ಮಸ್ಕಿ ಅಖಾಡದಲ್ಲಿ ಮಹಿಳಾ ಮಣಿಗಳ ಅಬ್ಬರದ ಪ್ರಚಾರ
5 ಜಿಪಂ ವ್ಯಾಪ್ತಿಯಲ್ಲಿ ಸಂಚರಿಸಿ ಮಹಿಳೆಯರನ್ನು ತಮ್ಮ ಪಕ್ಷದತ್ತ ಸೆಳೆಯುವ ಕಸರತ್ತು ನಡೆಸಿದ್ದಾರೆ.
Team Udayavani, Apr 9, 2021, 6:47 PM IST
ಮಸ್ಕಿ: ಮತಕ್ಷೇತ್ರ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ತೀವ್ರ ರಂಗೇರುತ್ತಿದೆ. ಪ್ರಚಾರದ ಅಬ್ಬರ ಜೋರಾಗಿದ್ದು, ಈಗ ಮಹಿಳಾ ಮಣಿಗಳು ಮಸ್ಕಿ
ಅಖಾಡದಲ್ಲಿ ತೀವ್ರ ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ರೇಖಾ ಶ್ರೀನಿವಾಸ ನೇತೃತ್ವದಲ್ಲಿ ಜಿಲ್ಲಾ ಮತ್ತು ಸ್ಥಳೀಯ ಮಹಿಳಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಪರವಾಗಿ ಕ್ಯಾಂಪೇನ್ ಆರಂಭಿಸಿದ್ದರೆ, ಇತ್ತ ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ನೇತೃತ್ವದಲ್ಲಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದಲೂ ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಪ್ರತ್ಯೇಕ ತಮ್ಮದೇ ತಂಡದ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಬಿರುಬಿಸಿಲಿಗೂ
ಅಂಜದೇ ಮಸ್ಕಿ ಪಟ್ಟಣ ಸೇರಿ ತಾಲೂಕಿನ 5 ಜಿಪಂ ವ್ಯಾಪ್ತಿಯಲ್ಲಿ ಸಂಚರಿಸಿ ಮಹಿಳೆಯರನ್ನು ತಮ್ಮ ಪಕ್ಷದತ್ತ ಸೆಳೆಯುವ ಕಸರತ್ತು ನಡೆಸಿದ್ದಾರೆ.
ಹಲವು ಅಸ್ತ್ರ ಪ್ರಯೋಗ: ಬಿಜೆಪಿ ವಿಧಾನ ಪರಿಷತ್ ಸದಸ್ಯೆಯಾಗಿರುವ ಭಾರತಿ ಶೆಟ್ಟಿ ಕಳೆದ ಒಂದು ವಾರದಿಂದ ಇಲ್ಲಿಯೇ ವಾಸ್ತವ್ಯ ಹೂಡಿದ್ದು, ಬೂತ್‌ಮಟ್ಟದ ಕಾರ್ಯಕರ್ತೆಯರ ಸಭೆ, ಮನೆ ಪ್ರಚಾರ, ಬಹಿರಂಗ ಕಾರ್ಯಕ್ರಮ ಮೂಲಕ ಮತ ಸೆಳೆಯುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷೆ ವಿಜಯ ರಾಜೇಶ್ವರಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶರಣಮ್ಮ ಮಸ್ಕಿ ಮಹಿಳಾ ಮಂಡಲ ಅಧ್ಯಕ್ಷೆ ಪ್ರಮಿಳಾ ಸೇರಿ ಸ್ಥಳೀಯ ಹಲವು ಮಹಿಳಾ ನಾಯಕಿಯರ ಜತೆಗೂಡಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮಸ್ಕಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸಂಚಾರ ಮುಗಿಸಿದ ಇವರು, ತಾಲೂಕಿನ ತಿಡಿಗೋಳ, ನಿಡಿಗೋಳ, ಕೋಳಬಾಳ, ಕಣ್ಣೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಇಲ್ಲೂ ಅಬ್ಬರ: ಇನ್ನೂ ಕಾಂಗ್ರೆಸ್‌ನಲ್ಲೂ ಮಹಿಳಾ ನಾಯಕಿಯರ ಪ್ರಚಾರ ಅಬ್ಬರದಿಂದ ಸಾಗಿದೆ. ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ
ರೇಖಾ ಶ್ರೀನಿವಾಸ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗಂಗಮ್ಮ, ಕಾರ್ಯದರ್ಶಿ ಜಯಮ್ಮ, ಸಿಂಧನೂರು
ಬ್ಲಾಕ್ ಅಧ್ಯಕ್ಷೆ ದಾಕ್ಷಯಿಣಿ, ಮಂಜುಳಾ ಸೇರಿ ಇತರೆ ಮಹಿಳಾ ಮಣಿಗಳು ಇರುವ ಗುಂಪು ಪ್ರತ್ಯೇಕವಾಗಿ ತಾವೇ ಮನೆ-ಮನೆಗೂ ತೆರಳಿ ಮತಯಾಚನೆ
ಮಾಡುತ್ತಿದ್ದಾರೆ. ಕಾಂಗ್ರೆಸ್ ಮಹಿಳೆಯರಿಗೆ ನೀಡಿದ ಸ್ಥಾನ-ಮಾನ ಮಹಿಳಾ ಪರವಾಗಿ ರೂಪಿಸಿದ ಯೋಜನೆಗಳು ಸೇರಿ ಹಲವು ಮಾಹಿತಿಗಳನ್ನು ನೀಡುವ
ಮೂಲಕ ಮಹಿಳಾ ಮತದಾರರನ್ನು ಹಿಡಿದಿಡುವ ಪ್ರಯತ್ನ ನಡೆಸಿದ್ದಾರೆ.
ಹೆಚ್ಚಿದ ಕುತೂಹಲ
ಮಸ್ಕಿ ಉಪಚುನಾವಣೆ ಕಣದಲ್ಲಿ ಘಟಾನುಘಟಿ ನಾಯಕರ ಪ್ರಚಾರ ಮಾತ್ರವಲ್ಲ, ಮಹಿಳೆಯರು ಕೂಡ ನಡೆಸಿರುವ ಬಿರುಸಿನ ಮತಪ್ರಚಾರ ಗಮನ ಸೆಳೆಯುತ್ತಿದೆ. ಕೆಂಡದಂತ ಬಿಸಿಲನ್ನೂ ಲೆಕ್ಕಿಸದೇ ಪಟ್ಟಣ, ಹಳ್ಳಿಯ ಗಲ್ಲಿ-ಗಲ್ಲಿಯಲ್ಲಿ ಮಹಿಳೆಯರು ಓಡಾಡಿ ಮತಯಾಚನೆ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ವಿಶೇಷವಾಗಿ ಮಹಿಳಾ ನಾಯಕಿಯರು ಹೋದ ಕಡೆಗೆಲ್ಲ ಮಹಿಳಾ ಮತದಾರರೇ ಹಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಮಹಿಳೆಯರ ಕಷ್ಟ-ನಷ್ಟ ಕೇಳುವುದು, ಅವರಿಗೆ ಸ್ಪಂದಿಸುವ ಕೆಲಸವನ್ನು ಮಹಿಳಾ ಮಣಿಗಳು ಮಾಡುತ್ತಿದ್ದು, ಇದು ಮಸ್ಕಿ ಮತಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದೆ.
*ಮಲ್ಲಿಕಾರ್ಜುನ ಚಿಲ್ಕರಾಗಿ