ಮುಖ್ಯಾಧಿಕಾರಿಯಿಂದ ವಸತಿ ನಿರ್ಮಾಣಕ್ಕೆ ಅನುಮತಿ

Team Udayavani, Aug 24, 2019, 5:38 PM IST

ರಾಮನಗರ ತಾಲೂಕು ಬಿಡದಿ ಪುರಸಭೆ ಸಭಾಂಗಣದಲ್ಲಿ ಶಾಸಕ ಎ.ಮಂಜುನಾಥ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ರಾಮನಗರ: ಪುರಸಭೆ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಲು ಇನ್ನು ಮುಂದೆ ಬಿಡದಿ ನಾಗರಿಕರು ಬೆಂಗಳೂರಿಗೆ ಹೋಗಬೇಕಾಗಿಲ್ಲ. ಪುರಸಭೆಯ ಮುಖ್ಯಾಧಿಕಾರಿಗಳಿಗೆ ಅಧಿಕಾರವನ್ನು ಸರ್ಕಾರ ನೀಡಿದೆ ಎಂದು ಶಾಸಕ ಎ.ಮಂಜುನಾಥ್‌ ಮಾಹಿತಿ ನೀಡಿದರು.

ತಾಲೂಕಿನ ಬಿಡದಿ ಪುರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ಮೊದಲು ವಸತಿ ಕಟ್ಟಡ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರಗಳಾದ ಬಿಎಂಐಸಿಪಿ ಮತ್ತು ಬಿಎಂಆರ್‌ಡಿ ಯಿಂದ ಅನುಮೋದನೆ ಪಡೆಯುವ ವ್ಯವಸ್ಥೆ ಇತ್ತು. ತಾವು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಗಮನ ಸೆಳೆದು ಅನುಮತಿ ನೀಡುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗೆ ಬರುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.

ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಬಿಡದಿ ಪುರಸಭೆ ಪರಿಮಿತಿಯಲ್ಲಿ ನೆಲ, ಮೊದಲ ಅಂತಸ್ತು ಮತ್ತು ಎರಡನೇ ಅಂತಸ್ತುಗಳವರೆಗೆ ನಿರ್ಮಾಣ ಮಾಡಲು ಉದ್ದೇಶಿಸುವ ಕಟ್ಟಡಗಳಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ-15ರ ಅಡಿಯಲ್ಲಿ ಪ್ರಾರಂಭಿಕ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಇನ್ನು ಮುಂದೆ ಪುರಸಭೆ ಮುಖ್ಯಾಧಿಕಾರಿಗೆ ಇದೆ ಎಂದರು.

ನಲ್ಲಿಗುಡ್ಡ ಕೆರೆಯಲ್ಲಿ ಗಣೇಶ ವಿಸರ್ಜನೆಗಿಲ್ಲ ಅವಕಾಶ!: ಗಣೇಶ ಮೂರ್ತಿಗಳ ವಿಸರ್ಜನೆಗೆ ನಲ್ಲಿಗುಡ್ಡ ಕೆರೆಯಲ್ಲಿ ಈ ಬಾರಿ ಅವಕಾಶವಿಲ್ಲ. ಆದರೆ, ಕೆರೆಯ ಸಮೀಪವೇ ಪತ್ಯೇಕ ಕೊಳವನ್ನು ನಿರ್ಮಿಸಿ ಅಲ್ಲಿ ವಿಸರ್ಜನೆಗೆ ಅವಕಾಶ ನೀಡುವಂತೆ ಶಾಸಕರು ಪುರಸಭೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ರಸ್ತೆಗಾಗಿ ಭೂಮಿ ಸ್ವಾಧೀನ ಅವಶ್ಯ: ಪುರಸಭಾ ಸದಸ್ಯ ದೇವರಾಜು ಮಾತನಾಡಿ, ಬಿಡದಿ ಪಟ್ಟಣದ ಕೇತಗಾನಹಳ್ಳಿ ಸಮೀಪ 6 ಎಕರೆಗೂ ಹೆಚ್ಚಿನ ಪ್ರದೇಶವನ್ನು ಸ್ಮಶಾನಕ್ಕಾಗಿ ಮೀಸಲಿರಿಸಲಾಗಿದೆ. ಆದರೆ, ಅಲ್ಲಿಗೆ ತೆರಳು ರಸ್ತೆಯೇ ಇಲ್ಲ ಎಂದು ಗಮನ ಸೆಳೆದರು. ರಸ್ತೆ ನಿರ್ಮಿಸಲು ಭೂಮಿ ಸ್ವಾಧೀನದ ಅವಶ್ಯಕತೆ ಇದೆ ಎಂದರು. ಈ ಬಗ್ಗೆ ಗಮನ ಹರಿಸುವುದಾಗಿ ಶಾಸಕರು ತಿಳಿಸಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಚೇತನ್‌ ಎಸ್‌.ಕೊಳವಿ, ವ್ಯವಸ್ಥಾಪಕ ರಮೇಶ್‌, ಪುರಸಭೆ ಎಂಜಿನೀಯರ್‌ ಸರಿತಾ, ಅಧಿಕಾರಿಗಳಾದ ಆನಂದ್‌, ನಾಗರಾಜು, ಅರ್ಚನಾ, ಲತಾಮಣಿ, ನಟರಾಜು, ಮಹಮ್ಮದ್‌ ಗೌಸ್‌ ಮುಂತಾದವರು ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ