ನೀರಿನ ಸದ್ಬಳಕೆಗೆ ನಿರಂತರ ಜಾಗೃತಿ ಅಗತ್ಯ

Team Udayavani, Sep 9, 2019, 12:53 PM IST

ರಾಮನಗರ: ನೀರಿನ ಸದ್ಬಳಕೆ, ಮಣ್ಣಿನ ಸವಕಳಿ ಹಾಗೂ ಆಧುನಿಕ ಕೃಷಿ ಬೇಸಾಯ ಪದ್ಧತಿಗಳ ಬಗ್ಗೆ ಜನ ಸಾಮಾನ್ಯರು, ರೈತ ವರ್ಗದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಅವಶ್ಯವಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌ ತಿಳಿಸಿದರು.

ಬಿಡದಿಯ ಶ್ರೀ ಬಸವೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ರಾಮನಗರದ ಐ.ಸಿ.ಎ.ಆರ್‌ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ತಂತ್ರಜ್ಞಾನ ಅಳವಡಿಕೆ ಮತ್ತು ಸಂಶೋಧನಾ ಸಂಸ್ಥೆಯಿಂದ ನಡೆದ ಜಲಶಕ್ತಿ ಅಭಿಯಾನ ಮತ್ತು ಕಿಸಾನ್‌ ಮೇಳದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿಕೊಂಡು ತಮ್ಮ ಪೋಷಕರು, ನೆರೆ-ಹೊರೆಯವರಲ್ಲಿಯೂ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದ ಅಭಿವೃದ್ಧಿಗೆ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಕಿಸಾನ್‌ ಮೇಳದಲ್ಲಿ ಆಯೋಜಿಸಿದ್ದ ಕೃಷಿ ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ, ವಿಚಾರ ಸಂಕಿರಣಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನೀರಿಗಾಗಿ ಯುದ್ಧ ನಡೆಯುವ ಸಂಭವ: ಎಂಎಲ್ಸಿ ಸಿ.ಎಂ.ಲಿಂಗಪ್ಪ ಮಾತನಾಡಿ ನೀರಿಗಾಗಿ ಮುಂದಿನ ದಿನಗಳಲ್ಲಿ ಯುದ್ಧಗಳು ನಡೆದರು ಆತಿಶಯೋಕ್ತಿಯಲ್ಲ. ನೀರು ಅಪಾರವಾಗಿ ಸಿಗುವ ಪ್ರಾಕೃತಿಕ ಸಂಪತ್ತಲ್ಲ. ಅದು ಮಿತವಾಗಿದೆ. ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಸಬೇಕಾಗಿದೆ. ಹೀಗಾಗಿ ನೀರಿನ ಮಿತಬಳಕೆ ಮಾಡಿ, ಮಾಲಿನ್ಯವನ್ನು ತಡೆಗಟ್ಟಬೇಕಾಗಿದೆ ಎಂದರು.

ಭತ್ತದ ಗದ್ದೆಯಲ್ಲಿ ಪದೇ ಪದೆ ನೀರನ್ನು ಬದಲಿಸುವ ಪದ್ಧತಿಯನ್ನು ಅವರು ಪ್ರಶ್ನಿಸಿದರು. ಕಲ್ಯಾಣ ಮಂಟಪಗಳಲ್ಲಿ ನೀರಿನ ಬಾಟಲಿಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪ್ಲಾಸ್ಟಿಕ್‌ ಬಳಕೆಯ ಜೊತೆಗೆ ನೀರು ಸಹ ವ್ಯರ್ಥವಾಗುತ್ತಿದೆ. ನಗರ, ಗ್ರಾಮೀಣ ಎರಡೂ ಕಡೆಯಲ್ಲೂ ನೀರಿನ ಸದ್ಬಳಕೆ ವಿಚಾರದಲ್ಲಿ ನಿರಂತರ ಜಾಗೃತಿ ಅಗತ್ಯವಿದೆ ಎಂದು ತಿಳಿಸಿದರು.

ಕೆರೆ, ಕಟ್ಟೆಗಳನ್ನು ಪುನಶ್ಚೇತನಗೊಳಿಸಿ: ತಾಪಂ ಅಧ್ಯಕ್ಷ ಜಿ.ಎನ್‌.ನಟರಾಜ್‌ ಗಾಣಕಲ್ ಮಾತನಾಡಿ, ಗ್ರಾಮಗಳಲ್ಲಿನ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ, ಉಳಿಸಿಕೊಳ್ಳುವುದು ನಾಗರಿಕರ ಕರ್ತವ್ಯ. ಪ್ರತಿ ಗ್ರಾಮದಲ್ಲೂ ಅಲ್ಲಿನ ನಿವಾಸಿಗಳು, ತಮ್ಮ ವ್ಯಾಪ್ತಿಯ ಕರೆಗಳಲ್ಲಿ ಹೂಳೆತ್ತಿ, ಮಳೆ ನೀರು ಸಂಗ್ರಹಕ್ಕೆ ಮುಂದಾಗಬೇಕು ಎಂದು ಹೇಳಿದರು.

ತಾವು ಹೆಜ್ಜಾಲದ ದೊಡ್ಡ ಕೆರೆ ಸೇರಿದಂತೆ 7 ಕೆರೆಗಳನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ಯಶಸ್ಸು ಸಾಧಿಸಿದ ಉದಾಹರಣೆ ನೀಡಿದರು. ಸರ್ಕಾರಿ ಸ್ವಾಮ್ಯದ ನಿಗಮಗಳ ಸಹಕಾರದಲ್ಲಿ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿದ್ದ ಶಾಸಕರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ: ಈ ವೇಳೆ ನೀರಿನ ಸಂರಕ್ಷಣೆ, ಅರಣ್ಯೀಕರಣ ಹಾಗೂ ಪರಿಸರ ಉಳಿವಿನ ಕುರಿತು ನಡೆದಿದ್ದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಗಾಂಧಿ ಕೃಷಿ ವಿವಿಯ ಸಹಾಯಕ ನಿರ್ದೇಶಕ ಡಾ.ನಾರಾಯಣಗೌಡ, ಹಿರಿಯ ವಿಜ್ಞಾನಿ ಡಾ.ಸವಿತಾ ಎಸ್‌.ಮಂಗಾನವರ್‌ ಮಾತನಾಡಿದರು. ಬೆಂಗಳೂರಿನ ಜಿಕೆವಿಕೆ ಸಹ ಪ್ರಾಧ್ಯಾಪಕ ಡಾ.ಎಂ.ಎನ್‌.ತಿಮ್ಮೇಗೌಡ, ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜ್‌ ಅವರು ಕೊಳವೆ ಬಾವಿಗಳ ಮರುಪೂರಣ, ಕೃಷಿ ಹೊಂಡ ಪ್ರಾಮುಖ್ಯತೆ, ವಿನ್ಯಾಸ ಮತ್ತು ನೀರಿನ ಸದ್ಬಳಕೆ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಪ್ರಕಾಶ್‌, ಜ್ಞಾನವಿಕಾಸ ವಿದ್ಯಾಸಂಘದ ನಿರ್ದೇಶಕ ಎಲ್.ಸತೀಶ್‌ಚಂದ್ರ, ಖಜಾಂಚಿ ಹೊನ್ನಶೆಟ್ಟಿ(ರಾಜಣ್ಣ), ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ದಿಲೀಪ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಉಪಸ್ಥಿತರಿದ್ದರು. ವಿಜ್ಞಾನಿ ಪ್ರೀತು ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ