ಜನಾಕರ್ಷಿಸಿದ “ಸಖೀ’ ಮತಗಟ್ಟೆ ಕೇಂದ್ರ
Team Udayavani, Apr 18, 2021, 7:33 PM IST
ರಾಯಚೂರು: ಮಸ್ಕಿ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಕೇಂದ್ರೀಕರಿಸಿ ಸ್ಥಾಪಿಸಿದ 2 ಸಖೀ ಮತಗಟ್ಟೆಗಳು ಎಲ್ಲರನ್ನು ಆಕರ್ಷಿಸಿದವು.
ಮಸ್ಕಿ ಹಾಗೂ ತುರುವಿಹಾಳ ಪಟ್ಟಣದಲ್ಲಿ ತಲಾ ಒಂದು ಸಖೀ ಮತಗಟ್ಟೆ ಸ್ಥಾಪಿಸಲಾಗಿತ್ತು. ಸಂಪೂರ್ಣ ಗುಲಾಬಿ ಬಣ್ಣದ ರಿಬ್ಬನ್ ಗಳು, ಫ್ಲೆಕ್ಸ್‌ಗಳು, ಬಲೂನ್‌ಗಳಿಂದ ಕಂಗೊಳಿಸಿದ ಈ ಮತಗಟ್ಟೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಮಸ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ ಸಖೀ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದ ಯುವತಿ ಅಕ್ಷತಾ ಮಸ್ಕಿ ಅವರಿಗೆ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಸಸಿ ನೀಡಿ ಅಭಿನಂದಿಸಿದರು.
ಇನ್ನೂ ಮತಗಟ್ಟೆಯಲ್ಲಿ ಸ್ಥಾಪಿಸಿದ ಸೆಲಿ ಕಾರ್ನರ್‌ನಲ್ಲಿ ಯುವತಿಯರು, ಮಹಿಳೆ ಯರು ಸೇಲ್ಫಿ ಪಡೆದರು. ಪುರುಷರು ಕೂಡ ´ಫೋಟೋ ತೆಗೆದುಕೊಂಡರು. ಇದರ ಜತೆಗೆ ಮಕ್ಕಳನ್ನು ತರೆ ತಂದಿದ್ದರೆ ಅವರಿಗೆ ಆಟವಾಡಲು ಆಟಿಕೆಗಳ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರು ಸಿಬ್ಬಂದಿಯನ್ನು ಇದೇ ಕೆಲಸಕ್ಕೆ ನಿಯೋಜಿಸಲಾಗಿತ್ತು.
ಮತಗಟ್ಟೆ ಮುಂಭಾಗವೂ ವರ್ಣರಂಜಿತ ದೀಪಗಳನ್ನು ಹಾಕಿದ್ದರೆ, ಮರಕ್ಕೂ ಗುಲಾಬಿ ರಿಬ್ಬನ್‌ಗಳನ್ನು ಕಟ್ಟಿ ವಿಶೇಷ ಅಲಂಕಾರ ಮಾಡಲಾಗಿತ್ತು.