ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

Team Udayavani, Sep 2, 2019, 4:11 PM IST

30ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ • ಅಧಿಕಾರಿಗಳಿಗೆ ಸಹಕರಿಸಲು ಡೀಸಿ ಮನವಿ

ರಾಮನಗರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಖುದ್ದು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಸೆಪ್ಟೆಂಬರ್‌ 30ರವರೆಗೆ ಮನೆ ಮನೆ ಭೇಟಿ ಕಾರ್ಯಕ್ರಮ ಇದ್ದು, ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಮನವಿ ಮಾಡಿದರು.

ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ 2020ರ ವೇಳೆ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಂಡಿದೆಯೇ, ಹೆಸರು ವಿಳಾಸ ಮತ್ತು ಇತರೆ ಮಾಹಿತಿ ಸರಿ ಇದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ. ತಪ್ಪಾಗಿದ್ದರೆ ತಿದ್ದುಪಡಿಗೆ ಸೂಕ್ತ ಅರ್ಜಿ ಕೊಟ್ಟು ಬದಲಾಯಿಸಬಹುದಾಗಿದೆ. ಮತದಾರರ ಪಟ್ಟಿ ಪರಿಶೀಲಿಸಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ, ನಾಡ ಕಚೇರಿ, ಕಾಮನ್‌ ಸರ್ವಿಸ್‌ ಸೆಂಟರ್‌ಗಳು, ಗ್ರಾಮ ಪಂಚಾಯ್ತಿ ಕಚೇರಿ ಅಥವಾ ಮತಗಟ್ಟೆ ಅಧಿಕಾರಿ (ಬಿಎಲ್ಒ)ಗಳ ಬಳಿ ಪರಿಶೀಲಿಸಬಹುದು ಎಂದು ಹೇಳಿದರು.

ವಿಶೇಷ ಪರಿಷ್ಕರಣೆ ಉದ್ದೇಶ ಏನು?: ಮತಗಟ್ಟೆ ಅಧಿಕಾರಿಗಳು ತಮ್ಮ ಮೊಬೈಲ್ನಲ್ಲಿ ಚುನಾವಣಾ ಆಯೋಗ ಹೊರತಂದಿರುವ ಆ್ಯಪ್‌ನ್ನು ಬಳಸಿಕೊಂಡು ಮತದಾರರ ಮಾಹಿತಿಯ ಪರಿಶೀಲನೆ ಇತ್ಯಾದಿಯನ್ನು ಸರಿಪಡಿಸಿಕೊಳ್ಳ ಬಹುದು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು. ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರು, ವಯಸ್ಸು, ವಿಳಾಸ ಇತ್ಯಾದಿ ಲೋಪದೋಷಗಳನ್ನು ಸರಿಪಡಿಸುವುದು, ಮತದಾರರ ಪಟ್ಟಿಯಲ್ಲಿರುವ ಮತದಾರರ ಗುಣಮಟ್ಟ ಕಡಿಮೆ ಇರುವ ಭಾವಚಿತ್ರಗಳಿಗೆ ಹೊಸ ಭಾವ ಚಿತ್ರ ಕಲೆ ಹಾಕುವುದು, ಮರಣ, ದ್ವಿಗುಣ, ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು ಎಂದು ಹೇಳಿದರು.

ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ಸಂದರ್ಭದಲ್ಲಿ ಮತದಾರರ ಪಟ್ಟಿ ಮತ್ತು ನಮೂನೆ 6, 7, 8 ಮತ್ತು 8 ಎ ಅರ್ಜಿಗಳೊಂದಿಗೆ ಬರಲಿದ್ದಾರೆ. ಮತದಾರರು ತಮ್ಮ ವಿವರದಲ್ಲಿರಬಹುದಾದ ನ್ಯೂನತೆಗಳಿಗೆ ಸಂಬಂಧಪಟ್ಟ ನಮೂನೆಯನ್ನು ತುಂಬಿ ಕೊಡಬಹುದು. ಅರ್ಹ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸದರು.

ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸುವ ವ್ಯವಸ್ಥೆ: ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಿಗೆ ನಿಗದಿತ ನಮೂನೆಗಳನ್ನು ಸರಬರಾಜು ಮಾಡಿ, ಸ್ಥಳದಲ್ಲಿಯೇ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಇದೆ. ಹೊಸ ಮತದಾರರ ಸೇರ್ಪಡೆ ವೇಳೆಯಲ್ಲಿಯೇ ಅಂಗವಿಕಲ ಮತದಾರರನ್ನು ಗುರುತಿಸಿ, ಅಂತಹವರನ್ನು ಮತದಾರರ ಪಟ್ಟಿಗೆ ಸೇರಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಮತದಾರರು ಧೃತಿಗೆಡಬೇಕಾಗಿಲ್ಲ: ಸೆಪ್ಟೆಂಬರ್‌ 30ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆ ಭೇಟಿ ಕೊಡುವ ವೇಳೆ ಪರಿಶೀಲನೆಗೆ ಸಾಧ್ಯವಾಗದ ಮತದಾರರು ಧೃತಿಗೆಡಬೇಕಾಗಿಲ್ಲ. ತಿದ್ದುಪಡಿ, ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ 2020ರ ಜನವರಿ 15ರವರೆಗೆ ಸಾಗುತ್ತಿರುತ್ತದೆ ಎಂದರು.

ಜಿಲ್ಲಾ ಐಕಾನ್‌ ಆಗಿ ಪ್ರಕಾಶ್‌ ಜಯರಾಮಯ್ಯ: ಭಾರತೀಯ ಅಂಧರ ಕ್ರಿಕೆಟ್ ತಂಡದಲ್ಲಿ ಬಿ-3 ವರ್ಗದ ಕ್ರಿಕೆಟ್ಟಿಗ, ಓಪನಿಂಗ್‌ ಬ್ಯಾಟ್ಸ್‌ಮನ್‌, ಕೀಪರ್‌ ಆಗಿರುವ ಪ್ರಕಾಶ್‌ ಜಯರಾಮಯ್ಯ ಅವರು ಜಿಲ್ಲಾ ಐಕಾನ್‌ ಆಗಿ ಗುರುತಿಸಲಾಗಿದೆ. ಸೆ.30ರವೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ, ಮನೆಗೆ ಭೇಟಿ ಕೊಡುವ ವೇಳೆ ನಾಗರಿಕರ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಉಮೇಶ್‌, ಜಿಲ್ಲಾ ಸ್ವೀಪ್‌ ಸಮಿತಿಯ ಸದಸ್ಯ ಹಾಗೂ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಸೋಮಲಿಂಗಯ್ಯ, ಜಿಲ್ಲಾ ಐಕಾನ್‌ ಪ್ರಕಾಶ್‌ ಜಯರಾಮಯ್ಯ, ಜಿಲ್ಲಾ ವಾರ್ತಾಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ