ಮಾದಿಗ ಸಮುದಾಯದ ಚುನಾಯಿತರಿಗೆ ಸನ್ಮಾನ
: ಮಾದಿಗ ಮಹಾಸಭಾಗದ ತಾಲೂಕು ಘಟಕದ ಅಧ್ಯಕ್ಷ ಅಮರೇಶ ಗಿರಿಜಾಲಿ ಮಾತನಾಡಿದರು
Team Udayavani, Feb 27, 2021, 6:40 PM IST
ಸಿಂಧನೂರು: ಗ್ರಾಪಂಗಳಿಗೆ ಆಯ್ಕೆಯಾಗಿರುವ ಮಾದಿಗ ಸಮುದಾಯದ ಪ್ರತಿನಿಧಿಗಳಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ನಗರದಲ್ಲಿ ಫೆ.27ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಾದಿಗ ಮಹಾಸಭಾದ ತಾಲೂಕು ಅಧ್ಯಕ್ಷ ಅಮರೇಶ ಗಿರಿಜಾಲಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕದಾಸ ಕಲ್ಯಾಣ ಮಂಟಪದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಬೈಕ್ ರ್ಯಾಲಿ ನಡೆಯಲಿದ್ದು, ಬಳಿಕ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಮಾದರ ಚನ್ನಯ್ಯ ಸ್ವಾಮೀಜಿ ವಹಿಸಿಕೊಳ್ಳುವರು. ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಬಿ. ತಿಮ್ಮಾಪುರ, ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಹಾಸಭಾ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಕೊಡ್ಲಿ, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೆ.ಕರಿಯಪ್ಪ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೊಲ್ಲಾಶೇಷಗಿರಿರಾವ್ ಸೇರಿದಂತೆ ಇತರರು ಪಾಲ್ಗೊಳ್ಳುವರು. ಸಮಾಜದ 65 ಜನ ಸದಸ್ಯರು, ಇಬ್ಬರು ಗ್ರಾಪಂ ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರಿಗೆ ಸನ್ಮಾನಿಸಲಾಗುತ್ತದೆ ಎಂದರು.
ಮಾದಿಗ ಮಹಾಸಭಾದ ಗೌರವ ಅಧ್ಯಕ್ಷ ಅಲ್ಲಮಪ್ರಭು ಪೂಜಾರ್, ಎಚ್.ಜಗದೀಶ ವಕೀಲ, ಶ್ರೀನಿವಾಸ್ ವೈ., ನಾಗಪ್ಪ ಗಿರಿಜಾಲಿ ಸೇರಿದಂತೆ ಇತರರು ಇದ್ದರು.