ಸೌಲಭ್ಯ ಕಲ್ಪಿಸದಿದ್ದರೆ ಕ್ರಮ ಕೈಗೊಳ್ಳಿ

Team Udayavani, Sep 10, 2019, 3:12 PM IST

ರಾಯಚೂರು: ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ಕಾರ್ಮಿಕರ ಕುಂದುಕೊರತೆ ಸಭೆ ನಡೆಸಿದರು.

ರಾಯಚೂರು: ಯಾವುದೇ ಕಾರ್ಖಾನೆ ಗಳು, ಉದ್ಯಮಗಳು ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕಾರ್ಮಿಕರ ಕುಂದುಕೊರತೆ ಸಭೆ ನಡೆಸಿದ ಅವರು, ಸಾಕಷ್ಟು ಕಡೆ ಕಾರ್ಮಿಕರಿಗೆ ನಿಯಮಾನುಸಾರ ಸೌಲಭ್ಯ ನೀಡದಿರುವ ದೂರುಗಳು ಬಂದಿದ್ದು, ಅಂಥ ಕಾರ್ಖಾನೆ, ಉದ್ಯಮಗಳ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿ ಎಂದು ಸೂಚಿಸಿದರು.

ಕಾರ್ಮಿಕರ ಮುಖಂಡರು ಮಾತನಾಡಿ, ರೈಸ್‌ ಮಿಲ್ಗಳಲ್ಲಿ, ಹೋಟೆಲ್ಗಳಲ್ಲಿ ಕನಿಷ್ಠ ವೇತನ ನೀಡುತ್ತಿಲ್ಲ, ಭವಿಷ್ಯನಿಧಿ ಕಲ್ಪಿಸಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ, ಕನಿಷ್ಠ ವೇತನ ಪಾವತಿಸದ, ವೇತನ ರಸೀದಿ ನೀಡದ, ಕಾರ್ಮಿಕ ಕಾನೂನು ಉಲ್ಲಂಘಿಸಿದ ರೈಸ್‌ ಮಿಲ್ ಹಾಗೂ ಕಾರ್ಖಾನೆಗಳ ಪರವಾನಗಿ ರದ್ದುಪಡಿಸುವುದಾಗಿ ನೋಟಿಸ್‌ ಜಾರಿಗೊಳಿಸಬೇಕು ಎಂದು ಅವರು ಸೂಚಿಸಿದರು.

ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತೆ ಆರತಿ ಮಾತನಾಡಿ, ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಪ್ರತಿ ಜಿಲ್ಲೆಗೊಬ್ಬ ಕಾರ್ಮಿಕ ನಿರೀಕ್ಷಕ ಇರಬೇಕು. ಆದರೆ, ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿದ್ದ ಅಧಿಕಾರಿಗಳು ಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ ಎಂದರು.

ನಾನು ಕಾರ್ಯದರ್ಶಿಗಳಾಗಿ ಎರಡು ತಿಂಗಳಾದರೂ ಇಲಾಖೆ ಸಮಸ್ಯೆಗಳ ಕುರಿತು ಯಾವ ಅಧಿಕಾರಿಗಳು ಕೂಡ ಗಮನಕ್ಕೆ ತಂದಿಲ್ಲ. ಸಭೆಯಲ್ಲಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಒಂದು ವಾರದೊಳಗಾಗಿ ಹೈ-ಕ ಭಾಗದಿಂದ ಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಯಾದ ಅಧಿಕಾರಿಗಳನ್ನು ಕೂಡಲೇ ಪುನಃ ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ವರ್ಗಾವಣೆ ಮಾಡುವಂತೆ ಸೂಚಿಸುವುದಾಗಿ ಮಣಿವಣ್ಣನ್‌ ತಿಳಿಸಿದರು.

ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಹಾದೇವಪ್ಪ ಮಾತನಾಡಿ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಸಮರ್ಪಕ ಬಳೆಯಾಗುತ್ತಿಲ್ಲ. ಕಾರ್ಮಿಕರಿಗೆ ಬೇಕಾದಾಗ ಹಣ ಸಿಗುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕೊಪ್ಪಳ, ಯಾದಗಿರಿ, ಬಳ್ಳಾರಿ ಹಾಗೂ ಕಲಬುರಗಿ ಬಾಗಲಕೋಟೆ ಜಿಲ್ಲೆಗಳ ಕಾರ್ಮಿಕ ಇಲಾಖೆ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ