ಗಡಿ ಜತೆಗೆ ಒಳ ಸಂಚಾರವೂ ಸ್ಥಗಿತ
|ಅನಗತ್ಯ ಸಂಚಾರ ಕಂಡು ಬಂದರೆ ಬೈಕ್ ಸೀಜ್ |ಒಂದು ಪ್ರದೇಶದಿಂದ ಮತ್ತೂಂದು ಜಾಗಕ್ಕೆ ಹೋಗುವಂತಿಲ್ಲ
Team Udayavani, Apr 18, 2020, 11:26 AM IST
ರಾಯಚೂರು: ಬಡಾವಣೆಯೊಂದಕ್ಕೆ ಪೊಲೀಸರು ಬ್ಯಾರಿಕೇಡ್ ಅಡ್ಡಗಟ್ಟಿ ಸಂಚಾರ ಸ್ಥಗಿತಗೊಳಿಸಿರುವುದು.
ರಾಯಚೂರು: ಗಡಿ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ನಗರದ ಒಳಸಂಚಾರಕ್ಕೂ ಕಡಿವಾಣ ಹಾಕಲಾಗಿದೆ. ಪೊಲೀಸ್ ಇಲಾಖೆಯಿಂದ ನಗರ, ಪಟ್ಟಣಗಳಲ್ಲಿ ನಾಲ್ಕು ಸಾವಿರ ಬ್ಯಾರಿಕೇಡ್ ಅಳವಡಿ ಜನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಪೊಲೀಸ್ ಇಲಾಖೆ ಅನಗತ್ಯ ಜನಸಂಚಾರ ತಡೆಗಟ್ಟಲು ಈಗಾಗಲೇ ಸಾಕಷ್ಟು ಯತ್ನಿಸಿದರು ಜನರು ಒಂದಲ್ಲ ಒಂದು ನೆಪ ಹೇಳಿ ಮನೆಯಿಂದ ಹೋರ ಬರುತ್ತಿದ್ದರು. ಕೇಳಿದರೆ ಜಿಲ್ಲಾಡಳಿತ ನೀಡಿದ ಪಾಸ್ ತೋರಿಸಿ ಬೇಕು ಬೇಡವಾದಲ್ಲೆಲ್ಲ ಓಡಾಡುತ್ತಿದ್ದರು. ಆದರೆ, ಆಂಧ್ರ, ತೆಲಂಗಾಣದಿಂದ ಬಂದ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸೋಂಕು ಹರಡುವ ಸಾಧ್ಯತೆಗಳಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ರಾಯಚೂರು ಸೇರಿದಂತೆ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಪ್ರದೇಶದಿಂದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೂ ಬ್ಯಾರಿಕೇಡ್ ಅಡ್ಡಗಟ್ಟಲಾಗುತ್ತಿದೆ. ತುರ್ತು ಕೆಲಸವಿದ್ದಲ್ಲಿ ಮಾತ್ರ ಬೇರೆಡೆಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಇಲ್ಲವಾದರೆ ಅಗತ್ಯ ವಸ್ತುಗಳ ಖರೀದಿಗೆ ತಮ್ಮ ಪ್ರದೇಶದಲ್ಲೇ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲೇ ಇರುವಂತೆ ತಿಳಿಸಲಾಗುತ್ತಿದೆ. ಪೊಲೀಸರ ಮಾತು ಮೀರಿಯೂ ಓಡಾಡಿದಲ್ಲಿ ಅಂಥವರ ಬೈಕ್‌ಗಳನ್ನು ಸೀಜ್ ಮಾಡುತ್ತಿದ್ದು, ಸವಾರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗುರುವಾರ ಜಿಲ್ಲಾದ್ಯಂತ 244 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದು, 30 ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.