ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ; ತೀವ್ರ ಆಕ್ರೋಶ
ಎಪಿಎಂಸಿ ಉಳಿಸಬೇಕು ಮತ್ತು ರೈತಸ್ನೇಹಿಯಾಗಿ ಬಲಪಡಿಸಬೇಕು.
Team Udayavani, Jan 23, 2021, 6:39 PM IST
ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ರೈತ ವಿರೋಧಿ ಮಸೂದೆ ಖಂಡಿಸಿ ರೈತ, ಕಾರ್ಮಿಕರು ಹಮ್ಮಿಕೊಂಡಿರುವ ಬೃಹತ್ ಜನ ಗಣರಾಜ್ಯೋತ್ಸವ ಪರೇಡ್ ಬೆಂಬಲಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಟನಾಕಾರರು, ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಮಾರಕವಾದ ಕಾನೂನು ಕೈ ಬಿಡಬೇಕು. ಮಸೂದೆ ಹಿಂಪಡೆಯಬೇಕು. ರೈತರ ಎಲ್ಲ ಬೆಳೆಗಳಿಗೂ ವೈಜ್ಞಾನಿಕ, ಲಾಭದಾಯಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಉಳಿಸಬೇಕು ಮತ್ತು ರೈತಸ್ನೇಹಿಯಾಗಿ ಬಲಪಡಿಸಬೇಕು. ಅನೇಕ ದಶಕಗಳಿಂದ ಅರ್ಜಿ ಹಾಕಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ
ಮತ್ತು ತಲೆಯ ಮೇಲೊಂದು ಸೂರು ಕಟ್ಟಿಕೊಂಡಿರುವ ಬಡ ಜನರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದರು.
ಊಳುವವರಿಗೆ ಭೂಮಿ ನೀತಿ ಮುಂದುವರಿಯಬೇಕು. ಎಲ್ಲ ವಸತಿ ರಹಿತರಿಗೆ ನಿವೇಶನದ ಹಕ್ಕು ಸಿಗಬೇಕು. ಕರ್ನಾಟಕದ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬರ ಮತ್ತು ನೆರೆ ಪೀಡಿತ ಪರಿಹಾರ ಧನ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲ ಕಾರ್ಮಿಕರಿಗೆ ಉದ್ಯೋಗ ಮತ್ತು ವೇತನ ಭದ್ರತೆ ಸಿಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಖಾಜಾ ಅಸ್ಲಂ ಅಹ್ಮದ್, ಜಾನ್‌ವೆಸ್ಲಿ, ಕೆ.ಜಿ. ವೀರೇಶ, ಮಾರಪ್ಪ ಹರವಿ, ಆಂಜನೇಯ, ಅನ್ಸರ್ ಹುಸೇನ್, ಅಶ್ರಫ್ ಹುಸೇನ್ ಇತರರಿದ್ದರು.