ರೈತರ ಅರ್ಜಿ ವಿಲೇವಾರಿ ವಿಳಂಬ ಸಹಿಸಲ್ಲ

Team Udayavani, Jun 5, 2019, 3:00 AM IST

ರಾಮನಗರ: ಲ್ಯಾಂಡ್‌ ಡೆವೆಲಪರ್ಗಳ ಅರ್ಜಿಗಳು ವಿಲೇವಾರಿಯಾಗುವ ವೇಗ, ರೈತರ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಇರೋಲ್ಲ, ಇದು ಹೀಗೆ ಮುಂದುವರಿದರೆ ಲೋಕಾಯುಕ್ತಾಕ್ಕೆ ದೂರು ಬರೆಯಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು ತರಾಟೆಗೆ ತೆಗೆದುಕೊಂಡರು.

ನಗರದ ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಮಾಗಡಿ ವಿಧಾನ ಸಭಾ ಕ್ಷೇತ್ರದ ಕೂಟಗಲ್‌ ಮತ್ತು ಬಿಡದಿ ಹೋಬಳಿಗಳ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಲ್ಯಾಂಡ್‌ ಡೆವಲಪರ್‌ಗಳ ಕೆಲಸಗಳು ಬೇಗ ಆಗುತ್ತಿವೆ, ಜನಸಾಮಾನ್ಯರು, ರೈತರ ಕೆಲಸಗಳು ವಿಳಂಬವಾಗುತ್ತಿದೆ ಎಂದು ಸಭೆಯಲ್ಲಿ ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಭೂ ಪರಿವರ್ತನೆ, ಹಕ್ಕುಪತ್ರ, ಸಂಪರ್ಕ ರಸ್ತೆ ನಿರ್ಮಾಣ ಮುಂತಾದ ಕಾರ್ಯಗಳನ್ನು ಲ್ಯಾಂಡ್‌ ಡೆವಲಪರ್ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗುತ್ತಿವೆ. ರೈತರ ಕೆಲಸಗಳು ಮಾತ್ರ ವಿಳಂಬವಾಗುತ್ತಿದೆ ಎಂಬುದನ್ನು ತಾವು ಸಹ ಗಮನಿಸಿರಿವುದಾಗಿ, ರೈತರು, ಜನಸಾಮಾನ್ಯರ ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿಯನ್ನು ತಾವು ಸಹಿಸುವುದಿಲ್ಲ. ಹೇಳುವವರು, ಕೇಳುವವರು ಯಾರು ಇಲ್ಲ ಅಂದುಕೊಳ್ಳಬೇಡಿ, ಪರಿಸ್ಥಿತಿ ಹೀಗೆ ಮುಂದುವರೆದರೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.

ಸರ್ಕಾರಿ ಭೂಮಿ ವಿವರ ಕೊಡಲಿಲ್ಲವೇಕೆ?: ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು, ಗೋಮಾಳ ಲಭ್ಯವಿದೆಯೋ ಅವುಗಳ ಪೂರ್ಣ ಮಾಹಿತಿ ನೀಡಿ ಎಂದು ಸೂಚಿಸಿದ್ದರೂ ವರದಿ ನೀಡಿಲ್ಲ. ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಅಂಗನವಾಡಿ ಸೇರಿದಂತೆ ಸರ್ಕಾರದ ವಿವಿಧ ಉದ್ದೇಶಗಳಿಗೆ ಸರ್ಕಾರಿ ಭೂಮಿ ಬೇಕಾಗಿದೆ. ಸರ್ಕಾರದಿಂದ ಈ ಕಾರ್ಯಗಳಿಗೆ ಅನುದಾನಕ್ಕೆ ಮುಂದಾದರೆ ಸ್ಥಳ ಇಲ್ಲ ಎಂಬ ಉತ್ತರಗಳು ಬರುತ್ತಿವೆ. ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸಲೇಬೇಕು. ಗ್ರಾಪಂವಾರು ಸ್ಮಶಾನ, ಕಸ ವಿಲೇವಾರಿಗೆ ಜಾಗ ಗುರುತಿಸಿ, ಆಯಾ ಸ್ಥಳೀಯ ಸಂಸ್ಥೆ ಸುಪರ್ದಿಗೆ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಸ ವಿಲೇವಾರಿಗೆ ಅನುದಾನ ಮಂಜೂರು: ತಾಲೂಕಿನ ಬೈರಮಂಗಲ, ಶ್ಯಾನುಭೋಗನಹಳ್ಳಿ, ಮಂಚನಾಯಕನಹಳ್ಳಿ ಸೇರಿದಂತೆ ಒಟ್ಟು 4 ಪಂಚಾಯ್ತಿಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ತಲಾ 15 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸದರಿ ಪಂಚಾಯ್ತಿ ವ್ಯಾಪ್ತಿ ಸ್ಥಳ ಗುರುತಿಸಿ, ಅನುದಾನ ಸದ್ಬಳಕೆ ಮಾಡಿಕೊಳ್ಳಿ. ಸಾಗುವಳಿ ಜಮೀನು ಸಂಬಂಧ ನಮೂನೆ 50, 53ರಡಿ ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ಉಳಿಕೆ ಅರ್ಜಿಗಳ ಬಗ್ಗೆ ವರದಿ ನೀಡಿ ಎಂದು ಸೂಚನೆ ನೀಡಿದರು.

ರೈತರ ಅರ್ಜಿ ವಿಲೇವಾರಿ ಮಾಡಿ: ಇ-ಆಸ್ತಿ ನೀಡುವ ಕೆಲಸದಲ್ಲಿ ರೈತರನ್ನು ಕಚೇರಿಗೆ ಅಲೆಸಿ ಕಿರಿಕಿರಿ ನೀಡಬಾರದು. ಪ್ರತಿನಿತ್ಯ 2 ಅಥವಾ 3 ಅರ್ಜಿಗಳು ಬರಬಹುದು. ದಾಖಲೆಗಳನ್ನು ಪರಿಶೀಲಿಸಿ ಅಂದೇ ವಿಲೇವಾರಿ ಮಾಡುವ ಪ್ರಯತ್ನ ಮಾಡಿ. ಮೂರು ದಿನದ ಮೇಲೆ ಯಾವುದೇ ಅರ್ಜಿಯನ್ನು ಕಚೇರಿಯಲ್ಲಿ ಉಳಿಸಿಕೊಳ್ಳಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬರದಂತೆ ಕೆಲಸ ಮಾಡಿ ಎಂದು ಶಾಸಕರು ತಾಪಂ ಇಒ ಬಾಬು ಅವರನ್ನು ತಾಖೀತು ಮಾಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜು, ಸದಸ್ಯ ಪ್ರಕಾಶ್‌, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್‌ ಬಾಬು ಉಪಸ್ಥಿತರಿದ್ದರು.

ಇನ್ನು ಮುಂದೆ ಹೋಬಳಿ ಕೇಂದ್ರದಲ್ಲಿ ಜನ ಸಂಪರ್ಕ: ಪ್ರತಿ ವಾರದ ಮೊದಲ ಹಾಗೂ ಮೂರನೇ ಮಂಗಳವಾರದಂದು ಮಿನಿ ವಿಧಾನಸೌಧದಲ್ಲಿ ನಡೆಯುತ್ತಿದ್ದ ಜನ ಸಂಪರ್ಕ ಸಭೆಗಳನ್ನು ಇನ್ನು ಮುಂದೆ ಆಯಾ ಹೋಬಳಿ ಕೇಂದ್ರಗಳಲ್ಲಿ ನಡೆಸುವುದಾಗಿ ತಿಳಿಸಿದರು. ಈ ತಿಂಗಳ ಮೂರನೇ ಮಂಗಳವಾರ ಕೂಟಗಲ್‌ ಹಾಗೂ ಜುಲೈ ಮೊದಲ ಮಂಗಳವಾರ ಬೈರಮಂಗಲದಲ್ಲಿ ನಡೆಸುವುದಾಗಿ, ಅಧಿಕಾರಿಗಳು ಸಿದ್ಧರಿರಿ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ