ಮೀಸಲು ಬದಲಿಗೆ ಬಾದರ್ಲಿ ಒತ್ತಡ?

Team Udayavani, Jan 25, 2019, 11:19 AM IST

ಗೊರೇಬಾಳ: ಜೆಡಿಎಸ್‌-ಕಾಂಗ್ರೆಸ್‌ ಜಂಗಿ ಕುಸ್ತಿಗೆ ಕಾರಣವಾಗಿದ್ದ ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿಗೆ ಸಂಬಂಧಿಸಿದಂತೆ ಸೆ.3ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯೇ ಅಂತಿಮ ಎಂದು ನ್ಯಾಯಾಲಯ ತಿಳಿಸಿದೆ. ಆದರೂ ಇದೀಗ ಮತ್ತೇ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಬೆಂಗಳೂರಿನಲ್ಲಿ ಬೀಡು ಬಿಟ್ಟು ಕೈ ನಾಯಕರ ಮೇಲೆ ಒತ್ತಡ ತಂದು ಮೀಸಲಾತಿ ಬದಲಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

2018ರ ಆ.31ರಂದು ಸಿಂಧನೂರು ನಗರಸಭೆಗೆ ನಗರಸಭೆಗೆ ಚುನಾವಣೆ ನಡೆದಿತ್ತು. ಸೆ.3ರಂದು ಫಲಿತಾಂಶ ಪ್ರಕಟವಾಗಿತ್ತು. ಅಂದೇ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿದ್ದರಿಂದ ನಗರಸಭೆ ಚುನಾವಣಾ ಫಲಿತಾಂಶದಲ್ಲಿ 20 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದರೂ ಅಧ್ಯಕ್ಷ ಸ್ಥಾನದಿಂದ ವಂಚಿತವಾಯಿತು. ಇದನ್ನು ಅರಗಿಸಿಕೊಳ್ಳಲಾಗದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅಂದೇ ಬೆಂಗಳೂರಿಗೆ ತೆರಳಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮೂಲಕ ಮೈತ್ರಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ಸೆ.6ರಂದು ರಾಜ್ಯ ಸರ್ಕಾರ ಮೀಸಲಾತಿ ಪರಿಷ್ಕರಿಸಿ ಮತ್ತೂಂದು ಅಧಿಸೂಚನೆ ಹೊರಡಿಸಿತ್ತು. ಇದರನ್ವಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸಾಮಾನ್ಯಕ್ಕೆ ಮೀಸಲಾದವು.

ಸರ್ಕಾರದ ಆದೇಶ ವಿರೋಧಿಸಿ ಸಿಂಧನೂರು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸುಮಾರು ಐದಾರು ತಿಂಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಇದರ ನಡುವೆ ರಾಜ್ಯ ಸರ್ಕಾರ ಸೆ.6ರಂದು ಹೊರಡಿಸಿದ ಅಧಿಸೂಚನೆ ಹಿಂಪಡೆದು 3ರಂದು ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನೇ ಮಾನ್ಯ ಮಾಡಿದೆ. ಸುದೀರ್ಘ‌ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ. ಈ ಮೂಲಕ ಸೆ.3ರಂದು ಹೊರಡಿಸಿದ ಆದೇಶವೇ ಅಂತಿಮವಾಗಿರುವುದರಿಂದ ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾದಂತಾಗಿದೆ. ಇದರಿಂದ ನಾಡಗೌಡ ಚಾಣಾಕ್ಷ ರಾಜಕಾರಣಕ್ಕೆ ಗೆಲುವು ದಕ್ಕಿದರೆ, ಇನ್ನೊಂದೆಡೆ ಮಾಜಿ ಶಾಸಕ ಬಾದರ್ಲಿ ಬಳಗಕ್ಕೆ ತೀವ್ರ ಹಿನ್ನಡೆಯಾಗಿದೆ.

ನಾಡಗೌಡ ಚಾಣಾಕ್ಷ ನಡೆ: ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ನಗರದಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗಿದ್ದನ್ನು ಮನಗಂಡಿದ್ದ ಸಚಿವ ವೆಂಕಟರಾವ್‌ ನಾಡಗೌಡ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರುವುದಿಲ್ಲ ಎನ್ನುವುದನ್ನು ಅರಿತಿದ್ದರು. ಆದರೂ ಅಧಿಕಾರ ಜೆಡಿಎಸ್‌ಗೆ ಸಿಗಬೇಕು ಎನ್ನುವ ಮುಂದಾಲೋಚನೆಯಿಂದ ಸಿಂಧನೂರು ನಗರಸಭೆ ಮೀಸಲಾತಿ ಪರಿಗಣಿಸಿ, ಎಸ್‌ಟಿ ಮಹಿಳೆ ಜೆಡಿಎಸ್‌ನಲ್ಲಿ ಮಾತ್ರ ಗೆಲ್ಲುವ ಲೆಕ್ಕಾಚಾರದೊಂದಿಗೆ ಅಧ್ಯಕ್ಷ ಸ್ಥಾನವೂ ಎಸ್‌ಟಿ ಮಹಿಳೆಗೆ ಮೀಸಲಿಡುವಂತೆ ಚಾಣಾಕ್ಷತೆ ಮೆರೆದರು. ಅವರ ಚಾಣಾಕ್ಷತನದಂತೆ ಈಗ ಎಲ್ಲವೂ ನಡೆದಿದೆ. ಇದರೊಂದಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲು ಬದಲಿಗೆ ನಡೆಸಿದ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದ್ದು, ಅವರಿಗೆ ಹಿನ್ನಡೆ ಆಗಿದೆ.

ಮತ್ತೆ ಮೀಸಲು ಬದಲಿಗೆ ಒತ್ತಡ: ಬಹುಮತ ಪಡೆದ ಕಾಂಗ್ರೆಸ್‌ ನಗರಸಭೆ ಅಧಿಕಾರ ಹಿಡಿಯಲೇಬೇಕು ಎನ್ನುವ ಪಟ್ಟಿನೊಂದಿಗೆ ಹಂಪನಗೌಡ ಬಾದರ್ಲಿ ಈಗ ಮತ್ತೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಮೀಸಲಾತಿ ಬದಲಾವಣೆ ಮಾಡಲು ಕೈ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುದಗಲ್ಲ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗಾಗಿ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಇಲ್ಲಿನ ಸರ್ಕಾರಿ ಮಾದರಿ...

  • ರವೀಂದ್ರ ಮುಕ್ತೇದಾರ ಔರಾದ: ಹೈದರಾಬಾದ ಕರ್ನಾಟಕದ ಪ್ರದೇಶದಲ್ಲಿ ಏಕೈಕ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಭು ಚವ್ಹಾಣ ಅನಾಥವಾಗಿದ್ದ ತಾಲೂಕಿನ ಹದಿನೈದು...

  • ರಾಯಚೂರು: ಹಿಂದುಳಿದ ಜಿಲ್ಲೆಗೆ ಪ್ರಾತಿನಿಧ್ಯ, ಪರಿಶಿಷ್ಟ ಪಂಗಡದ ಕೋಟಾದಡಿ ಜಿಲ್ಲೆಗೆ ಸಿಗಬಹುದು ಎಂಬ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಈಗ 17 ಶಾಸಕರು ಮಾತ್ರ ಸಂಪುಟ...

  • •ದೇವಪ್ಪ ರಾಠೊಡ ಮುದಗಲ್ಲ: ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಔಷದಿ ಕೊರತೆ ಉಂಟಾಗಿದೆ. ಕಳೆದ ಆರು ತಿಂಗಳಿಂದ ಸರಕಾರ ಆರೋಗ್ಯ ಕೇಂದ್ರಗಳಿಗೆ...

  • ದೇವದುರ್ಗ: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ವಿತರಿಸುವ ಸಲುವಾಗಿ ಶೂ ಸಾಕ್ಸ್‌ ಖರೀದಿಸಲು 1.27 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೈಕ್ಷಣಿಕ ವರ್ಷ ಆರಂಭವಾಗಿ...

ಹೊಸ ಸೇರ್ಪಡೆ