ಅವನತಿಯತ್ತ ಸಾಗದಿರಲಿ ದೊಡ್ದಾಟ

ಮಕ್ಕಳ ಮೂಲಕ ಏನನ್ನಾದರೂ ಸಾಧಿಸಲು ಸಾಧ್ಯ: ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ

Team Udayavani, Oct 24, 2019, 6:41 PM IST

ರಾಮನಗರ: ದೊಡ್ಡಾಟ ಕಲೆ ಅವನತಿ ಆಗಕೂಡದು ಎಂದು ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ಹೇಳಿದರು.

ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಕಾಲಭೈರವ ದೊಡ್ಡಾಟ ಪ್ರದರ್ಶನದ ಉದ್ಘಾಟನಾ ಸಭೆಯಲ್ಲಿ ಅವರು ಮಾತನಾಡಿ, ಮಕ್ಕಳ ಮೂಲಕ ಏನನ್ನಾದರೂ ಸಾಧಿಸಲು ಸಾಧ್ಯ. ಅದಕ್ಕೆ ನಮ್ಮ ಸಂಕಲ್ಪ ಶಕ್ತಿ ಪೋಷಕವಾಗಿ ನಿಲ್ಲಬಲ್ಲದು. ಲಕ್ಷ್ಮೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳು ನಡೆಸಿಕೊಟ್ಟ ಕಾಲಭೈರವ ಪುರಾಣ ದೊಡ್ಡಾಟ ಪ್ರದರ್ಶನ ಇದಕ್ಕೆ ನಿದರ್ಶನ. ಕಾಲಭೈರವ ಪುರಾಣ ಕಥೆಯ ದೊಡ್ಡಾಟ ಪ್ರದರ್ಶನದ ಮೂಲಕ ಹೊಸ ಮನ್ವಂತರವನ್ನು ಈ ಭಾಗದಲ್ಲಿ ಬರೆಯಲಾಗಿದೆ. ಇಂತಹ ಕಲೆಯ ಅವನತಿ ಆಗಕೂಡದು ಎಂದರು.

ದೊಡ್ಡಾಟ ಅಭಿಜಾತ ಕಲೆ: ದೊಡ್ಡಾಟದ ಗುರು ಗೋವಿಂದಪ್ಪ ದ್ಯಾಮಪ್ಪ ತಳವಾರ ಮಾತನಾಡಿ, ದೊಡ್ಡಾಟ ಒಂದು ಅಭಿಜಾತ ಕಲೆ. ಸುಮಾರು ಐವತ್ತು ವರ್ಷಗಳಿಂದ ಈ ಪ್ರಯತ್ನವನ್ನು ದಕ್ಷಿಣ ಕರ್ನಾಟಕದ ಹಳೇ ಮೈಸೂರು ಪ್ರಾಂತದಲ್ಲಿ ಯಾರೂ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಈ ಪ್ರದರ್ಶನ ನಡೆಯುತ್ತಿದೆ. ಕಲೆಯ ಪುನರುಜ್ಜೀವನದ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆರು ತಿಂಗಳಿಂದ ತರಬೇತಿ: ಕೃಷ್ಣಾಪುರದೊಡ್ಡಿಯ ಕೆ.ಎಸ್‌. ಮುದ್ದಪ್ಪ ಸ್ಮಾರಕ ಟ್ರಸ್ಟ್‌ ಅಂಗ ಸಂಸ್ಥೆಗಳಾದ ಇಫ್ರೋ ಜಾನಪದ ಮಹಾವಿದ್ಯಾಲಯ, ಇಂಡಿಯನ್‌ ಫೋಕ್ಲೊ ರಿಸಚರರ್ಸಸ್‌ ಆರ್ಗನೈಸೇಷನ್‌, ಕರ್ನಾಟಕ ಬಯಲಾಟ ಅಕಾಡೆಮಿ, ರೋಟರಿ ಸಿಲ್ಕ… ಸಿಟಿ ರಾಮನಗರ ಹಾಗೂ ಲಕ್ಷ್ಮೀಪುರದ ಸರ್ಕಾರಿ ಪದವಿಪೂರ್ವ ಕಾಲೇಜು ಸಹಕಾರದಿಂದ ಕಳೆದ ಆರು ತಿಂಗಳಿಂದ ದೊಡ್ಡಾಟದ ಪ್ರದರ್ಶನಕ್ಕೆ ತರಬೇತಿ ನಡೆಸಿತ್ತು. ಹಾವೇರಿಯ ಗೋವಿಂದಪ್ಪ ನೃತ್ಯಗುರುವಾದರೆ; ಜಾನಪದ ವಿದ್ವಾಂಸ ಡಾ.ಎಂ. ಬೈರೇಗೌಡ ನಿರ್ದೇಶಿಸಿದ ಕಾಲಭೈರವ ಪುರಾಣ ಕಥೆಯನ್ನು ದೊಡ್ಡಾಟಕ್ಕೆ ಅಳವಡಿಸಿ ಕಾಲೇಜು ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ನೀಡಿದರು.

ಕಿನ್ನರ ಲೋಕ ಸೃಷ್ಟಿ!: ಗೆಜ್ಜೆಯ ನಾದ, ಹೆಜ್ಜೆಗಳ ಮೇಳ, ಸಂಗೀತದ ಹದನಾದ ಮಿಳಿತ, ವಾದ್ಯಗಳ ಸಹಯೋಗ, ಅದಕೊಂದು ನವಿರಾದ ಕಥಾಹಂದರ, ಸುರಿವ ಮಳೆ ಎಲ್ಲಕ್ಕೂ ಕಲಶಪ್ರಾಯವಾಗಿತ್ತು. ಲಕ್ಷ್ಮೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಲೇಜಿನ 30 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಆಟ ಕಿನ್ನರಲೋಕ ಸೃಷ್ಟಿಸಿತ್ತು.

ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಬಯಲಾಟದ ಒಂದು ಪ್ರಕಾರ ದೊಡ್ಡಾಟ ದಕ್ಷಿಣ ಕರ್ನಾಟಕದ ಬಯಲುಸೀಮೆಯಲ್ಲಿ ಕಣ್ಮರೆಯಾಗಿಯೇ ಹೋಗಿತ್ತು. ಅಂತಹ ಕಲೆಯೊಂದರ ಪ್ರದರ್ಶನ ನಡೆಯಿತು. ಇಡೀ ಪ್ರದರ್ಶನದ ಅವಧಿಯಲ್ಲಿ ಸುರಿದ ಮಳೆಯನ್ನೂ ಮೀರಿ ಮೈಮರೆಸುವಷ್ಟರ ಮಟ್ಟಿಗೆ ಮಕ್ಕಳ ಪ್ರದರ್ಶನ ನಡೆಯಿತು.

ವೇಷಭೂಷಣ ಹಾಗೂ ಪ್ರಸಾದನ ಹಾವೇರಿಯ ಶಂಕರಪ್ಪ ಕೆ., ಮದ್ದಲೆ-ಚನ್ನಬಸಪ್ಪ ಬೆಂಡಿಗೇರಿ, ಹರ್ಮೋನಿಯಂ- ವಿರೂಪಾಕ್ಷಪ್ಪ ಬಾಗ್ಲಣ್ಣನವರ್‌,
ಶಹನಾಯ…-ಭರಮಪ್ಪ ಭಜಂತ್ರಿ, ನೃತ್ಯಗುರು ಗೋವಿಂದಪ್ಪ ದ್ಯಾಮಪ್ಪ ತಳವಾರ, ಕಾಲಭೈರವ ಪುರಾಣ ದೊಡ್ಡಾಟ ರಚನೆ ಮತ್ತು ನಿರ್ದೇಶನ ಡಾ.
ಎಂ. ಬೈರೇಗೌಡ. ಕಾಲೇಜು ಪ್ರಾಂಶುಪಾಲ ಜಿ. ದಯಾನಂದ ಅಧ್ಯಕ್ಷತೆ ವಹಿಸಿದ್ದರು. ತುರುವೆಕೆರೆ ತಾಲೂಕಿನ ದಂಡಿನಶಿವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಪ್ರಕಾಶ್‌. ಜಿ.ಸಿ., ನಿವೃತ್ತ ಕನ್ನಡ ಉಪನ್ಯಾಸಕ ನರಸಿಂಹಮೂರ್ತಿ, ನಿವೃತ್ತ ಪ್ರಾಂಶುಪಾಲ ವನರಾಜು, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ್‌, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಟಿ. ದಿನೇಶ್‌ ಬಿಳಗುಂಗ, ಸ್ಪಂದನ ಚಾರಿಟಬಲ… ಟ್ರಸ್ಟ್‌ ಅಧ್ಯಕ್ಷ ಮುತ್ತಣ್ಣ. ರೋಟರಿ ಸಿಲ್ಕ… ಸಿಟಿ ರಾಮನಗರ ಯುವಜನಸೇವಾ ನಿರ್ದೇಶಕ ಬೋರಲಿಂಗೇಗೌಡ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಡಾ. ನವೀನ್‌ ಹಳೆಮನೆ, ತುಳಸಿರಾಂ ಶೆಟ್ಟಿ, ಡಾ. ಶಾರದಾ ಬಡಿಗೇರ, ವಿಜಯಲಕ್ಷ್ಮೀ, ಹನ್ಸರ್‌ಉಲ…
ಹಕ್‌, ಹನುಮಂತರಾಯ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ