳಂತೆ ಇಲ್ಲೂ ಮೈದಾನವಿಲ್ಲ. ಶಾಲೆ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು, ಎರಡು ಕೋಣೆಗಳು ಕೂಡ ತೆರವಾಗಿವೆ. ಇದರಿಂದ ಇರುವ ಚಿಕ್ಕ ಸ್ಥಳದಲ್ಲೇ ಬಿಸಿಯೂಟ ಮತ್ತು ಆಟ ಆಡಬೇಕಿದೆ. ಶಾಲೆಯಲ್ಲಿ 100 ಮಕ್ಕಳಿದ್ದು, ಮುಖ್ಯಶಿಕ್ಷಕರು ಸೇರಿ ಕೇವಲ ನಾಲ್ವರು ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕರು ಸದಾ ಕಚೇರಿ ಕೆಲಸಗಳಲ್ಲಿ ತಲ್ಲೀನರಾಗಿದ್ದರೆ, ಉಳಿದ ಶಿಕ್ಷಕರು ಒಂದೇ ಕೋಣೆಯಲ್ಲಿ ಎರಡೂಮೂರು ತರಗತಿಗಳ ಮಕ್ಕಳನ್ನು ಕೂಡಿಸಿ ಬೋಧಿಸುವಂತಾಗಿದೆ. ಇಲಾಖೆ ಅತಿಥಿ ಶಿಕ್ಷಕರನ್ನು ನೀಡುತ್ತೇವೆ ಎನ್ನುತ್ತಿದೆಯಾದರೂ ಈವರೆಗೂ ಕ್ರಮ ಕೈಗೊಂಡಿಲ್ಲ.

ನಗರದ ಪ್ರಗತಿಗೆ ರಸ್ತೆ ವಿಸ್ತರಣೆ ಎಷ್ಟು ಮುಖ್ಯವೋ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಕೂಡ ಅಷ್ಟೇ ಮುಖ್ಯ. ರಸ್ತೆಗಾಗಿ ಶಾಲೆಯನ್ನೇ ತೆರವುಗೊಳಿಸಿದ ಜಿಲ್ಲಾಡಳಿತ, ಮಕ್ಕಳ ವ್ಯಾಸಂಗಕ್ಕಾಗಿ ಕಟ್ಟಡ ನಿರ್ಮಿಸಲು ಮೀನಮೇಷ ಎಣಿಸುವುದು ಎಷ್ಟು ಸರಿ. ಇನ್ನಾದರೂ ತ್ವರಿತಗತಿಯಲ್ಲಿ ಕಟ್ಟಡ ನಿರ್ಮಿಸಿ ಮಕ್ಕಳ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿ ಎಂಬುದು ಸಾರ್ವಜನಿಕರ ಒತ್ತಾಯ

ನಮ್ಮ ಶಾಲೆಯ ಎರಡು ಕೋಣೆಗಳನ್ನು ತೆರವು ಮಾಡಿದ್ದರಿಂದ ಮಕ್ಕಳ ಕಲಿಕೆಗೆ ಸಾಕಷ್ಟು ಸಮಸ್ಯೆಯಾಗಿದೆ. ಹೊಸ
ಕಟ್ಟಡ ಕಟ್ಟಿಸಿಕೊಡುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. 14 ಲಕ್ಷ ರೂ. ಬಿಡುಗಡೆಯಾಗಿದೆ ಶೀಘ್ರದಲ್ಲೇ ಕಟ್ಟಡ ನಿರ್ಮಿಸುವುದಾಗಿ ಕಳೆದ ವರ್ಷವೇ ಹೇಳಿದ್ದರು. ಆದರೆ, ಈವರೆಗೂ ಕಾಮಗಾರಿ ಆರಂಭಿಸಿಲ್ಲ.
 ಮಾಧವಾಚಾರ್ಯ, ಮುಖ್ಯಶಿಕ್ಷಕ

ಚುನಾವಣೆ ವೇಳೆ ಮತಗಟ್ಟೆ ನಿರ್ಮಾಣಕ್ಕೆ ತೆರಳಿದಾಗ ನೇತಾಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ ಗಮನಕ್ಕೆ ಬಂದಿದೆ. ಆದರೆ, ತೆರವು ಮಾಡುವಾಗ ಶಾಲಾ ಸಿಬ್ಬಂದಿ ನಗರಸಭೆ ಅಧಿಕಾರಿಗಳಿಂದ ಯಾವುದೇ ಲಿಖೀತ ದಾಖಲೆ ಪಡೆದಿಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಶೀಘ್ರದಲ್ಲೇ ಮುಂದಿನ ಕ್ರಮ
ಕೈಗೊಳ್ಳಲಾಗುವುದು. 
 ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಯಚೂರು: ವ್ಯಂಗ್ಯಚಿತ್ರಗಳು ಅಕ್ಷರಗಳಿಗಿಂತ ಪ್ರಭಾವಶಾಲಿ. ಸಾವಿರಾರು ಪದಗಳು ಹೇಳುವ ವಿಚಾರವನ್ನು ಒಂದು ವ್ಯಂಗ್ಯಚಿತ್ರ ಪರಿಣಾಮಕಾರಿಯಾಗಿ ಹೇಳಬಲ್ಲದು ಎಂದು...

  • ನಾರಾಯಣಪುರ: ಮಕ್ಕಳ ಹಕ್ಕುಗಳ ರಕ್ಷಣೆ ದೃಷ್ಟಿಕೋನದಿಂದ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಗ್ರಾಪಂ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ಹಕ್ಕುಗಳ...

  • ಮಾನ್ವಿ: ಭಾರತೀಯ ಪರಂಪರೆಯಲ್ಲಿ ಸಾಹಿತ್ಯಕ್ಕೆ ಉನ್ನತ ಸ್ಥಾನ ನೀಡಲಾಗಿದೆ. ಎಲ್ಲ ಸಾಹಿತ್ಯದ ತಾಯಿ ಬೇರು ಜಾನಪದ ಸಾಹಿತ್ಯವಾಗಿದೆ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌...

  • ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿಗೆ 2019 ಡಿಸೆಂಬರ್‌ 1ರಿಂದ 2020ರ ಮಾರ್ಚ್‌ 20ರ ವರೆಗೆ ವಾರಾಬಂದಿ ಪದ್ಧತಿ ಅನುಸರಿಸಿ ಎಲ್ಲ ಕಾಲುವೆಗಳಿಗೆ ನೀರು...

  • ಮುದಗಲ್ಲ: 2016-17ನೇ ಸಾಲಿನ ಪಿಎಂಜಿಎಸ್‌ವೈ ಯಡಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಛತ್ತರ ರಾಮಜಿನಾಯ್ಕ ತಾಂಡಾದಿಂದ ಹಡಗಲಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಗುತ್ತಿಗೆ...

ಹೊಸ ಸೇರ್ಪಡೆ