ಜೀವಸಂಕುಲಕ್ಕೆ ಪ್ರಾಣಸಂಕಟ

ಕೃಷ್ಣೆಗೆ 6.20 ಲಕ್ಷ ಕ್ಯೂಸೆಕ್‌-ಭೀಮಾ ನದಿಗೆ 2.85 ಲಕ್ಷ ಕ್ಯೂಸೆಕ್‌ ನೀರು •ಗ್ರಾಮಗಳಲ್ಲಿ ಪ್ರವಾಹ

Team Udayavani, Aug 11, 2019, 10:51 AM IST

ರಾಯಚೂರು: ಗುರ್ಜಾಪುರದವರೆಗೂ ನುಗ್ಗಿದ ಕೃಷ್ಣಾ ನದಿ ನೀರು.

ರಾಯಚೂರು: ಮಿತಿಮೀರಿ ಪ್ರವಹಿಸಿದ ಕೃಷ್ಣಾ ನದಿ ಆರ್ಭಟಕ್ಕೆ ಜಿಲ್ಲೆಯ ನದಿ ಪಾತ್ರದ ಜನಜೀವನ ಅಕ್ಷರಶಃ ಮೂರಾಬಟ್ಟೆಯಾಗಿದೆ. ಪ್ರವಾಹಕ್ಕೆ ಹೆದರಿ ಹಲವರು ಊರು ಬಿಟ್ಟರೆ, ಉಳಿದವರನ್ನು ಜಿಲ್ಲಾಡಳಿತವೇ ಸ್ಥಳಾಂತರ ಮಾಡಿಸುತ್ತಿದೆ.

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಶನಿವಾರ ಬೆಳಗ್ಗೆ 5 ಲಕ್ಷ ಕ್ಯೂಸೆಕ್‌ ಇದ್ದ ನೀರಿನ ಪ್ರಮಾಣ ಮಧ್ಯಾಹ್ನ 2 ಗಂಟೆ ಹೊತ್ತಿಗೆ 6.20 ಲಕ್ಷ ಕ್ಯೂಸೆಕ್‌ ತಲುಪಿತ್ತು. ಇದರ ಜತೆಗೆ ಸನ್ನತಿ ಜಲಾಶಯದಿಂದಲೂ ಭೀಮಾ ನದಿಗೆ 2.85 ಲಕ್ಷ ಕ್ಯೂಸೆಕ್‌ ನೀರು ಹರಿಸಿದ ಪರಿಣಾಮ ಸಂಜೆ ವೇಳೆಗೆ ನದಿಗೆ 9 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗಿದೆ. ಇದರಿಂದ ರಾಯಚೂರು ತಾಲೂಕಿನ ಅರಷಿಣಿಗಿ, ಗುರ್ಜಾಪುರ ಬೂರ್ದಿಪಾಡ್‌ ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿತು.

ಲಿಂಗಸುಗೂರು ತಾಲೂಕಿನ ಶೀಲಹಳ್ಳಿ, ಯರಗೋಡಿ, ಜಲದುರ್ಗ ಸೇತುವೆಗಳು ಸಂಪೂರ್ಣ ಮುಳುಗಿ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಆದರೆ, ಜಲದುರ್ಗದಲ್ಲಿ ನಡುಗಡ್ಡೆ ಜನರ ರಕ್ಷಣೆಗೆ ತೆರಳಿದ್ದ ಅಧಿಕಾರಿಗಳೇ ಸಿಲುಕಿದ್ದು, ಅವರ ರಕ್ಷಣೆಗೆ ಹರಸಾಹಸ ಪಡುವಂತಾಗಿದೆ.

ಜಿಲ್ಲೆಯ 51 ಹಳ್ಳಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಕೆಲ ಹಳ್ಳಿಗಳನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡುತ್ತಿದೆ. ನದಿಪಾತ್ರದ ನಾಲ್ಕು ಹಳ್ಳಿಗಳನ್ನು ಸಂಪೂರ್ಣ ಸ್ಥಳಾಂತರಿಸಿದರೆ, 12 ಹಳ್ಳಿಗಳಲ್ಲಿ ಅಪಾಯ ಇರುವ ಭಾಗದ ಜನರನ್ನು ಮಾತ್ರ ಸ್ಥಳಾಂತರಿಸಲಾಗಿದೆ. ರಾಯಚೂರು ತಾಲೂಕಿನ ಕೃಷ್ಣಾ ನದಿ ತೀರದ ಗುರ್ಜಾಪುರ ಗ್ರಾಮಸ್ಥರಿಗೆ ಕೂಡಲೇ ಸ್ಥಳಾಂತರಗೊಳ್ಳುವಂತೆ ಸೂಚಿಸಿದ ಅಧಿಕಾರಿಗಳು ಬಸ್‌, ಟ್ರ್ಯಾಕ್ಟರ್‌, ಕ್ರೂಸರ್‌ಗಳ ಮೂಲಕ ಜೇಗರಕಲ್ ಮಲ್ಲಾಪುರದ ಶಾಲೆಯಲ್ಲಿ ನಿರ್ಮಿಸಿದ ಪರಿಹಾರ ಕೇಂದ್ರಕ್ಕೆ ಕಳುಹಿಸಿದರು.

ಅಲ್ಲದೇ, ಕಾಡ್ಲೂರು, ಅರಶಿಣಗಿ, ದೇವಸುಗೂರು, ಗುಂಜಳ್ಳಿ, ಕರೆಕಲ್, ಆತ್ಕೂರು, ಡಿ.ರಾಂಪುರ ಸೇರಿ ದೇವದುರ್ಗ, ಲಿಂಗಸೂಗೂರು ತಾಲೂಕಿನ ಅನೇಕ ಕಡೆ ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ಜಿಲ್ಲೆಯ ನಡುಗಡ್ಡೆಗಳಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್‌ ತಂಡ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ದೇವದುರ್ಗ ತಾಲೂಕಿನ ಅಂಜಳ ಗ್ರಾಮಕ್ಕೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಹತ್ತು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 15 ಜನರನ್ನು ಸ್ಥಳಾಂತರಿಸಲಾಗಿದೆ. ದೇವದುರ್ಗ ತಾಲೂಕಿನ ಕರ್ಕಿಹಳ್ಳದ 40 ಕುಟುಂಬದ 250 ಜನರನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಮನೆಗಳಿಗೂ ನೀರು ನುಗ್ಗಿದೆ.

ಲಿಂಗಸುಗೂರು ತಾಲೂಕಿನ ಜಲದುರ್ಗ ಸೇತುವೆ ಮುಳುಗಿದ್ದು, ಸೇತುವೆ ತಡೆಗೋಡೆ ಕೊಚ್ಚಿ ಹೋಗಿದೆ. ಈಗಾಗಲೇ ಶೀಲಹಳ್ಳಿ, ಯರಗೋಡಿ ಸೇತುವೆ ಮುಳುಗಡೆಯಿಂದ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಹೂವಿನಹೆಡಗಿ ಸೇತುವೆಯಿಂದಲೂ ನೀರು ಹರಿಯುತ್ತಿದ್ದು, ಸತತ 10 ದಿನದಿಂದ ಕಲಬುರಗಿ ಸಂಪರ್ಕ ಕಡಿತಗೊಂಡಿದೆ.

ದೇವದುರ್ಗ ತಾಲೂಕಿನ ಅಂಜಳ, ಗೂಗಲ್ ಪ್ರಭುಸ್ವಾಮಿ ದೇವಸ್ಥಾನ, ಅಂಗಡಿಗಳು, ಹೊಟೇಲ್ಗಳು ಮುಳುಗಿವೆ. ಹಿರೇರಾಯಕುಂಪಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಪರ್ತಾಪುರ, ಮುದ್ಗೋಟ್, ಹಿರೇರಾಯಕುಂಪಿ, ಕರಕಿಹಳ್ಳಿ, ಗುರ್ಜಾಪುರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ.

ಸಾವಿರಾರು ಎಕರೆ ಬೆಳೆ ನಾಶವಾದರೆ, ನೂರಾರು ಪಂಪ್‌ಸೆಟ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಇನ್ನೂ ಅನೇಕ ಕಡೆ ವಿದ್ಯುತ್‌ ಕಂಬಗಳು ಕೂಡ ನೀರಿನಲ್ಲಿ ಮುಳುಗಡೆಯಾಗಿದ್ದು, ವಿದ್ಯುತ್‌ ಕಡಿತಗೊಳಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ