ಲಾಕ್‌ಡೌನ್ ಸಡಿಲ: ಹೆಚ್ಚಿದ ಜನದಟ್ಟಣೆ
Team Udayavani, Apr 26, 2020, 12:15 PM IST
ರಾಯಚೂರು: ಚಂದ್ರಮೌಳೇಶ್ವರ ವೃತ್ತದಲ್ಲಿ ಅನಗತ್ಯವಾಗಿ ಓಡಾಡಿದ ಯುವಕರನ್ನು ಆಂಬುಲೆನ್ಸ್ ಹತ್ತಿಸಿದ ಪೊಲೀಸರು.
ರಾಯಚೂರು: ಕಳೆದೆರಡು ದಿನಗಳಿಂದ ಲಾಕ್‌ಡೌನ್ ತುಸು ಸಡಿಲಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಜನಸಂಚಾರ ಹೆಚ್ಚಾಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಿಮಿಸಿದೆ.
ಸರ್ಕಾರ ಕೆಲವೊಂದು ಕಾರಣಕ್ಕೆ ಮಾತ್ರ ನಿಯಮ ಸಡಿಲಿಕೆ ಮಾಡಿದ್ದರೂ, ಸಾಕಷ್ಟು ಜನ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ನಗರದತ್ತ ಮುಖ ಮಾಡುತ್ತಿದ್ದಾರೆ. ಕೇಳಿದರೆ ಸರ್ಕಾರ ಸಡಿಲ ಮಾಡಿದೆಯಲ್ಲ. ನೀವ್ಯಾಕೆ ತಡೆಯುತ್ತೀರಿ ಎಂದು ಪೊಲೀಸರ ಜತೆ ವಾಗ್ವಾದಕ್ಕಿಳಿಯುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ.
ಶನಿವಾರ ನಗರದ ಮುಖ್ಯ ರಸ್ತೆಗಳು, ಬಜಾರ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವಷ್ಟು ಜನಸಂದಣಿ ಇತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವಲ್ಲಿ ಹೈರಾಣವಾದರು. ಕೃಷಿಗೆ ಸಂಬಂಧಿಸಿದ ಗೊಬ್ಬರದ ಅಂಗಡಿ, ಸರಕು ಸಾಮಗ್ರಿಗಳ ಅಂಗಡಿ, ಯಂತ್ರೋಪಕರಣಗಳ ಅಂಗಡಿ, ಮೆಕ್ಯಾನಿಕ್ ಶಾಪ್‌ಗ್ಳು, ಇಲೆಕ್ಟ್ರಿಕಲ್ ಅಂಗಡಿಗಳು, ಮೆಡಿಕಲ್ ಗಳು ಸೇರಿದಂತೆ ಸಾಕಷ್ಟು ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಇಷ್ಟು ದಿನ ನಗರದತ್ತ ಮುಖ ಮಾಡದವರು ವಿವಿಧ ಕೆಲಸದ ನಿಮಿತ್ತ ಆಗಮಿಸಿದ್ದಾರೆ. ಆದರೆ, ಬೇರೆ ಜಿಲ್ಲೆಗಳಿಂದ, ರಾಜ್ಯದಿಂದ ಯಾರಿಗೂ ಪ್ರವೇಶ ನೀಡದೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.