ಅನುಕೂಲಕ್ಕಾಗಿ ಆಧಾರ್‌ ಕೇಂದ್ರ ಸ್ಥಾಪನೆ

Team Udayavani, Jul 6, 2019, 2:58 PM IST

ಮಾಗಡಿ: ಕಳೆದ ಒಂದು ವರ್ಷದಿಂದ ಆಧಾರ್‌ ನೋಂದಾಣಿಗೆ ಸಾರ್ವಜನಿಕರು ಅಲೆಯುತ್ತಿದ್ದರು. ಇದನ್ನು ಮನಗೊಂಡು ಸಾರ್ವಜನಿಕರ ಅನುಕೂಲಕ್ಕಾಗಿ ಮಾಗಡಿ ತಾಲೂಕು ಕಚೇರಿಯಲ್ಲಿ ಆಧಾರ್‌ ಕೇಂದ್ರ ಸ್ಥಾಪಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಪಡಸಾಲೆಯಲ್ಲಿ ಆಧಾರ್‌ ಕೇಂದ್ರ ಉದ್ಘಾಟಿಸಿದ ಅವರು ಮಾತನಾಡಿ, ಸಾರ್ವಜನಿಕರು ಕಾರ್ಡ್‌ ಮಾಡಿಸಲು ಮತ್ತು ಆಧಾರ್‌ ತಿದ್ದುಪಡಿಗಾಗಿ ಬೆಂಗಳೂರು, ಕುಣಿಗಲ್, ರಾಮನಗರಕ್ಕೆ ಅಲೆಯುತ್ತಿದ್ದರು. ಇದನ್ನು ತಪ್ಪಿಸಬೇಕೆಂದು ಸಂಬಂ«‌ಪಟ್ಟ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಏರಿದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಆಧಾರ್‌ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಂಡಿದ್ದರಿಂದ ಚಾಲನೆ ದೊರಕಿದೆ. ಇದೇ ರೀತಿ ಮಾಡಬಾಳ್‌, ತಿಪ್ಪಸಂದ್ರ, ಕುದೂರಿನಲ್ಲಿಯೂ ಆಧಾರ್‌ ಕೇಂದ್ರ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಇ.ಪಿ.ಶೌಚಾಲಯಕ್ಕೆ ಚಾಲನೆ: ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿ ಬರುವ ರೈತರು, ನಾಗರಿಕರು ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದರು. ತಾಲೂಕು ಕಚೇರಿ ಬಳಿ ಇರುವ ಶೌಚಾಲಯವನ್ನು ದುರಸ್ಥಿಪಡಿಸುವಂತೆ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಆಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಕಚೇರಿ ಮತ್ತು ತಾಪಂ ಬಳಿ ಇ.ಪಿ. ಶೌಚಾಲಯಕ್ಕೆ ಚಾಲನೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಪುರಸಭೆ, ಹೊಸಪೇಟೆ ವೃತ್ತ, ಕಲ್ಯಾಗೇಟ್ ಸೇರಿದಂತೆ ಅಗತ್ಯವಿರುವೆಡೆ ಇ.ಪಿ. ಶೌಚಾಲಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಮಿನಿ ವಿಧಾನಸೌಧ ನಿರ್ಮಾಣ: ಮಾಗಡಿ ಪಟ್ಟಣದಲ್ಲಿರುವ ಕಂದಾಯ ಇಲಾಖೆ ಕಟ್ಟಡ ತೀರ ಶಿಥಿಲಗೊಂಡಿದೆ. ಮಳೆ ಬಿದ್ದರೆ ಕಟ್ಟಡ ಸೋರುತ್ತಿರುವುದರಿಂದ ಮಹತ್ವದ ದಾಖಲೆಗಳು ನಾಶವಾಗುವ ಆತಂಕವಿದೆ.

ಇದರಿಂದ ಇಲ್ಲೊಂದು ಸುಂದರ, ಸುಸಜ್ಜಿತವಾದ ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ 10 ಕೋಟಿ ರೂ. ಮಂಜೂರಾತಿಗೆ ಬೇಡಿಕೆ ಇಟ್ಟಿದ್ದೇವೆ. ಸಂಬಂಧಪಟ್ಟ ಕಂದಾಯ ಸಚಿವರಿಗೂ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆ ಬಾವಿ: ಪಟ್ಟಣದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಅನುದಾನದಡಿ ಅಗತ್ಯವಿರುವೆಡೆ 10 ಕೊಳವೆ ಬಾವಿ ಕೊರೆಸಲಾಗಿದೆ. ಉಳಿದ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಗಳು ಕಂಡು ಬಂದರೆ ಅಲ್ಲಿಯೂ ಕೊಳವೆ ಬಾವಿ ಕೊರೆಸಿ, ಕುಡಿವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆಯಲ್ಲಿ ತಾಪಂ ಸದಸ್ಯ ಎಂ.ಜಿ.ನರಸಿಂಹಮೂರ್ತಿ, ಪುರಸಭಾ ಮಾಜಿ ಸದಸ್ಯರಾದ ಎಂ.ಬಿ.ಮಹೇಶ್‌, ಕೆ.ವಿ.ಬಾಲರಘು, ಸುನಿತಾ ನಾಗರಾಜು, ನರಸಿಂಹಯ್ಯ, ಚಿಕ್ಕಣ್ಣ, ರಂಗಣ್ಣಿ ಬೊರ್‌ವೆಲ್ ನರಸಿಂಹಯ್ಯ, ರಹಮತ್‌, ಜೈಕುಮಾರ್‌, ಸರ್ದಾರ್‌, ಮುನಿರಾಜು, ರಮೇಶ್‌, ಅಶ್ವಥ್‌, ಕೋಟಪ್ಪ, ತಹಶೀಲ್ದಾರ್‌ ಟಿ.ಎನ್‌.ನರಸಿಂಹಮೂರ್ತಿ, ಆರ್‌ಆರ್‌ಟಿ ಶಿರಸ್ತೆದಾರ್‌ ಜಗದೀಶ್‌, ಕೆಂಪೇಗೌಡ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ