ಖರೀದಿ ಕೇಂದ್ರದ ಒಳಗೆ ಹೋಗದ ರೈತರು!
Team Udayavani, Jan 26, 2022, 1:10 PM IST
ರಾಯಚೂರು: ಮಗು ಅಳುವವರೆಗೂ ತಾಯಿ ಹಾಲುಣಿಸುವುದಿಲ್ಲ ಎನ್ನುವಂತಾಗಿದೆ ತೊಗರಿ ಖರೀದಿದಾರರ ಪರಿಸ್ಥಿತಿ. ಇಷ್ಟು ವರ್ಷ ರೈತರಿಂದ ಬೇಕಾಬಿಟ್ಟಿ ದರಕ್ಕೆ ತೊಗರಿ ಖರೀದಿಸುತ್ತಿದ್ದ ವರ್ತಕರು ಈಗ ಖರೀದಿ ಕೇಂದ್ರಗಳಿಗಿಂತ ಹೆಚ್ಚು ದರ ನಿಗದಿ ಮಾಡುವ ಸರ್ಕಾರದೊಂದಿಗೆ ಪೈಪೋಟಿಗಿಳಿದಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಖರೀದಿ ಕೇಂದ್ರಗಳು ಶುರುವಾದರೂ ರೈತರು ಮಾತ್ರ ಅಲ್ಲಿ ಮಾರದೇ ಮುಕ್ತ ಮಾರುಕಟ್ಟೆಯಲ್ಲಿಯೇ ಮಾರುತ್ತಿದ್ದಾರೆ. ಈ ವರ್ಷವೂ ಕೂಡ ಇಂಥದ್ದೇ ಸನ್ನಿವೇಶ ಏರ್ಪಟ್ಟಿದೆ. ಜಿಲ್ಲೆಯಲ್ಲಿ 61 ಖರೀದಿ ಕೇಂದ್ರ ಸ್ಥಾಪಿಸಿದ್ದು, 11,066 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈವರೆಗೆ ಮೂವರು ರೈತರು ಮಾತ್ರ ಮಾರಾಟ ಮಾಡಿದ್ದಾರೆ. ಇನ್ನೂ 11,063 ರೈತರು ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ.
ಕಳೆದ ವರ್ಷ ಸರ್ಕಾರ 6100 ರೂ. ಬೆಂಬಲ ಬೆಲೆ ನಿಗದಿ ಮಾಡಿತ್ತು. ಮಾರುಕಟ್ಟೆಯಲ್ಲಿ ಅದಕ್ಕಿಂತ ಹೆಚ್ಚು ದರ ಸಿಕ್ಕ ಪರಿಣಾಮ ಹೆಚ್ಚಿನ ರೈತರು ಮಾರಾಟ ಮಾಡಲಿಲ್ಲ. ಈ ವರ್ಷ ಖರೀದಿ ಕೇಂದ್ರಗಳಲ್ಲಿ 6300 ರೂ. ನಿಗದಿ ಮಾಡಲಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ 4,100ರಿಂದ 6,450 ರೂ.ವರೆಗೂ ಖರೀದಿ ಮಾಡಲಾಗುತ್ತಿದೆ. ಅಲ್ಲದೇ, ಖರೀದಿ ಕೇಂದ್ರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಯಾಗುತ್ತಿರುವುದರಿಂದ ರೈತರು ಮುಕ್ತ ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಖರೀದಿ ಕೇಂದ್ರಗಳು ಭಣ ಭಣ ಎನ್ನುತ್ತಿವೆ.
ದರ ಹೆಚ್ಚಳದ ನಿರೀಕ್ಷೆ
ಈ ಬಾರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹೆಚ್ಚಾಗಿದ್ದರಿಂದ ಇಳುವರಿ ಕುಂಠಿತಗೊಂಡಿದೆ. ಬಹುತೇಕ ಹತ್ತಿ, ಮೆಣಸಿನಕಾಯಿ, ತೊಗರಿ ಇಳುವರಿ ನಿರೀಕ್ಷೆಯಷ್ಟು ಬಂದಿಲ್ಲ. ಇದೇ ಕಾರಣಕ್ಕೆ, ಹತ್ತಿ ಮೆಣಸಿನಕಾಯಿ ದರ ಹೆಚ್ಚಾಗಿದೆ. ಈಗ ತೊಗರಿ ದರದ ಮೇಲೆ ರೈತರ ದೃಷ್ಟಿ ಇದೆ. ಜಿಲ್ಲೆಯಲ್ಲಿ ಈ ಬಾರಿ 95,173 ಹೆಕ್ಟೇರ್ ಗುರಿ ಹೊಂದಿದ್ದರೆ 95,128 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಶೇ.99 ಬಿತ್ತನೆ ಗುರಿ ತಲುಪಲಾಗಿದೆ. ಆದರೆ, ನಿರೀಕ್ಷೆಯಷ್ಟು ಇಳುವರಿ ಬಂದಿಲ್ಲ. ಇದರಿಂದ ದರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದು, ಸದ್ಯಕ್ಕೆ ತೊಗರಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ಜತೆಗೆ ಮುಕ್ತ ಮಾರುಕಟ್ಟೆಯಲ್ಲಿಯೂ ದರ ಏರಿಳಿತದ ಮೇಗಾ ನಿಗಾ ವಹಿಸಿ ಕಾಯುತ್ತಿದ್ದಾರೆ.
ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದರೆ ಹಣಕ್ಕಾಗಿ ಮೂರ್‍ನಾಲ್ಕು ತಿಂಗಳು ಕಾಯಬೇಕಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ನಗದು ಹಣ ಲಭಿಸುವುದರಿಂದಲೂ ಕೆಲವೊಂದು ರೈತರು ಮಾರಾಟ ಮಾಡಲು ಮುಂದಾಗುತ್ತಿಲ್ಲ. ಇನ್ನೂ ಕೆಲ ರೈತರು ಎಪಿಎಂಸಿಯ ವಿವಿಧ ಅಂಗಡಿಗಳಲ್ಲಿ ಸಾಲ ಮಾಡಿಕೊಂಡಿದ್ದು, ಅದೇ ರೈತರಿಗೆ ಮಾರುವ ಷರತ್ತಿಗೆ ಕಟ್ಟುಬಿದ್ದಿದ್ದಾರೆ. ಕೆಲ ವರ್ತಕರು ಕೂಡ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿ, ರೈತರಿಂದ ಕಡಿಮೆ ದರಕ್ಕೆ ಖರೀದಿಸಿ ಹೆಚ್ಚಿನ ದರಕ್ಕೆ ಸರ್ಕಾರಕ್ಕೆ ಮಾರುವ ದಂದೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಇವೆ. ಆದರೆ, ಸದ್ಯಕ್ಕೆ ರೈತರಿಗೆ ಮಾತ್ರ ಉತ್ತಮ ಬೆಲೆ ಸಿಗುತ್ತಿರುವುದು ಒಳ್ಳೆಯ ಬೆಳವಣಿಯಾಗಿದೆ.
ಜಿಲ್ಲೆಯಲ್ಲಿ ಈ ಬಾರಿ 61 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸುಮಾರು 11,066 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈವರೆಗೂ ಯಾವುದೇ ರೈತರು ಮಾರಾಟ ಮಾಡಿಲ್ಲ. ಕಳೆದ ವರ್ಷ ಕೂಡ ಇದೇ ರೀತಿಯಾಗಿತ್ತು. 6300 ರೂ. ದರ ನಿಗದಿಯಾಗಿದ್ದು ಮುಕ್ತ ಮಾರುಕಟ್ಟೆಯಲ್ಲಿ ಇಲ್ಲಿಗಿಂತ ಹೆಚ್ಚು ದರ ನಿಗದಿಯಾಗಿದೆ. -ಜಿಂದಪ್ಪ, ಖರೀದಿ ಕೇಂದ್ರ ನಿರ್ವಾಹಕ
-ಸಿದ್ಧಯ್ಯ ಸ್ವಾಮಿ ಕುಕನೂರು