ಜೆಸ್ಕಾಂಗೆ ಕೋಟ್ಯಂತರ ರೂ. ಬಿಲ್ ಬಾಕಿ
ತಾಪಂ ಸೇರಿ ಸರಕಾರಿ ಕಚೇರಿಯಲ್ಲಿ ವಿದ್ಯುತ್ ಬಳಕೆ 4 ಕೋಟಿ 57 ಲಕ್ಷ ರೂ. ಬಾಕಿ ಉಳಿದಿದೆ.
Team Udayavani, Jan 25, 2021, 6:28 PM IST
ದೇವದುರ್ಗ: ಸರಕಾರಿ ವಸತಿ ನಿಲಯ, ಪುರಸಭೆ, ಗ್ರಾಪಂ ಸೇರಿ ಹಲವು ಕಚೇರಿಗಳ ಕರೆಂಟ್ ಬಿಲ್ ಜೆಸ್ಕಾಂ ಇಲಾಖೆಗೆ ತುಂಬಿಲ್ಲ. ಇದರಿಂದ ಕೋಟ್ಯಂತರ ರೂ. ಬಾಕಿ ಉಳಿದಿದೆ. ಹಲವು ಬಾರಿ ಜಾಗೃತಿ ವಿದ್ಯುತ್ ಸ್ಥಗಿತಗೊಳಿಸಿದರೂ ಬಾಕಿ ಬಿಲ್ ಪಾವತಿಗೆ ಗ್ರಾಹಕರು ಅ ಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.
ವಿವಿಧ ಇಲಾಖೆಯ ಕೋಟ್ಯಂತರ ಬಾಕಿ: ಪಟ್ಟಣ ವ್ಯಾಪ್ತಿಯ ಮಿನಿ ವಿಧಾನಸೌಧ, ಸಮಾಜ ಕಲ್ಯಾಣ, ಸರ್ವೇ, ಉಪನೋಂದಣಿ, ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಬ್ಯಾಂಕ್, ಉಪಖಜಾನೆ, ಪುರಸಭೆ, ತೋಟಗಾರಿಕೆ, ಕೃಷಿ ಇಲಾಖೆ, ತಾಪಂ ಸೇರಿ ಸರಕಾರಿ ಕಚೇರಿಯಲ್ಲಿ ವಿದ್ಯುತ್ ಬಳಕೆ 4 ಕೋಟಿ 57 ಲಕ್ಷ ರೂ. ಬಾಕಿ ಉಳಿದಿದೆ. ಬಾಕಿ ವಸೂಲಿಗೆ ಜೆಸ್ಕಾಂ ಸಿಬ್ಬಂದಿ ದಿನವಿಡೀ ಕಚೇರಿ ಕಚೇರಿ ಅಲೆದರೂ ಅಧಿಕಾರಿಗಳ ಭರವಸೆಗೆ ವಾಪಸ್ ಹೋಗುವಂತಾಗಿದೆ.
ಒಂದೊಂದು ಇಲಾಖೆಯಿಂದ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿಯಿದೆ. ಸಮಾಜ ಕಲ್ಯಾಣ, ಬಿಸಿಎಂ, ಪರಿಶಿಷ್ಟ ಪಂಗಡ, ಅಲ್ಪಾಸಂಖ್ಯಾತರ ಸೇರಿ ವಸತಿ ನಿಲಯಗಳಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಬಿಲ್ ಬಾಕಿ ಇದೆ.
33 ಗ್ರಾ.ಪಂನ 53ಕೋಟಿ: ತಾಲೂಕಿನ 33 ಗ್ರಾಮ ಪಂಚಾಯಿತಿಗಳಿಂದ ಜೆಸ್ಕಾಂ ಇಲಾಖೆಗೆ ವಿದ್ಯುತ್ ಬಿಲ್ ಬರೋಬರಿ 53,28,79,822 ರೂ. ಬಾಕಿ
ಬರಬೇಕಾಗಿದೆ. ಒಂದೊಂದು ಗ್ರಾಪಂನಿಂದ ವಿದ್ಯುತ್ ಬಾಕಿ ಬಿಲ್ ಕೋಟಿ ದಾಟಿದೆ. ಜೆಸ್ಕಾಂ ಇಲಾಖೆ ಸಿಬ್ಬಂದಿ ವಸೂಲಿಗೆ ಗ್ರಾಪಂಗೆ ಅಲೆದರೂ ಅ ಧಿಕಾರಿಗಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಒಬ್ಬರೂ ಒಂದೊಂದು ಮಾತಾಡುವ ಹಿನ್ನೆಲೆಯಲ್ಲಿ ಬಾಕಿ ಹಣ ವಸೂಲಿ ಆಮೆಗತಿಯಲ್ಲಿ ಸಾಗಿದೆ. ನಿಗ ದಿತ ಗುರಿ ಮುಟ್ಟುವಲ್ಲಿ ಜೆಸ್ಕಾಂ ಇಲಾಖೆ ಎಡವಿದೆ. ಜಾಲಹಳ್ಳಿ, ಗಬ್ಬೂರು, ಅರಕೇರಾ, ಗಲಗ ಸೇರಿ ತಾಲೂಕಿನಲ್ಲಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆ ಹೊಂದಿವೆ.
ಬೀದಿದೀಪ ಹಣ ಬಾಕಿ: ಪುರಸಭೆ ಇಲಾಖೆ ವ್ಯಾಪ್ತಿಯ ಬೀದಿದೀಪ, ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಸರಬರಾಜು ಮಾಡಿರುವ ಬಾಕಿ 5 ಕೋಟಿ 50 ಲಕ್ಷ 5 ಸಾವಿರ ರೂ. ಬಿಲ್ ಪಾವತಿ ಆಗಬೇಕಾಗಿದೆ. ಪಟ್ಟಣದಲ್ಲಿ ಬೀದಿದೀಪಗಳಿಗೆ ವಿದ್ಯುತ್ ಪೂರೈಕೆ ಸೇರಿದಂತೆ ಕೋಟ್ಯಂತರ ರೂ. ಬಾಕಿ ಹಣ ವಸೂಲಿ ಆಗುತ್ತಿಲ್ಲ. ದಿನೇ ದಿನೇ ಕಚೇರಿಗೆ ಅಲೆಯುವ ಸಿಬ್ಬಂದಿಗೆ ಬೇಸರ ಉಂಟಾಗಿದೆ. ಬಜೆಟ್ ಕೊರತೆ ನೆಪದಲ್ಲಿ ಅಲೆದು ಬೇಸತ್ತು ಹೋಗಿದ್ದಾರೆ. ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಅನೇಕ ಬಾರಿ ಜಾಗೃತಿ ಮೂಡಿಸಲಾಗುತ್ತಿದೆ. ಬಾಕಿ ಹಣ ವಸೂಲಿ ಆಗುತ್ತಿಲ್ಲ ಎಂಬ ದೊಡ್ಡ ತಲೆನೋವು ಅಧಿಕಾರಿಗಳಲ್ಲಿ ಕಾಡುತ್ತಿದೆ.
ನಿಯಮ ಪಾಲನೆಯಿಲ್ಲ: ಗೃಹಬಳಕೆ, ಸರಕಾರಿ ಕಚೇರಿ ಸೇರಿದಂತೆ ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಬಳಿಕೆ 100 ರೂ. ಬಾಕಿ ಇದ್ದಲ್ಲ ವಿದ್ಯುತ್ ಸ್ಥಗಿತಗೊಳಿಸುವುದು ಜೆಸ್ಕಾಂ ಇಲಾಖೆ ನಿಯಮ. ನಿಯಮ ಮೀರಿ ಕೋಟ್ಯಂತರ ರೂ. ಬಾಕಿ ಉಳಿದಿದ್ದು, ಕಚೇರಿಗಳಿಗೆ ನಿಯಮ ಪಾಲನೆಯಾಗುತ್ತಿಲ್ಲ.
ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿಯಿದ್ದು, ಸಿಬ್ಬಂದಿಯಿಂದ ವಸೂಲಿ ಕಾರ್ಯ ನಡೆಯುತ್ತಿದೆ. ಈಗಾಗಲೇ ಇದಕ್ಕಾಗಿ ತಂಡ ರಚನೆ ಮಾಡಲಾಗಿದ್ದು, ಬಾಕಿ ಪಾವತಿಸಲು ಜಾಗೃತಿ ಮೂಡಿಸಲಾಗುತ್ತಿದೆ.
ಶಿವನಗುತ್ತಿ ಜೆಸ್ಕಾಂ ಇಲಾಖೆ ಎಇಇ
*ನಾಗರಾಜ ತೇಲ್ಕರ್