ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಮುಕ್ತಕ್ಕೆ ಡೀಸಿ ಕ್ರಮ

ಎಲ್ಲಾ ದೇವಾಲಯಗಳಿಗೆ ಜಿಲ್ಲಾಡಳಿತ ಆದೇಶ • ಬಟ್ಟೆ ಬ್ಯಾಗ್‌ ಕಡಿಮೆ ಬೆಲೆಗೆ ನೀಡಲು ಆದ್ಯತೆ

Team Udayavani, Apr 24, 2019, 1:48 PM IST

ಮಾಗಡಿ: ಮುಜರಾಯಿ ದೇವಾಲಯಗಳಿಗೆ ಪ್ಲಾಸ್ಟಿಕ್‌ ಚೀಲದಲ್ಲಿ ಪೂಜಾ ಸಾಮಗ್ರಿ ಕೊಂಡೊಯ್ಯುವ ಭಕ್ತರಿಗೆ ಇನ್ನು ಮುಂದೆ ದೇವರ ದರ್ಶನ ಭಾಗ್ಯ ಸಿಗುವುದು ಕಷ್ಟ. ಪ್ರವಾಸಿ ತಾಣಗಳಲ್ಲಿ ಇನ್ನೂ ಕಷ್ಟ.

ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತಿಗೆ ಜಿಲ್ಲಾಡಳಿತ, ಮುಜರಾಯಿ ಇಲಾಖೆ ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್‌ ಚೀಲ ನಿಷೇಧಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಭಕ್ತರು ಹೂ, ಹಣ್ಣು, ಕಾಯಿ, ಕರ್ಪೂರ ಇತರೆ ಹಣ್ಣುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತಂದು ನಂತರ ಎಲ್ಲಂದರಲ್ಲಿ ಎಸೆದು ಹೋಗುತ್ತಾರೆ. ಇದರಿಂದ ದೇವಾಲಯಗಳ ಆವರಣ ಹಾಗೂ ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಮಲೀನಗೊಳ್ಳುತ್ತದೆ. ಅದ್ದರಿಂದ ಮುಜರಾಯಿ ಇಲಾಖೆಗೆ ಸೇರಿದ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ಪ್ಲಾಸ್ಟಿಕ್‌ ಚೀಲಗಳ ಸಂಪೂರ್ಣ ನಿಷೇಧಕ್ಕೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹಸಿರು ನ್ಯಾಯ ಮಂಡಲಿ ಸೂಚನೆ: ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಗೆ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ.ಅಡಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿ ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ಹಾಗೂ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಮುಜರಾಯಿ ದೇವಾಲಯಗಳ ಆವರಣದಲ್ಲಿ ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ. ಪ್ಲಾಸ್ಟಿಕ್‌ ಕಡ್ಡಾಯ ನಿಷೇಧಕ್ಕೆ ಆದೇಶ ಜಾರಿಯಿದ್ದು, ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಿದೆ.

ಬಟ್ಟೆ ಬ್ಯಾಗ್‌ ಮಾರಾಟಕ್ಕೆ ಅವಕಾಶ: ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಬೇಕು. ದೇವಾಲಯದ ಬಾಗಿಲ ಬಳಿ ತಪಾಸಣೆ ನಡೆಸಬೇಕು. ದೇವಾಲಯದ ಆವರಣದಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಸದಂತೆ ಪರಿಶೀಲಿಸಬೇಕು. ಸ್ಥಳೀಯ ದೃಶ್ಯಮಾಧ್ಯಮ, ಪತ್ರಿಕೆಗಳು, ಕರಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕು. ಸ್ಥಳೀಯ ಸ್ವಸಹಾಯ ಗುಂಪುಗಳಿಂದ ಬಟ್ಟೆ ಬ್ಯಾಗ್‌ಗಳನ್ನು ತಯಾರಿಸಿ ದೇವಾಲಯಗಳಿಂದಲೇ ಕಡಿಮೆ ಬೆಲೆಗೆ ಮಾರಾಟ ಮಾಡಲು ಆದ್ಯತೆ ನೀಡಬೇಕು.

ಒಬ್ಬರಿಗೊಂದು ಮತ್ತೂಬ್ಬರಿಗೊಂದು ಕಾನೂನು ಬೇಡ: ಪರಿಸರದ ಕಾಳಜಿ ದೃಷ್ಠಿಯಿಂದ ಪ್ಲಾಸ್ಟಿಕ್‌ ನಿಷೇಧ ಉತ್ತಮವಾಗಿದೆ. ಆದರೆ, ದೊಡ್ಡ ದೊಡ್ಡ ಕಂಪನಿಗಳು ಪ್ಲಾಸ್ಟಿಕ್‌ ಪ್ಯಾಕಿಂಗ್‌ ಮೂಲಕವೇ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಮೊದಲು ಪ್ಲಾಸ್ಟಿಕ್‌ ತಯಾರಿಕೆ ಕಂಪನಿಗಳಲ್ಲಿ ಪ್ಲಾಸ್ಟಿಕ್‌ ಕ್ವಾಲಿಟಿ ಕುರಿತು ಸರ್ಕಾರ ಎಚ್ಚರಿಕೆ ನೀಡಬೇಕು. ನಂದಿನಿ ಹಾಲಿನ ಪ್ಯಾಕ್‌ ಸಹ ಪ್ಲಾಸ್ಟಿಕ್‌ ಆಗಿದೆ. ಅದೇ ಮಾದರಿಯಲ್ಲಿ ಪೂಜಾ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಡರೆ ಉತ್ತಮ. ಇಲ್ಲದಿದ್ದರೆ ಸಂಪೂಣವಾಗಿ ಪ್ಲಾಸ್ಟಿಕ್‌ ನಿಷೇಧಿಸಬೇಕು. ಒಬ್ಬರಿಗೊಂದು ಮತ್ತೂಬ್ಬರಿಗೊಂದು ಕಾನೂನು ಬೇಡ ಎಂದು ಭಕ್ತದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡೀಸಿ ಆದೇಶಕ್ಕೆ ಸಿಗುವುದೆ ಕಿಮ್ಮತ್ತು?

ರಾಮನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತು ಡೀಸಿ ಆದೇಶಕ್ಕೆ ಜಿಲ್ಲೆಯ ನಾಗರಿಕರು ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ಜಿಲ್ಲಾಡಳಿತಕ್ಕ ಜ್ಞಾನೋದಯವಾಗಿದೆ ಎಂಬ ಪ್ರತಿಕ್ರಿಯೆ ಜೊತೆಗೆ ಈ ಆದೇಶ ಕೇವಲ ಕಡತಕ್ಕೆ ಸೀಮಿತವಾಗದಿರಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್‌ ನಿಷೇಧದ ಆದೇಶ ಇದು ಮೊದಲೇನು ಅಲ್ಲ. ಸ್ಥಳೀಯ ಸಂಸ್ಥೆಗಳು ಸಹ ಅನೇಕ ಬಾರಿ ಆದೇಶಗಳುನ್ನು ಮಾಡಿವೆ. ಪ್ರತಿಬಾರಿಯೂ ಇಂತಹ ಆದೇಶ ಬಂದಾಗಲೆಲ್ಲ ಜಾಗೃತರಾಗುವ ಅಧಿಕಾರಿಗಳು ಕೆಲ ದಿನಗಳ ಕಾಲ ಕಟ್ಟುನಿಟ್ಟಾಗಿ ನಡೆದುಕೊಂಡು ನಂತರ ಸುಮ್ಮನಾಗುವುದು ಸಾಮಾನ್ಯವಾಗಿದೆ.

ಯಾವ ಕ್ರಮ ಕೈಗೊಳ್ಳಲಿಲ್ಲ: ಕಳೆದ ಗಣಪತಿ ಹಬ್ಬದ ವೇಳೆ ಮಣ್ಣಿನಿಂದ ಮಾಡಿದ ಗಣಪ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಡೀಸಿ ಆದೇಶ ಹೊರೆಡಿಸಿದ್ದರು. ಸ್ಥಳೀಯ ಸಂಸ್ಥೆಗಳು ಸಹ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದವು. ಆದರೆ, ಇಡೀ ಜಿಲ್ಲೆಯಲ್ಲಿ ಪರಿಸರ ವಿರೋಧಿ ವಸ್ತುಗಳಿಂದ ತಯಾರಾದ ಗಣಪ ಮೂರ್ತಿಗಳು ಮಾರಾಟವಾಗಿದ್ದವು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾಗಲಿ, ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ನಾಗರಿಕರು ಹರಿಹಾಯ್ದಿದ್ದಾರೆ.

ವ್ಯಾಪಾರಿಗಳ ಮೇಲೆ ಕ್ರಮ ಕೈಗೊಳ್ಳಿ: ಕಳಪೆ ಪ್ಲಾಸ್ಟಿಕ್‌ ಕೈಚೀಲಗಳು ಇಂದಿಗೂ ಕೆಲವು ವ್ಯಾಪಾರಿಗಳ ಬಳಿ ಸಿಗುತ್ತಿದೆ. ರಸ್ತೆಬದಿ ವ್ಯಾಪಾರಿಗಳು ಇಂತಹದ್ದೆ ಪ್ಲಾಸ್ಟಿಕ್‌ ಚೀಲಗಳನ್ನು ಬಳಸುತ್ತಿದ್ದಾರೆ. ನೀರಿನ ಲೋಟ, ಕಾಫಿ ಲೋಟ, ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ಸ್ಪೂನ್‌ಗಳು, ಪ್ಲಾಸ್ಟಿಕ್‌ ಹಾಳೆಗಳು ಯಥೇಚ್ಚವಾಗಿ ಮಾರಾಟವಾಗುತ್ತಿದೆ. ಹೀಗೆ ಮಾರಾಟ ಮಾಡುವ ವ್ಯಾಪಾರಿ ಮಳಿಗೆಗಳ ಮೇಲೆ ಕ್ರಮ ಜರುಗಿಸದ ಹೊರತು ಪ್ಲಾಸ್ಟಿಕ್‌ ನಿಷೇಧ ಮಾಡಿ ಉಪಯೋಗವೇನು ಎಂದು ಸಾಮಾನ್ಯ ಜನತೆ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿರುವ ಕಲ್ಯಾಣ ಮಂದಿರಗಳು, ಸಭಾಂಗಣಗಳು, ಸಮುದಾಯ ಕೇಂದ್ರಗಳಲ್ಲಿ ಆಹಾರ ವಿತರಣೆಗೆ ಕಡ್ಡಾಯವಾಗಿ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿಲ್ಲ ಎಂಬುದು ಕಟು ಸತ್ಯ. ಇಂತಹ ಮಂದಿರಗಳ ಮಾಲೀಕರ ವಿರುದ್ಧ ಸ್ಥಳೀಯ ಸಂಸ್ಥೆಗಳು ತೆಗೆದು ಕೊಂಡ ಕಾನೂನು ಕ್ರಮಗಳೇನು ಎಂದು ನಾಗರಿಕರು ಪ್ರಶ್ನಿಸಿದ್ದಾರೆ. ಡೀಸಿ ಅವರು ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶಗಳು ಎಂದು ಘೋಷಿಸಿರುವುದರನ್ನು ಸ್ವಾಗತಿಸಿರುವ ನಾಗರಿಕರು, ಈ ಆದೇಶವನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಆಗ್ರಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ