ಮೈತ್ರಿಕೂಟ ಅಭ್ಯರ್ಥಿಗಳ ಗೆಲುವು ಖಚಿತ: ಗುಂಡೂರಾವ್‌

Team Udayavani, Oct 22, 2018, 12:53 PM IST

ಹೊಸಪೇಟೆ: ನವೆಂಬರ್‌ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯದ 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದ ಹೋಟೆಲ್‌ ಮಲ್ಲಿಗಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದದ ಅವರು, ರಾಜ್ಯದಲ್ಲಿ ನಡೆಯುತ್ತಿರುವ 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಒಲವು ಕಂಡು ಬರುತ್ತಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಬಗ್ಗೆ ಮತದಾರರಲ್ಲಿ ಹೆಚ್ಚಿನ ಒಲವು ಕಂಡು ಬರುತ್ತಿದೆ ಎಂದರು. 

 ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ, ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಜ್ವಲಂತ ಸಮಸ್ಯೆಗಳ ಕುರಿತು ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಧ್ವನಿಯೆತ್ತುವ ಮೂಲಕ ತಮಗೆ ವಹಿಸಿದ ಕೆಲಸಗಳನ್ನು ಈವರೆಗೆ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಇತ್ತೀಚೆಗೆ ಆಯ್ಕೆಯಾದ ಸಂಸದರಿಂದ ಕ್ಷೇತ್ರಕ್ಕೆ ಈವರೆಗೆ ಯಾವುದೇ ಲಾಭವಾಗಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರು ಈವರೆಗೆ ಧ್ವನಿಯೆತ್ತಿಲ್ಲ. ಅಲ್ಲದೆ ಇವರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ಅಧಿಕಾರಕ್ಕಾಗಿ ಹಣ ಬಲ ಮತ್ತು ತೋಳ್ಬಲದಿಂದ ಚುನಾವಣೆ ಎದುರಿಸಿದ್ದಾರೆ. ಅಲ್ಲದೆ ಪದೇ ಪದೇ ರಾಜೀನಾಮೆ ನೀಡುವ ಮೂಲಕ ಉಪಚುನಾವಣೆಗಳಿಗೆ ಕಾರಣರಾಗಿದ್ದಾರೆ. ಇಂತಹವರಿಗೆ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬಳ್ಳಾರಿ ಜಿಲ್ಲೆಯ ಜನ ಯಾವಾಗಲೂ ಕಾಂಗ್ರೆಸ್‌ ಪಕ್ಷವನ್ನು ಕೈಬಿಟ್ಟಿಲ್ಲ.

ನಮ್ಮಲ್ಲಿನ ಒಡಕಿನಿಂದಾಗಿ ನಮಗೆ ಹಿನ್ನಡೆಯಾಗಿತ್ತು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಸಮ್ಮಿಶ್ರ ಸರ್ಕಾರದಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಜಿಲ್ಲೆಯ 6 ಶಾಸಕರು ನಮ್ಮೊಂದಿಗೆ ಇರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಗೆಲುವು ಸುಲಭವಾಗಲಿದೆ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು ಎಂಬ ದೃಷ್ಟಿಯಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಿಂದ ಮಧು ಬಂಗಾರಪ್ಪ ರನ್ನು ಕಣಕ್ಕಿಳಿಸಲಾಗಿದೆ. ಇದರಿಂದಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ನಡುಕ ಉಂಟಾಗಿದೆ. ಸಚಿವರಾದ ಡಿ.ಕೆ. ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೊಳಿಯವರ ಮುನಿಸು ಅದು ಅವರ ವೈಯಕ್ತಿಕ ವಿಚಾರ. ಇದರಿಂದಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಯಾವುದೇ ತೊಂದರೆಯಾಗುವುದಿಲ್ಲ. 

ತಮಗೆ ವಹಿಸಿದ ಕ್ಷೇತ್ರಗಳನ್ನು ಪಕ್ಷದ ಮುಖಂಡರು, ಶಾಸಕರು ಹಾಗೂ ಸಚಿವರುಗಳು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಡಿಕೆಶಿ ನೀಡಿರುವ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದಕ್ಕೂ ಮೈತ್ರಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಉದ್ದೇಶ. ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟಕ್ಕೆ ಸಿಪಿಐ(ಎಂ) ಸೇರಿದಂತೆ ಎಡಪಕ್ಷಗಳು ಬೆಂಬಲ ಸೂಚಿಸಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಆನಂದ್‌ ಸಿಂಗ್‌, ಅಮರೇಗೌಡ ಬಯ್ನಾಪೂರ, ರಾಜ್ಯಸಭೆ ಸದಸ್ಯ ನಾಸೀರ್‌ ಹುಸೇನ್‌, ಎಐಸಿಸಿ ಕಾರ್ಯದರ್ಶಿ ಸಾಕೆ ಶೈಲಜಾನಾಥ್‌, ಡಿಸಿಸಿ ಗ್ರಾಮೀಣ ಅಧ್ಯಕ್ಷ ಬಿ.ವಿ. ಶಿವಯೋಗಿ, ಕೆಪಿಸಿಸಿ ಕಾರ್ಯದರ್ಶಿ ಗುಜ್ಜಲ ರಘು, ಮುಖಂಡರಾದ ಮಂಜುನಾಥ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಮ್ಮಾಜಿ ಹೇಮಣ್ಣ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಬಾಗುವಾನ್‌ ಫ‌ಹೀಂ ಬಾಷಾ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗೊರೇಬಾಳ: ಸಿಂಧನೂರು ತಾಲೂಕಿನ 3ನೇ ಮೈಲ್‌ ಕ್ಯಾಂಪ್‌ನ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ನಿರ್ಮಾಣಕ್ಕೆ...

  • ಲಿಂಗಸುಗೂರು: ತಾಲೂಕಿನ ಜಾಗೀರ ನಂದಿಹಾಳ ಗ್ರಾಮದಲ್ಲಿ ಬಸಿ ನೀರಿನಿಂದಾಗಿ ಗ್ರಾಮಸ್ಥರು ನೂರೆಂಟು ಸಮಸ್ಯೆ ಎದುರಿಸುವಂತಾಗಿದೆ. ಚಿತ್ತಾಪುರ ಗ್ರಾಮ ಪಂಚಾಯಿತಿ...

  • ರಾಯಚೂರು: ನಾರಾಯಣಪುರ ಜಲಾಶಯದಿಂದ ಹೆಚ್ಚುವರಿ ನೀರು ಕೃಷ್ಣ ನದಿಗೆ ಹರಿಸಿದ್ದು ಪ್ರವಾಹಕ್ಕೆ ಸಿಲುಕಿದ್ದ ಮೂವರು ಕುರಿಗಾಹಿಗಳನ್ನು ರಕ್ಷಣಾ ಪಡೆ ಸುರಕ್ಷಿತ...

  • ಸಿಂಧನೂರು: ನಗರದ ಯಲಿಮಂಚಾಲಿ ವಾಸುದೇವರಾವ್‌ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಆ.22, 23ರಂದು ನಡೆಯಲಿರುವ ರಾಯಚೂರು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ...

  • ಹಣಮಂತರಾವ ಭೈರಾಮಡಗಿ ಕಲಬುರಗಿ: ಕಳೆದ 2018-19ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆವಿಮೆ ಕಲಬುರಗಿ ಜಿಲ್ಲೆಗೆ ಕೇವಲ 8 ಕೋಟಿ ರೂ. ಬಿಡುಗಡೆಯಾಗಿದ್ದು, ಬೆಳೆವಿಮೆ ಮಂಜೂರಾತಿಯಲ್ಲಿನ...

ಹೊಸ ಸೇರ್ಪಡೆ