ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಡಗರ

ಮಂತ್ರಾಲಯದಿಂದ ಹಿಂದೂ ಧರ್ಮದ ಪರಿರಕ್ಷಣೆ: ಸುಬುಧೇಂದ್ರ ತೀರ್ಥರು

Team Udayavani, Aug 18, 2019, 5:56 AM IST

ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು.

ಸಂಪ್ರದಾಯದಂತೆ ಈ ವರ್ಷವೂ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವರ ಶೇಷವಸ್ತ್ರಗಳನ್ನು ಟಿಟಿಡಿ ಅಧಿಕಾರಿ ಗಳು ರಾಯರ ಮಠಕ್ಕೆ ತಂದರು. ಮುಖ್ಯ ದ್ವಾರದಿಂದ ಮಠದವರೆಗೆ ಅದ್ಧೂರಿ ಮೆರ ವಣಿಗೆ ಮೂಲಕ ಶೇಷವಸ್ತ್ರಗಳನ್ನು ಬರ ಮಾಡಿಕೊಳ್ಳಲಾಯಿತು. ನಂತರ, ಮಠದ ಪೀಠಾಧಿಪತಿಗಳು ಅವುಗಳನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಿದರು.

ಬಳಿಕ, ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನೆರವೇರಿಸಿದರು. ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಎಳನೀರು, ವಿವಿಧ ಬಗೆಯ ಹಣ್ಣುಗಳಿಂದ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ಮಠದ ಪ್ರಾಂಗಣದಲ್ಲಿ ಬೃಹದಾಕಾರದ ಎಲ್ಇಡಿ ಪರದೆಗಳಲ್ಲಿ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರು ಅಲ್ಲಿಂದಲೇ ಅಭಿಷೇಕದ ದೃಶ್ಯಗಳನ್ನು ಕಣ್ತುಂಬಿಕೊಂಡರು.

ನಂತರ ಮಠದ ಪ್ರಾಕಾರದಲ್ಲಿ ಪ್ರಹ್ಲಾದರಾಜರ ಉತ್ಸವ ಪ್ರಭಾವಳಿಯನ್ನು ನವರತ್ನ ಖಚಿತ ಚಿನ್ನದ ರಥದಲ್ಲಿಟ್ಟು ರಥೋ ತ್ಸವ ನೆರವೇರಿಸಲಾಯಿತು. ಕೋಲಾಟ, ಚಂಡೆ ಸೇರಿ ವಿವಿಧ ವಾದ್ಯಮೇಳಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು. ನಟ ಜಗ್ಗೇಶ, ಅವರ ಸಹೋದರ ಕೋಮಲ್, ಹಿರಿಯ ನಟ ಶಿವರಾಂ, ಶಾಸಕ ಅರವಿಂದ ಲಿಂಬಾವಳಿ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಹಿಂದೂ ಧರ್ಮದ ಪರಿರಕ್ಷಣೆಗೆ ಮೊದಲಾದ್ಯತೆ: ಈ ವೇಳೆ, ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ವಿಶ್ವದಲ್ಲಿ ಹಿಂದೂ ಧರ್ಮದ ಪರಿರಕ್ಷಣೆ ಮಾಡು ತ್ತಿರುವ ಮಠಗಳಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಅಗ್ರಗಣ್ಯವಾಗಿದೆ. ಸನಾತನ ಹಿಂದೂ ಧರ್ಮ ಪ್ರಚಾರಕ್ಕೆ ತಿರುಮಲ ತಿರುಪತಿ ದೇವಸ್ಥಾನ ಹೆಸರುವಾಸಿ. ಅಂಥ ಮತ್ತೂಂದು ಸ್ಥಳವಿದ್ದರೆ ಅದು ಮಂತ್ರಾಲಯದ ರಾಯರ ಮಠವಾಗಿದೆ. ಹಿಂದೂ ಧರ್ಮದ ಸಂಘಟನೆಗೆ ಮಠದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಾಸಸಾಹಿತ್ಯ ಪ್ರಾಜೆಕ್ಟ್, ಗ್ರಂಥ ಪ್ರಕಾಶನ, ವಿದ್ಯಾಮಂದಿರಗಳ ಸ್ಥಾಪನೆ, ಮಾಸಪತ್ರಿಕೆ, ಮಠ-ಮಂದಿರಗಳ ಸ್ಥಾಪನೆ ಮಾಡುವ ಮೂಲಕ ಹಿಂದೂ ಧರ್ಮದ ರಕ್ಷಣೆಗೆ ಮಠ ಅವಿರತ ಶ್ರಮಿಸುತ್ತಿದೆ ಎಂದರು.

ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ವಸ್ತ್ರರೂಪದಲ್ಲಿ ಇಲ್ಲಿಗೆ ಆಗಮಿಸಿ ರಾಯರ ಮೂಲಕ ಭಕ್ತರನ್ನು ಅನುಗ್ರಹಿಸುತ್ತಾರೆ. ವೆಂಕಟೇಶ್ವರ ಸ್ವಾಮಿಯಂಥ ಮಹಾದೈವ, ರಾಘವೇಂದ್ರ ಸ್ವಾಮಿಯಂಥ ಮಹಾಗುರು ಏಕಕಾಲದಲ್ಲಿ ಕಾಣುವ ಸುದೈವ ಭಕ್ತರಿಗೆ ಇಂದು ಲಭಿಸಿದೆ. ತಿರುಪತಿ ದೇವಸ್ಥಾನಕ್ಕೂ, ಮಂತ್ರಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಈ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ರಾಯರು ಕಷ್ಟದಲ್ಲಿರುವ ಎಲ್ಲರನ್ನೂ ರಕ್ಷಿಸಲಿ. ನೆರೆಗೆ ತುತ್ತಾಗಿ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಸಿರಿ ಸಂಪತ್ತು ಕರುಣಿಸಲಿ. ಲೋಕದಲ್ಲಿ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಲೋಕ ಸಮೃದ್ಧಿಯಿಂದಿರಲಿ ಎಂದು ರಾಯರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ