ಬೇಕಾಬಿಟ್ಟಿ ವ್ಯಾಪಾರಕ್ಕೆ ಪೊಲೀಸರ ಕಡಿವಾಣ
Team Udayavani, May 12, 2021, 12:36 PM IST
ರಾಯಚೂರು: ಒಂದೆಡೆ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದ್ದು, ಸಂಕಷ್ಟ ಎದುರಾಗುತ್ತಿದ್ದರೆ ಇತ್ತ ಮಾರುಕಟ್ಟೆಯಲ್ಲಿ ಜನ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇದರಿಂದ ಮಂಗಳವಾರ ಪೊಲೀಸರು ಬೆಳಗ್ಗೆಯೇ ಮಾರುಕಟ್ಟೆಯಲ್ಲಿ ಸಂಚರಿಸುವ ಮೂಲಕ ಜನ ಸಂಚಾರಕ್ಕೆ ತುಸು ಕಡಿವಾಣ ಹಾಕಿದರು.
ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಎಂದು ಸರ್ಕಾರ ಹೇಳಿದೆಯಾದರೂ ಬೆಳಗ್ಗೆ 10 ಗಂಟೆವರೆಗೆ ವ್ಯಾಪಾರ-ವಹಿವಾಟಿಗೆ ಅನುವು ಮಾಡಿದೆ. ಆದರೆ, ಜನಸಂಚಾರ ಮಿತಿ ಮೀರುತ್ತಿದ್ದು, ಪೊಲೀಸರು ಕೂಡ ಕೈ ಚೆಲ್ಲಿ ಕೂಡುವಂತಾಗಿತ್ತು. ಆದರೆ, ಕೊನೆಗೆ ಬೆಳಗ್ಗೆಯೇ ದಾಂಗುಡಿ ಇಟ್ಟ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಗೆ ಬಿಸಿ ಮುಟ್ಟಿಸಿದರು.
ಅಲ್ಲದೇ, ಸುಖಾಸುಮ್ಮನೆ ಓಡಾಡದೇ ಬೇಗ ಬೇಗ ವ್ಯಾಪಾರ-ವಹಿವಾಟು ಮುಗಿಸಿಕೊಳ್ಳುವಂತೆ ತಾಕೀತು ಮಾಡಿದರು. ಅತ್ತ ರಂಜಾನ್ ಹಬ್ಬ ಸಮೀಪಿಸುತ್ತಿರುವ ಕಾರಣ ಹಬ್ಬದ ಖರೀದಿಗೆ ಜನ ಮಾರುಕಟ್ಟೆಯತ್ತ ಮುಗಿ ಬೀಳುತ್ತಿದ್ದಾರೆ. ಅದರ ಜತೆಗೆ ತರಕಾರಿ, ದಿನಸಿ, ಹಾಲು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿರುತ್ತದೆ. ಬೆಳಗಿನ ನಾಲ್ಕು ಗಂಟೆಗಳ ಅವಧಿ ಯಲ್ಲೇ ಸೋಂಕು ವ್ಯಾಪಕವಾಗಿ ಹರಡಲು ಬೇಕಾದ ವಾತಾವರಣ ಇರುತ್ತದೆ. ಹೀಗಾಗಿ ಬೆಳಗ್ಗೆಯೇ ಮಾರುಕಟ್ಟೆಯಲ್ಲಿ ಸಂಚರಿಸಿದ ಪೊಲೀಸರು ಜನರನ್ನು ಚದುರಿಸಲು ಕ್ರಮ ಕೈಗೊಂಡರು.