ಮಾವಿನ ಬೆಳೆಗೆ ಹಣ್ಣಿನ ನೊಣದ ಕಾಟ

Team Udayavani, Feb 15, 2019, 7:31 AM IST

ರಾಮನಗರ: ಜಿಲ್ಲೆಯ ಆರ್ಥಿಕತೆಕೆ ರೇಷ್ಮೆ, ಹಾಲಿನ ಜೊತೆಗೆ ಮಾವು ಕೂಡ ಹೆಚ್ಚು ಕೊಡುಗೆ ನೀಡುತ್ತದೆ. ಆದರೆ, ಈ ಬಾರಿ ಮಾವು ಬೆಳೆಗೆ ಬ್ಯಾಕ್ಟೋಸೆರಾ ಡೊರಾಸಾಲಿಸ್‌ (ಹೆನ್‌ಡಲ್‌) ಎನ್ನುವ ನೊಣ ಮಾವಿನ ಬೆಳೆಯನ್ನೇ ನಾಶ ಮಾಡುವ ಸಾಧ್ಯತೆಯನ್ನು ಮಾವು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೊಣದ ಹಾವಳಿಯ ನಿಯಂತ್ರಣಕ್ಕೆ ಮುಂದಾಗಿದ್ದಾರೆ. 

ಏಕೆ ಆತಂಕ: ಪ್ರಸಕ್ತ ವರ್ಷದಲ್ಲಿ ಮಾವಿನ ಹಣ್ಣುಗಳು ಗೋಲಿಯಾಕಾರದಲ್ಲಿ ಕಂಡು ಬಂದಿದೆ. ಮಾವಿನ ಹಣ್ಣಿನ ನೊಣದ ಬಾಧೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆಯನ್ನು ಮಾವು ಬೆಳೆಗಾರರ ಆತಂಕಕ್ಕೆ ತೋಟಗಾರಿಕೆ ಅಧಿಕಾರಿಗಳು ಸಹ ದನಿಗೂಡಿಸಿದ್ದಾರೆ. ಜಿಲ್ಲೆಯ ಕೆಲವೆಡೆ ಮಾವಿನ ಹೂಗಳು ಗೊಂಚುಲುಗಳಲ್ಲೇ ಉದುರಿಹೋಗುತ್ತಿರುವುದು ಮತ್ತೂಂದು ಆತಂಕಕ್ಕೆ ಕಾರಣವಾಗಿದೆ. 

ವಿಶ್ವಾದ್ಯಂತ ಈ ಕೀಟ ಬಾಧೆ ಕೊಡುತ್ತಿದೆ. “ಹಣ್ಣಿನ ನೊಣ” ಅಂತಲೇ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಈ ಕೀಟ ಬಲಿತ ಮಾವಿನ ಕಾಯಿ ಮೇಲೆ ದಾಳಿ ಮಾಡುತ್ತದೆ. ತನ್ನ ಚೂಪಾದ ಅಂಡನಾಳದಿಂದ ಚುಚ್ಚಿ ಮೊಟ್ಟ ಇಡುತ್ತವೆ. ಆಗ ಹಣ್ಣಿನ ಆಭಾಗ ಮೆದುವಾಗಿ ಕೊಳೆಯುತ್ತದೆ. ಅಲ್ಲದೆ, ಹಣ್ಣಿನ ರಸ ಹೊರಬಂದು ಒಣಗಿ ಅಂಟು ಹರಳಾಗುತ್ತದೆ. ಒಳಗಡೆ ಮರಿ ಹುಳುಗಳು ಮಾವಿನ ಹಣ್ಣಿನ ತಿರುಳನ್ನೇ ತಿಂದು ಇಡೀ ಹಣ್ಣು ಕೊಳೆತು ಹಾಳಾಗುತ್ತದೆ. 

ರಾಮನಗರದ ಮಾವು ಪ್ರಸಿದ್ಧ: ಜಿಲ್ಲೆಯಲ್ಲಿ ಮಾವು ಪ್ರಮುಖ ಬೆಳೆಯಾಗಿದೆ. 23090 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಬದಾಮಿ, ರಸಪುರ ಹಣ್ಣು ಹೆಸರುವಾಸಿ. ಬದಾಮಿ, ರಸಪೂರಿ ಜೊತೆಗೆ ಸೇಂದೂರ, ತೋತಾಪುರಿ, ಮಲ್ಲಿಕಾ ಮುಂತಾದ ತಳಿಗಳ ಮಾವಿನ ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ಕಳೆದ ವರ್ಷ 1.68 ಲಕ್ಷ ಮೆಟ್ರಿಕ್‌ ಟನ್‌ ಮಾವಿನ ಹಣ್ಣುಗಳನ್ನು ಬೆಳೆಯಲಾಗಿತ್ತು. ಶೇ.80ಕ್ಕೂ ಹೆಚ್ಚು ಬದಾಮಿ ಮಾವಿನ ಹಣ್ಣನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣುಗಳ ರುಚಿ ಸ್ವಾದಿಷ್ಟವಾಗಿದ್ದು, ತುಂಬಾ ಬೇಡಿಕೆ ಇರುವ ಹಣ್ಣು. ಮುಂಬೈ ಮೂಲಕ ಹೊರ ದೇಶಗಳಿಗೂ ರವಾನೆಯಾಗುತ್ತವೆ. 

ಕಳೆದ ವರ್ಷ ಬೆಳೆಗಾರರಿಗೆ ನಷ್ಟ: ಕಳೆದ ವರ್ಷ ಮಾವು ಬೆಳೆಗೆ ಬೇಡಿಕೆ ಕುಸಿದು ಬೆಳೆಗಾರರು ತೀವ್ರ ನಷ್ಟವನ್ನು ಅನುಭವಿಸಿದರು. ರಸ್ತೆ ಬದಿಯಲ್ಲಿ ಮಾವಿನ ಹಣ್ಣುಗಳನ್ನು ಚೆಲ್ಲಿದ್ದ ಬೆಳೆಗಾರರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಮರದಿಂದ ಮಾವು ಕೀಳಲು ಕೂಲಿ ಕೊಟ್ಟು ನಷ್ಟ ಮಾಡಿಕೊಳ್ಳಲಿಚ್ಚಿಸದ ನೂರಾರು ಬೆಳೆಗಾರರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಾವಿನ ಕಾಯಿಯನ್ನು ಮರದಿಂದ ಕೀಳದೇ ಹಾಗೆ ಬಿಟ್ಟಿದ್ದು ಉಂಟು. 

ಕಳೆದ ವರ್ಷ ಮಳೆ ಹೆಚ್ಚಾದ ಕಾರಣ, ಮಾವಿನ ಹಣ್ಣಿನಲ್ಲಿ ನೀರಿನಂಶ ಜಾಸ್ತಿ ಇತ್ತು. ನೀರುಗಾಯಿ ಅಂತಲೇ ಗ್ರಾಮಸ್ಥರು ಇಂತಹ ಹಣ್ಣುಗಳನ್ನು ಕರೆಯುವುದುಂಟು. ಇಂತಹ ಹಣ್ಣುಗಳು ಜ್ಯೂಸ್‌ ಫ್ಯಾಕ್ಟರಿಗೆ ಉಪಯೋಗವಿಲ್ಲ. ಜೊತೆಗೆ ರುಚಿಯೂ ಇರದ ಕಾರಣ ಜನ ಸಾಮಾನ್ಯರು ಸಹ ಇಂತಹ ಹಣ್ಣುಗಳನ್ನು ಕೊಳ್ಳುವುದಿಲ್ಲ. ಹೀಗಾಗಿ ಬೆಳೆಗಾರರು ಕಳೆದ ವರ್ಷ ನಷ್ಟ ಅನುಭವಿಸಿದ್ದರು. ಕಳೆದ ಬಾರಿಯ ಕಹಿ ನೆನಪುಗಳಲ್ಲೇ ಹೊಸ ಬೆಳೆ ಬಂದಿದ್ದು, “ಹಣ್ಣಿನ ನೊಣ”ದ ಕಾಟದ ಚಿಂತೆ ಬೆಳೆಗಾರರನ್ನು ಆವರಿಸಿದೆ. 

ನಿವಾರಣಾ ಕ್ರಮಗಳು?: ಹಣ್ಣಿನ ನೊಣದ ಬಾಧೆಯನ್ನು ತಡೆಯಲು ತೋಟಗಾರಿಕಾ ಇಲಾಖೆ ಕೆಲವು ನಿರ್ವಹಣಾ ಕ್ರಮಗಳನ್ನು ಸೂಚಿಸಿದೆ. ಮಾವಿನ ತೋಟಗಳಲ್ಲಿ ಕಾಯಿಗಳು ನಿಂಬೆ ಹಣ್ಣಿನ ಗಾತ್ರ ಹೊಂದಿದಾಗ ಎಕರೆಗೆ 6-8 ಲಿಂಗಾಕರ್ಷಕ ಮೋಹಕ ಬಲೆಗಳನ್ನು ಕಟ್ಟಿ ನಾಲ್ಕು ಹನಿ ಡೈಕೋರೋವಾಸ್‌ ಔಷಧಿಯನ್ನು ಲಿಂಗಾಕರ್ಷಕ ಮೋಹಕವನ್ನು ಹೊಂದಿರುವ ಮರದ ತುಂಡಿನ ಮೇಲೆ ಹಾಕಬೇಕು.

ಇಂತಹ ಮರದ ತುಂಡನ್ನು 20-25 ದಿನಗಳಿಗೊಮ್ಮೆ ಬದಲಾಯಿಸಬೇಕು. ತೋಟದಲ್ಲಿ ಬಿದ್ದ ಮಾವಿನ ಹಣ್ಣುಗಳನ್ನು ಆಗಿಂದಾಗ್ಗೆ ಗುಂಡಿ ತೋಡಿ ಮುಚ್ಚಬೇಕು. ಆದರೆ, ಹಣ್ಣಿನ ನೊಣಗಳು ಮಣ್ಣಿನಲ್ಲಿ ಕೋಶವಸ್ಥೆಗೆ ಜಾರಿ ಅನುಕೂಲಕರ ವಾತಾರಣದಲ್ಲಿ ಸಂತತಿ ಅಭಿವೃದ್ಧಿªಗೊಂಡು ಫ‌ಸಲನ್ನು ಸಹ ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುವುದರಿಂದ ಮಾವು ಕಟಾವು ಪೂರ್ಣಗೊಂಡ ನಂತರ ಮರಗಳ ಸುತ್ತಲಿನ ಭೂಮಿಯನ್ನು ಆಳವಾಗಿ ಅಗೆಯುವುದರಿಂದ ಮಣ್ಣಿನಲ್ಲಿ ಇರುವ ಹಣ್ಣಿನ ನೊಣಗಳ ಕೋಶವನ್ನು ನಾಶವಾಗುತ್ತದೆ.

ಮರಗಳ ರಭೆಗಳನ್ನು ಸರಿಸಿ, ಸೂರ್ಯನ ಬೆಳಕು ಮರದ ಒಳಭಾಗಕ್ಕೆ ಬರುವಂತೆ ಮಾಡಬೇಕಾಗಿದೆ. ಕೀಟದ ಹಾವಳಿ ಹೆಚ್ಚಾಗಿದ್ದಲ್ಲಿ 100 ಗ್ರಾಂ ಬೆಲ್ಲವನ್ನು ಒಂದು ಲೀಟರ್‌ ನೀರಿನಲ್ಲಿ ಕರಗಿಸಿ, ಆ ದ್ರಾವಣಕ್ಕೆ 2 ಮಿಲಿ ಡೆಲ್ಪಾಮೆಥಿನ್‌/ಮಾಲಾಧಿಯಾನ್‌ ಬೆರಸಬೇಕು. ನಂತರ ಈ ದ್ರಾವಕದಲ್ಲಿ ಪೊರಕೆಯನ್ನು ಅದ್ದಿ ಮರದ ಬುಡದಿಂದ ಒಂದು ಅಡಿ ಎತ್ತರಕ್ಕೆ 3-4 ಸಾರಿ ಪಟ್ಟಿ ಬರುವ ರೀತಿಯಲ್ಲಿ ಬಳಿಯಬೇಕು. ಈ ಕ್ರಮವನ್ನು ವಾರಕ್ಕೊಮ್ಮೆ ಮಾಡಬೇಕು. ಪ್ರೋಟಿನ್‌ ಹೈಡ್ರೋಲೈಸೆಟ್‌ ಅಥವಾ ಈಸ್ಟ್‌ ಲಭ್ಯವಿದ್ದಲ್ಲಿ ಸೋಯಾಬೀನ್‌ ಪೌಡರ್‌ ಪ್ರತಿ ಲೀಟರ್‌ಗೆ 4-5 ಗ್ರಾಂ ಬೆಲ್ಲ ಮತ್ತು ಕೀಟನಾಶಕ ಬಳಸಿ ಬೊಡ್ಡೆ ಉಪಚಾರ ಕೈಗೊಳ್ಳಬಹುದು.

* ಬಿ.ವಿ.ಸೂರ್ಯ ಪ್ರಕಾಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ