ಬರಗಾಲ: ಸದ್ಯಕ್ಕಿಲ್ಲ ಮೇವಿನ ಸಮಸ್ಯೆ

Team Udayavani, May 16, 2019, 11:37 AM IST

ರಾಮನಗರ: ಜಿಲ್ಲೆಯ ಕನಕಪುರ, ರಾಮನಗರ ಮತ್ತು ಮಾಗಡಿ ತಾಲೂಕುಗಳು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಜಿಲ್ಲೆಯಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ 22 ಮಿಮಿ ಮಳೆ ಕಡಿಮೆಯಾಗಿರುವುದರಿಂದ ಕೇವಲ ಶೇ 0.75ರಷ್ಟು ಮಾತ್ರ ಬಿತ್ತನೆಯಾಗಿದೆ. 10 ವಾರಗಳಿಗಾಗುವಷ್ಟು ಒಣ ಮೇವು ಮತ್ತು 16 ವಾರಗಳಿಗಾಗುವಷ್ಟು ಹಸಿರು ಮೇವಿನ ದಾಸ್ತಾನು ಇರುವುದಾಗಿ ಜಿಲ್ಲಾಡಳಿತದ ಅಂಕಿ-ಅಂಶಗಳು ತಿಳಿಸಿವೆ.

ಮಳೆ ಎಷ್ಟಾಗಿದೆ?: ಕಳೆದ ಮಾ.1ರಿಂದ ಮೇ 11ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 92 ಮಿಮೀ. ಆಗಬೇಕಿತ್ತು. ಆದರೆ ಕೇವಲ 72 ಮಿಮೀ. ಮಳೆಯಾಗಿದೆ. ಚನ್ನಪಟ್ಟಣ ತಾಲೂಕಿನಲ್ಲಿ ವಾಡಿಕೆ ಮಳೆ 88 ಮಿಮೀ. ಆಗಬೇಕಿತ್ತು. ಆದರೆ ಕೇವಲ 62 ಮಿಮೀ. ಮಳೆಯಾಗಿದೆ. ಕನಕಪುರ ತಾಲೂಕಿನಲ್ಲಿ ವಾಡಿಕೆ ಮಳೆ 92 ಮಿಮೀ. ಬದಲಿಗೆ 73 ಮಿಮೀ. ಮಳೆಯಾಗಿದೆ. ಮಾಗಡಿ ತಾಲೂಕಿನಲ್ಲಿ ವಾಡಿಕೆ ಮಳೆ 100 ಮಿಮೀ. ಆಗಿರುವುದು 63 ಮಿಮೀ. ರಾಮನಗರದಲ್ಲಿ ಮೇ ತಿಂಗಳಲ್ಲಿ ಒಳೆ ಮಳೆಯಾಗಿರುವುದರಿಂದ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿದೆ. 86 ಮೀಮೀ. ವಾಡಿಕೆ ಮಳೆ ಬದಲಿಗೆ 88 ಮಿಮೀ. ಮಳೆಯಾಗಿದೆ.

ಬಿತ್ತನೆ: ಮಳೆ ಕೊರತೆ ಕಾರಣ ಜಿಲ್ಲೆಯಲ್ಲಿ ಶೇ.75ರಷ್ಟು ಮಾತ್ರ ಬಿತ್ತನೆಯಾಗಿದೆ. ಒಟ್ಟು 1,14,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 4,910 ನೀರಾವರಿ ವಿಸ್ತೀರ್ಣದಲ್ಲಿ ಶೂನ್ಯ ಬಿತ್ತನೆಯಾಗಿದೆ. ಮಳೆ ಆಶ್ರಿತ ಪ್ರದೇಶದಲ್ಲಿ 859 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 859 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ.

ಜಿಲ್ಲಾಡಳಿತದ ಕ್ರಮಗಳೇನು?: ಮುಂಗಾರು ವೇಳೆಗೆ ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಬರ ಪೀಡಿತ ಎಂದು ಸರ್ಕಾರ ಘೋಷಿಸಿತ್ತು. ಹಿಂಗಾರು ವೇಳೆಗೆ ಕನಕಪುರ, ಮಾಗಡಿ ಮತ್ತು ರಾಮನಗರ ತಾಲೂಕುಗಳು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಬರ ಪರಿಸ್ಥಿತಿಯ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಚುನಾವಣೆ ಭರಾಟೆಯ ನಡುವೆಯು ಬರ ಪರಿಸ್ಥಿತಿಯ ಬಗ್ಗೆ ಜಿಲ್ಲಾಡಳಿತ ತೀವ್ರ ನಿಗಾವಹಿಸಿತ್ತು. ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಿದೆ. 24)(7 ಕಂಟ್ರೋಲ್ ರೂ ಸ್ಥಾಪನೆಯಾಗಿದೆ. ಕಳೆದ ಮಾ. 1ರಿಂದ ಇಲ್ಲಿಯವರೆಗೆ ಬರ ಪರಿಶೀಲನೆಯ ಸಲುವಾಗಿ 4 ಸಭೆಗಳು ನಡೆದಿವೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಗತ್ಯ ಬಿದ್ದರೆ ಮೇವು ಬ್ಯಾಂಕ್‌: ಜಿಲ್ಲೆಯಲ್ಲಿ ಮೇವು ಆಧಾರಿತ 3,10,406 ಜಾನುವಾರುಗಳಿದೆ. 1,50,622 ಟನ್‌ ಒಣ ಮೇವು ಇದೆ. ಇದು 13 ವಾರಗಳಿಗೆ ಸಾಕಾಗುತ್ತದೆ. 4,88,889 ಟನ್‌ ಹಸಿರು ಮೇವು ಇದೆ. ಇದು 16 ವಾರಗಳಿಗೆ ಬೇಕಾಗುವಷ್ಟಿದೆ. ನೀರಿನ ಕೊರತೆ ಬಗ್ಗೆ ಸಮಸ್ಯೆಗಳು ಕೇಳಿ ಬಂದಿಲ್ಲ. ಸಾಕಷ್ಟು ಮೇವು ದಾಸ್ತಾನು ಇರುವುದರಿಂದ ಗೋಶಾಲೆಯಾಗಲಿ, ಮೇವು ಬ್ಯಾಂಕ್‌ ಸ್ಥಾಪನೆಯ ಅವಶ್ಯಕತೆ ಇಲ್ಲ. ಹಾಗೊಮ್ಮೆ ಮೇವು ಕೊರತೆ ಎದುರಾದರೆ ಗೋಶಾಲೆ ಮತ್ತು ಮೇವು ಬ್ಯಾಂಕ್‌ ಸ್ಥಾಪಿಸುವುದಾಗಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕುಡಿಯುವ ನೀರಿಗೆ ವ್ಯಯವಾಗಿರುವುದೆಷ್ಟು?: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳ ಮೂಲಕ ಹಣ ವೆಚ್ಚವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಎನ್‌ಆರ್‌ಡಿಡಬ್ಲುಪಿ ಮೂಲಕ ಇಲ್ಲಿಯವರೆಗೆ 816.76 ಲಕ್ಷ ರೂ, ನಗರಾಭಿವೃದ್ಧಿ ಇಲಾಖೆಯ ಮೂಲಕ 210 ಲಕ್ಷ ರೂ. ಕಂದಾಯ ಇಲಾಖೆಯ ಸಿಆರ್‌ಎಫ್, ಬರಪೀಡಿತ ಮತ್ತು ಬರ ನಿರ್ವಹಣೆಗಾಗಿ 1151.47 ಲಕ್ಷ ರೂ ವ್ಯಯಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ನಾಲ್ಕು ಗ್ರಾಮಗಳಲ್ಲಿ ಟ್ಯಾಂಕರ್‌ನಿಂದ ನೀರು
ಕನಕಪುರ ತಾಲೂಕಿನ ಪುಟ್ಟಹೆಗ್ಗಡೆವಲಸೆ ಮತ್ತು ಬಳೆಚನ್ನವಲಸೆ ಗ್ರಾಮಗಳು, ಮಾಗಡಿ ತಾಲೂಕಿನ ತೂಬಿನಕೆರೆ ಮತ್ತು ಜ್ಯೋತಿಪಾಳ್ಯ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಶೇಖರಿಸಿ ಟ್ಯಾಂಕರ್‌ಗಳ ಮೂಲಕ ಜನರಿಗೆ ಪೂರೈಕೆ ಯಗುತ್ತಿದೆ. ಜಿಲ್ಲಾ ಕೇಂದ್ರ ರಾಮನಗರದ ಒಂದೆ ರೆಡು ವಾರ್ಡ್‌ ಗಳಲ್ಲಿ ಕೆಲ ಸಂಕಷ್ಟ ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆ ಎದುರಾದರೆ ಜಿಲ್ಲಾಡಳಿತ ಸ್ಥಾಪಿಸಿರುವ ಬರನಿರ್ವಹಣೆ ಕಂಟ್ರೋಲ್ ರೂಂಗೆ ಕರೆ ಮಾಡಬಹುದಾಗಿದ್ದು, ಇಲ್ಲಿಯವರೆಗೂ ಒಂದೇ ಒಂದು ಕರೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಜಾನುವಾರುಗಳಲ್ಲಿ ಬೇಸಿಗೆ ವೇಳೆ ಕಾಡುವ ಕಾಲು, ಬಾಯಿ ಜ್ವರಕ್ಕೆ ವಾರ್ಷಿಕ ಎರಡು ಬಾರಿ ಲಸಿಕೆ ಹಾಕಬೇಕಾಗಿದೆ. ಈಗಾಗಲೇ ಮೊದಲನೆ ಸುತ್ತಿನ ಲಸಿಕೆಯನ್ನು ಯಶಸ್ವಿಯಾಗಿ ಹಾಕಲಾಗಿದೆ.ಇನ್ನೆರೆಡು ತಿಂಗಳು ಬಿಟ್ಟು ಮತ್ತೂಂದು ಸುತ್ತಿನ ಲಸಿಕೆ ಹಾಕಲಾಗುವುದು.
 ●ಅಸದುಲ್ಲಾ ಷರೀಫ್, ಪಶುವೈದ್ಯ ಇಲಾಖೆ ಸಹಾಯಕ ನಿರ್ದೆಶಕ
 ಜಿಲ್ಲೆಯಲ್ಲಿ ಮೇವಿನ ಸಮಸ್ಯೆಯೂ ಇದೆ, ನೀರನ ಸಮಸ್ಯೆಯೂ ಇದೆ. ಅಧಿಕಾರಿಗಳ ಮಾಹಿತಿ ಎಲ್ಲಾ ತಪ್ಪು. ಇದೆ. ಹಳ್ಳಿ, ಹಳ್ಳಿ ಸುತ್ತಿ ರೈತರ ಕಷ್ಟ ಸುಖ ವಿಚಾರಿಸಿದ್ದರೆ ವಾಸ್ತವಾಂಶ ಅರಿವಾಗುತ್ತಿತ್ತು. ಕೇವಲ ಹೇಳಿಕೆಗಳ ಮೂಲಕವೇ ರೈತರ ಹೊಟ್ಟೆ ತುಂಬಿಸುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಭೂಮಿ ಹದವಾಗುವಷ್ಟು ಮಳೆ ಆಗುತ್ತಿಲ್ಲ. ಜೂನ್‌, ಜುಲೈನಲ್ಲಿ ಬಿತ್ತನೆ ಆರಂಭಸಿಬೇಕಾಗಿದೆ. ಅಧಿಕಾರಿಗಳ ಅಂಕಿ ಅಂಶಗಳೆಲ್ಲ ಕಲ್ಪಿತ.
 ●ಎಂ.ರಾಮು, ರೈತ ಸಂಘದ ರಾಜ್ಯ ಉಪಾಧ್ಯಕ್ಷ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ