ಬರದ ನಡುವೆ ಮತ್ತೆ ನೆರೆ ಭೀತಿ

ಕೃಷ್ಣೆಗೆ 2.50 ಲಕ್ಷ ಕ್ಯೂಸೆಕ್‌ ನೀರು •ತುಂಗಭದ್ರೆಗೆ 1.12 ಲಕ್ಷ ಕ್ಯೂಸೆಕ್‌ ನೀರು

Team Udayavani, Sep 9, 2019, 7:31 PM IST

ಲಿಂಗಸುಗೂರು: ಮುಳುಗಡೆಯಾಗಿರುವ ಶೀಲಹಳ್ಳಿ ಸೇತುವೆಗೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಜಿಪಂ ಎಇಇ ಶ್ರೀಮಂತ ಮಿಣಜಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಯಚೂರು: ಜಿಲ್ಲೆಯಲ್ಲಿ ಮಳೆಯಿಲ್ಲದಿದ್ದರೂ ಮತ್ತೂಮ್ಮೆ ಪ್ರವಾಹ ಪರಿಸ್ಥಿತಿ ಎದುರಿಸುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ. ಮಹಾರಾಷ್ಟ್ರ, ಉತ್ತರ ಕರ್ನಾಟಕದ ಮೇಲ್ಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗಿ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಅದೇ ರೀತಿ ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯದಿಂದಲೂ ನದಿಗೆ ನೀರು ಹರಿಬಿಟ್ಟಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಮತ್ತೇ ಪ್ರವಾಹ ಭೀತಿ ಮನೆ ಮಾಡಿದೆ.

ಕಳೆದ ಮೂರ್‍ನಾಲ್ಕು ದಿನಗಳಿಂದ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1ರಿಂದ 2.50 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಆರಂಭದಲ್ಲಿ 1.20 ಲಕ್ಷ ಕ್ಯೂಸೆಕ್‌ ಇದ್ದಂತ ನೀರು ಕ್ರಮೇಣ ಹೆಚ್ಚಾಗಿ ಕಡಿಮೆಯಾಗಿತ್ತು. ಇದೀಗ ಮತ್ತೆ ಹೆಚ್ಚಾಗಿ 2.51 ಲಕ್ಷ ಕ್ಯೂಸೆಕ್‌ ನೀರು ನದಿಗೆ ಬಿಡಲಾಗಿದೆ. ಇದರಿಂದಾಗಿ ದೇವದುರ್ಗ ತಾಲೂಕಿನ ಹೂವಿನಹೆಡಗಿ, ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆಗಳು ಮತ್ತೆ ಮುಳುಗಡೆ ಆಗುವ ಸಂಭವವಿದೆ. ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದ್ದರಿಂದ ಜಿಲ್ಲಾಡಳಿತ ದೇವದುರ್ಗ, ಲಿಂಗಸುಗೂರು ಮತ್ತು ರಾಯಚೂರು ತಾಲೂಕುಗಳ ನದಿಪಾತ್ರದ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ತುಂಗಭದ್ರಾ ಜಲಾಶಯದಿಂದಲೂ 1.12 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಸಿದ್ದರಿಂದ ತುಂಗಭದ್ರಾ ನದಿಪಾತ್ರದಲ್ಲಿಯೂ ಇದೀಗ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗಿ ಪರಿಸ್ಥಿತಿ ಹೀಗೆ ಇದ್ದಲ್ಲಿ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕಿನ ನದಿ ಸಮೀಪದ ಹಳ್ಳಿಗಳಿಗೆ ನೀರು ನುಗ್ಗುವ ಸಾಧ್ಯತೆಗಳು ಹೆಚ್ಚಾಗಿವೆ.

ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದರಿಂದ ಜಿಲ್ಲಾಡಳಿತ ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸಾರುತ್ತಿದೆ. ಸಾರ್ವಜನಿಕರು ನದಿ ಸಮೀಪ ಹೋಗಬಾರದು, ಪಂಪ್‌ಸೆಟ್‌ಗಳನ್ನು ತೆಗೆದಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡುತ್ತಿದೆ. ಇದರ ಜೊತೆಗೆ ಬೋಟ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ. ಒಂದು ತಿಂಗಳ ಹಿಂದೆಯಷ್ಟೇ ಪ್ರವಾಹ ಪರಿಸ್ಥಿತಿ ಎದುರಿಸಿ, ಊರು ಮನೆ-ಮಠ ಬಿಟ್ಟು ಪರಿಹಾರ ಕೇಂದ್ರದಲ್ಲಿ 15ಕ್ಕೂ ಹೆಚ್ಚು ದಿನ ಜೀವನ ನಡೆಸಿದ್ದ ಸಂತ್ರಸ್ತರಿಗೆ ಇದೀಗ ಮತ್ತೂಂದು ಶಾಕ್‌ ಎದುರಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ