ಎ‍ಚ್ಡಿಕೆ ಪತನ: ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆತಂಕ

ಜಿಲ್ಲೆಯನ್ನು ಮಾದರಿಯನ್ನಾಗಿ ರೂಪಿಸುವ ಕನಸು ಮತ್ತೂಮ್ಮೆ ಭಗ್ನ •ಜಿಲ್ಲೆಗೆ ಕುಡಿಯುವ ನೀರು ಮತ್ತೆ ಮರೀಚಿಕೆ

Team Udayavani, Jul 25, 2019, 3:48 PM IST

ಬಿ.ವಿ.ಸೂರ್ಯ ಪ್ರಕಾಶ್‌
ರಾಮನಗರ:
ಜಿಲ್ಲೆಯ ಚನ್ನಪಟ್ಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಮುಖ್ಯಮಂತ್ರಿಗಳಾಗಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಿಲ್ಲೆಯ ಜನತೆಯಲ್ಲಿ ಬೇಸರ ವ್ಯಕ್ತವಾಗಿದೆ. ಕಳೆದೊಂದು ವರ್ಷದಲ್ಲಿ ಜಿಲ್ಲೆಗೆ ಮಂಜೂರಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಲ್ಲಿ ಆತಂಕ ಮನೆ ಮಾಡಿದೆ.

ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಅವರ ಕನಸು ಮತ್ತೂಮ್ಮೆ ಭಗ್ನವಾಗಿದೆ ಎಂದು ಜನಸಾಮಾನ್ಯರು ಪ್ರತಿಕ್ರಿಯಿಸಿದ್ದಾರೆ. ನೀರಾವರಿ ಯೋಜನೆಗಳು, ಕುಡಿಯುವ ನೀರು ಯೋಜನೆ, ರಾಜೀವ್‌ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂಬ ನಿರೀಕ್ಷೆ ಇದ್ದವು. ಸಿಎಂ ಆಗಿ ಅವರು ಜಿಲ್ಲೆಯಲ್ಲಿ ನೂರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿದ್ದರು. ಇವುಗಳ ಪೈಕಿ ಬಹಳಷ್ಟು ಯೋಜನೆಗಳಿಗೆ ಚಾಲನೆಯೂ ದೊರೆತಿದ್ದವು. ಈ ಯೋಜನೆಗಳು ತಮ್ಮ ವೇಗವನ್ನು ಹೀಗೆ ಮುಂದುವರಿಸಲಿವೆಯೇ, ಮಂದಗತಿಗೆ ಜಾರುವುದೇ ಎಂದು ಜಿಲ್ಲೆಯ ಜನತೆ ಪ್ರಶ್ನಿಸಿದ್ದಾರೆ.

ಶುದ್ಧ ಕುಡಿಯುವ ನೀರು ಮತ್ತೆ ಮರೀಚಿಕೆಯೇ?: ಜಿಲ್ಲಾ ಕೇಂದ್ರ ರಾಮನಗರದ 1 ರಿಂದ 10ನೇ ವಾರ್ಡುಗಳಲ್ಲಿ ದಿನನಿತ್ಯ ಮಲೀನ ನೀರು ಪೂರೈಕೆಯಾಗುತ್ತಿದೆ. ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವಯಂ ಜಲಮಂಡಳಿಯೇ ಘೋಷಿಸಿದೆ. ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿದೆ. ಕೋಟಿ, ಕೋಟಿ ಬಿಡುಗಡೆಯಾಗಿದೆ ಎಂದು ಕುಮಾರಸ್ವಾಮಿ ಸೇರಿದಂತೆ ಅನಿತಾ ಕುಮಾರಸ್ವಾಮಿ ಅವರು ಪದೇ ಪದೆ ಹೇಳಿದ್ದರು. ಇದೀಗ ಮೈತ್ರಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡಿರುವುದರಿಂದ ಈ ಯೋಜನೆಗಳ ಗತಿ ಏನು ಎಂದು ಜಿಲ್ಲಾ ಕೇಂದ್ರದ ಜನತೆ ಪ್ರಶ್ನಿಸಿದ್ದಾರೆ. ಅಶುದ್ಧ ನೀರು ಪೂರೈಕೆಗೆ ತಾವು ಮಾಸಿಕ ಶುಲ್ಕ ಪಾವಿತಿಸುವ ಅನಿವಾರ್ಯತೆ ಎಲ್ಲಿಯವರೆಗೆ ಎಂಬ ಪ್ರಶ್ನೆಗಳು ಎದ್ದಿವೆ.

ಅವಳಿ ನಗರ!: ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಅವಳಿ ನಗರಗಳನ್ನಾಗಿ ರೂಪಿಸುವುದು, ಎರಡೂ ನಗರಗಳ ನಡುವೆ ಬೃಹತ್‌ ಎಪಿಎಂಸಿ ಮಾರುಕಟ್ಟೆ ನಿರ್ಮಾಣ, ರೇಷ್ಮೆ ಕೃಷಿಯಿಂದ ಉಪ ಉತ್ಪನ್ನಗಳ ಉತ್ಪಾದನೆ, ಮಾವು ಸಂಸ್ಕರಣಾ ಘಟಕ, ಕಣ್ವ ಜಲಾಶಯದ ಬಳಿ ಮಕ್ಕಳ ಪಾರ್ಕ್‌, ಕೆರೆಗಳನ್ನು ತುಂಬಿಸುವ ಯೋಜನೆ ಹೀಗೆ ಹಲವಾರು ಮೂಲ ಸೌಕರ್ಯವೃದ್ಧಿಸುವ ಯೋಜನೆಗಳು ನನೆಗುದಿಗೆ ಬಿದ್ದಾವು ಎಂಬ ಆತಂಕ ಮನೆ ಮಾಡಿದೆ.

ಅನಾಥ ಪ್ರಜ್ಞೆ ಕಾಡುತ್ತಿದೆ: ಮೈತ್ರಿ ಸರ್ಕಾರದಲ್ಲಿ ಚನ್ನಪಟ್ಟಣ ಶಾಸಕ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್‌ ಪ್ರಭಾವಿ ಸಚಿವರಾಗಿದ್ದರು. ರಾಮನಗರದಲ್ಲಿ ಸಿಎಂ ಪತ್ನಿ ಅನಿತಾ ಶಾಸಕರಾಗಿದ್ದರು. ರಾಜ್ಯದ ಘಟಾನು ಘಟಿಗಳೇ ಪ್ರತಿನಿಧಿಸುವ ಜಿಲ್ಲೆ ಎಂಬ ಖ್ಯಾತಿಗೆ ರಾಮನಗರ ಜಿಲ್ಲೆ ಪಾತ್ರವಾಗಿತ್ತು. ಆದರೆ ಈಗ ಮೈತ್ರಿ ಸರ್ಕಾರ ಪತನವಾದ ನಂತರ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಮೈತ್ರಿ ಪಕ್ಷಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ