ಸ್ಮಶಾನಕ್ಕೆ ಸ್ಥಳವಿಲ್ಲದ ಊರಲ್ಲಿ ಸಿಎಂ ವಾಸ್ತವ್ಯ!

•ನಿರೀಕ್ಷೆಗಣ್ಣಲ್ಲಿ ಕಾದು ಕುಳಿತ ಕರೆಗುಡ್ಡ ಗ್ರಾಮಸ್ಥರು •ಬಯಲು ಶೌಚ ಮುಕ್ತವಾಗಿಲ್ಲ ಈ ಗ್ರಾಮ •ಸುಣ್ಣ-ಬಣ್ಣ ಕಂಡ ಸರ್ಕಾರಿ ಶಾಲೆ

Team Udayavani, Jun 25, 2019, 9:17 AM IST

ಮಾನ್ವಿ: ಕರೇಗುಡ್ಡ ಗ್ರಾಮದಲ್ಲಿ ಸಿಎಂ ಕಾರ್ಯಕ್ರಮಕ್ಕೆ ಕೈಗೊಂಡ ಸಿದ್ಧತೆ ಪರಿಶೀಲಿಸಿದ ಸಚಿವ ವೆಂಕಟರಾವ್‌ ನಾಡಗೌಡ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ.

ರಾಯಚೂರು: ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಈ ಬಾರಿ ಮಾನ್ವಿ ಕ್ಷೇತ್ರದ ಕರೇಗುಡ್ಡ ಆಯ್ಕೆಯಾಗಿದೆ. ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಈ ಗ್ರಾಮದಲ್ಲಿ ಮುಖ್ಯವಾಗಿ ಶವ ಸಂಸ್ಕಾರಕ್ಕೂ ಸೂಕ್ತ ಸ್ಥಳವಿಲ್ಲದ ಸ್ಥಿತಿ ಇದೆ.

ನಕ್ಕುಂದಿ ಗ್ರಾಪಂ ವ್ಯಾಪ್ತಿಯ ಈ ಗ್ರಾಮ 1200 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಊರಿಗೆ ಒಂದು ಕಿ.ಮೀ. ದೂರದಲ್ಲಿರುವ ಹಳ್ಳದ ದಂಡೆಯಲ್ಲಿಯೇ ಶವ ಸಂಸ್ಕಾರ ಮಾಡಬೇಕು. ಉಳ್ಳವರು ತಮ್ಮ ಸ್ವಂತ ಜಮೀನುಗಳಲ್ಲಿ ಮಾಡಿಕೊಂಡರೆ ಬಡವರಿಗೆ ಹಳ್ಳವೇ ಗತಿ. ಸ್ಮಶಾನಕ್ಕೆ ಜಮೀನು ನೀಡಲು ಕೆಲವರು ಸಿದ್ಧರಿದ್ದಾರೆ. ಸಿಎಂ ಬರುವ ಕಾರಣ ಎಚ್ಚೆತ್ತ ಜಿಲ್ಲಾಡಳಿತ ಈಗ ಸ್ಮಶಾನ ಸ್ಥಳ ಒದಗಿಸುವ ಭರವಸೆ ನೀಡಿದೆ.

ಗ್ರಾಮದಲ್ಲಿ ಏಳನೇ ತರಗತಿವರೆಗೆ ಶಾಲೆಯಿದ್ದು. ಮುಂದಿನ ವ್ಯಾಸಂಗಕ್ಕೆ ಆರು ಕಿಮೀ ದೂರದ ಬ್ಯಾಗವಾಟಕ್ಕೆ ಹೋಗಬೇಕು. ಇಲ್ಲವಾದರೆ ಶಿಕ್ಷಣ ಮೊಟಕುಗೊಳಿಸಬೇಕು. ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮವಾಗಿದೆ ಎಂದು ಗ್ರಾಪಂ ಪಿಡಿಒ ಹೇಳುತ್ತಿದ್ದರಾದರೂ, ಹಗಲಲ್ಲೇ ಮಹಿಳೆಯರು ಬೆಟ್ಟದ ಕಲ್ಲುಗಳ ಮರೆಗೆ ಬಹಿರ್ದೆಸೆಗೆ ಹೋಗುವ ದೃಶ್ಯ ಗ್ರಾಮದಲ್ಲಿ ಕಂಡು ಬರುತ್ತಿದೆ.

ಕಳೆಗಟ್ಟಿದ ಕರೇಗುಡ್ಡ: ಸಿಎಂ ವಾಸ್ತವ್ಯದ ಹಿನ್ನೆಲೆಯಲ್ಲಿ ಕರೇಗುಡ್ಡ ಈಗ ಸಂಪೂರ್ಣ ಕಳೆಗಟ್ಟಿದೆ. ಗ್ರಾಮದಲ್ಲಿ ಹಗಲಿರುಳು ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಜೆಸ್ಕಾಂ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಸೇರಿ ಅನೇಕ ಇಲಾಖೆಗಳು ತರಾತುರಿಯಲ್ಲಿ ಗ್ರಾಮವನ್ನು ಮಧುವಣಗಿತ್ತಿಯಂತೆ ಸಿಂಗರಿಸಿವೆ. ಇಷ್ಟು ದಿನ ತಿಪ್ಪೆ ಗುಂಡಿಗಳ ಮಧ್ಯೆ ನಡೆಯುತ್ತಿದ್ದ ಶಾಲೆ ಸುತ್ತಲೂ ಆಳೆತ್ತರದ ಕಾಂಪೌಂಡ್‌ ನಿರ್ಮಿಸಲಾಗಿದೆ. ಸಿಂಗಲ್ ಪೇಸ್‌ ವಿದ್ಯುತ್‌ ಕೂಡ ಸರಿಯಾಗಿ ಸಿಗದ ಗ್ರಾಮಕ್ಕೆ ಈಗ ಡಬಲ್ ಲೈನ್‌ ವಿದ್ಯುತ್‌ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬೇಸಿಗೆಯಲ್ಲಿ ನೀರಿಲ್ಲದ ಬಳಲಿದರೂ ಆಲಿಸದ ಜಿಲ್ಲಾಡಳಿತ, ಈಗ ಪ್ರತ್ಯೇಕ ಬೋರ್‌ವೆಲ್ಗಳನ್ನು ಕೊರೆಸಿದೆ. ಇನ್ನು ಇಷ್ಟು ದಿನ ಬಳಕೆಯಲ್ಲಿರದ ಶಾಲೆಯ ಶೌಚಾಲಯವನ್ನು ತೆರವು ಮಾಡಿ ಹೊಸದಾಗಿ ನಿರ್ಮಿಸಲಾಗಿದೆ. ಇಡೀ ಶಾಲೆಗೆ ಸುಣ್ಣ ಬಣ್ಣ ಬಳಿಯಲಾಗಿದೆ.

ಹೆಚ್ಚಿದ ನಿರೀಕ್ಷೆ: ಸಿಎಂ ಬರುವಿಕೆಗೆ ಒಂದೆಡೆ ಭರದ ಸಿದ್ಧತೆ ನಡೆದಿದ್ದರೆ ಮತ್ತೂಂದೆಡೆ ಅಹವಾಲು ಸ್ವೀಕಾರಕ್ಕೆಂದು ಸುಮಾರು 10 ಎಕರೆ ಜಮೀನನ್ನು ಸ್ವಚ್ಛಗೊಳಿಸಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಸಿಎಂ ಜನರ ಅಹವಾಲು ಸ್ವೀಕರಿಸಲಿದ್ದಾರೆ. ಎಲ್ಲರಿಗೂ ಅಲ್ಲಿಯೇ ನೀರು, ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ಒಂದೆಡೆ ಗ್ರಾಮ ಅಭಿವೃದ್ಧಿಗೆ ತೆರೆದು ಕೊಂಡರೆ ಸ್ಥಳೀಯರಿಗೆ ಮಾತ್ರ ಇದು ಕಿರಿ ಕಿರಿ ಎನಿಸುತ್ತಿದೆ. ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಿದ್ದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಇಲ್ಲಿ ಅದು ಇಡಬೇಡಿ, ಇದನ್ನು ತೆರವು ಮಾಡಿ, ಮನೆ ಮುಂದೆ ನೀರು ಚಲ್ಲಬೇಡಿ ಎಂಬಿತ್ಯಾದಿ ಷರತ್ತು ಹಾಕಿದ್ದಾರೆ. ಅಲ್ಲದೇ, ಶಾಲೆ ಪಕ್ಕದ ಮನೆಗಳ ಮಾಲೀಕರಿಗೆ ಅನಗತ್ಯ ವಸ್ತುಗಳನ್ನು ಕೂಡಲೇ ತೆರವು ಮಾಡುವಂತೆ ತಾಕೀತು ಮಾಡಿದ್ದರು ಎನ್ನುತ್ತಾರೆ ಸ್ಥಳೀಯರು.

ಶಾಲೆಗಳಲ್ಲಿ ಇರುವ ಆರು ಕೊಠಡಿಗಳಲ್ಲಿ ಈಗಾಗಲೇ ಜಿಲ್ಲಾಡಳಿತ ಮೂರು ಕೊಠಡಿ ಪಡೆದಿದೆ. ಎಲ್ಲ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂಡಿಸಲಾಗಿದೆ. ಗಲಾಟೆ ಹೆಚ್ಚಾಗಿರುವ ಕಾರಣ ಮಕ್ಕಳಿಗೆ ಬೋಧನೆ ಕೂಡ ಮಾಡಲಾಗುತ್ತಿಲ್ಲ.

ಒಟ್ಟಿನಲ್ಲಿ 12 ವರ್ಷಗಳ ಬಳಿಕ ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಜಿಲ್ಲೆಯ ಜನರಿಗೆ ವಿಶೇಷ ಅನುಭೂತಿ ನೀಡುತ್ತಿದೆ. ಆದರೆ, ಅವರ ವಾಸ್ತವ್ಯ ಎಷ್ಟು ಜನರಿಗೆ ಅನುಕೂಲ ಕಲ್ಪಿಸಬಹುದು ಎಂಬುದನ್ನು ಕಾದು ನೋಡಬೇಕು.

 

•ಸಿದ್ಧಯ್ಯಸ್ವಾಮಿ ಕುಕನೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ