ಹೆಲ್ತ್‌ ಕಾರ್ಡ್‌: ಹೆಚ್ಚಿನ ಶುಲ್ಕ ಪಡೆದರೆ ಅನುಮತಿ ರದ್ದು

Team Udayavani, Nov 20, 2019, 4:40 PM IST

ರಾಮನಗರ: ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್‌ಗಳಿಗೆ ನಿಗದಿಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿದ್ದರೆ, ಅಂತಹ ಸೇವಾ ಕೇಂದ್ರಗಳಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸುವುದಾಗಿ ಜಿಲ್ಲಾ ಪಂಚಾಯ್ತಿ ಸಿಇಓ ಮೊಹಮ್ಮದ್‌ ಇಕ್ರಾಮುಲ್ಲ ಷರೀಪ್‌ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಕಾರ್ಡ್‌ಗಳಿಗೆ ಸಾರ್ವಜನಿಕರನ್ನು ನೋಂದಾಯಿಸಲು ಅನುಮತಿ ಪಡೆದಿರುವ ಏಜೆನ್ಸಿಗಳು ಪೇಪರ್‌ ಕಾರ್ಡ್‌ಗೆ 10 ರೂ, ಪ್ಲಾಸ್ಟಿಕ್‌ ಕಾರ್ಡ್‌ಗೆ 30 ರೂ ಪಡೆಯಬೇಕು. ನಿಗದಿಗಿಂತ ಹೆಚ್ಚಿನ ಶುಲ್ಕ ಪಡೆದ ಏಜೆನ್ಸಿಗಳ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್‌ ಆರೋಗ್ಯ ಕಾರ್ಡ್‌ಗೆ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಬಗ್ಗೆ ಜಿಪಂ ಸದಸ್ಯರು ಪದೇ ಪದೇ ಗಮನ ಸೆಳದರು ತಪ್ಪಿತಸ್ಥರ ವಿರುದ್ದ ಕ್ರಮವಹಿಸಿಲ್ಲವೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಾಡ ಕಚೇರಿಯಲ್ಲಿ ಆರೋಗ್ಯ ಕಾರ್ಡ್‌ ವಿತರಣೆ:ಜಿಲ್ಲೆಯಲ್ಲಿ ಆರೋಗ್ಯ ಕಾರ್ಡ್‌ ವಿತರಣೆಗೆ 66 ಸೇವಾ ಸಿಂಧು ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಗ್ರಾಪಂ, ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾದರೆ ನೋಂದಣಿ ಮತ್ತು ಕಾರ್ಡ್‌ ವಿತರಣೆಗೆ ವೇಗ ಸಿಗಲಿದೆ ಎಂದು ಸಿಇಓ ಅವರು ಸಲಹೆ ನೀಡಿದರು. ಸಿಇಒ ಅವರ ಸಲಹೆಯನ್ನು ಪುರಸ್ಕರಿಸಿದ ಜಿಪಂ ಅಧ್ಯಕ್ಷ ಎಚ್‌.ಬಸಪ್ಪ, ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಹೆಲ್ತ್‌ ಕಾರ್ಡ್‌ ನೋಂದಣಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಖಾಸಗಿ ಆಸ್ಪತ್ರೆಗಳ ನೋಂದಣಿ: ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಯಾವ ಖಾಸಗಿ ಆಸ್ಪತ್ರೆಯೂ ನೋಂದಣಿಯಾಗಿಲ್ಲ. ಎಂದು ಜಿಪಂ ಉಪಾಧ್ಯಕ್ಷೆ ಜಿ.ಡಿ.ವೀಣಾ ಕುಮಾರಿ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯರು, ಮಾಲೀಕರ ಸಭೆ ಆಯೋಜಿಸಿ ಮನವೊಲಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ 11,26,000 ಮಂದಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲು ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 2.50 ಲಕ್ಷ ಮಂದಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಂದಕ್ಕಿಂತ ಹೆಚ್ಚು ಬಾರಿ ಸಹಾಯಧನ: ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಒಂದೇ ಯೋಜನೆಯಡಿ ಫ‌ಲಾನುಭವಿಗಳು ಒಂದಕ್ಕಿಂತ ಹೆಚ್ಚು ಬಾರಿ ಸಹಾಯಧನವನ್ನು ಪಡೆದಿರುವ ಆರೋಪವಿದೆ. ಎರಡೂ ಇಲಾಖಾಧಿಕಾರಿಗಳು ತಕ್ಷಣ ಸಹಾಯಧನ ಪಡೆದಿರುವ ಫ‌ಲಾನುಭವಿಗಳ ಪಟ್ಟಿಯನ್ನು ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ

ಎಚ್‌.ಬಸಪ್ಪ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ ಎತ್ತಿದ ಆರೋಪಕ್ಕೆ ಆರೋಪವನ್ನು ಪರಿಶೀಲಿಸಲು ಪಟ್ಟಿ ಕೊಡಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಕರ ಖರೀದಿಸಲು ನೀಡುವ ಸಹಾಯ ಧನಕ್ಕಾಗಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಪಡೆದು ಅವರು ಸಲ್ಲಿಸುವ ಎಲ್ಲಾ ವಿವರಗಳನ್ನು ಪರಿಶೀಲಿಸಿ ಸಹಾಯಧನ ಮಂಜೂರು ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಜಿಪಂ ಉಪಾಧ್ಯಕ್ಷೆ ವೀಣಾ ಮಾತನಾಡಿ, ಸಿರಿಧಾನ್ಯ ಗಳನ್ನು ಉಪಯೋಗಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಸಾರ್ವ ಜನಿಕರು ಇದರ ಬೆಲೆ ಹೆಚ್ಚಿರುವುದರಿಂದ ಖರೀದಿಸಲು ಸಾಧ್ಯವಾಗುತ್ತಿಲ್ಲ. ಸಿರಿಧಾನ್ಯಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಸಾಧ್ಯತೆಯ ಬಗ್ಗೆ ಚಿಂತಿಸಬೇಕಾ ಗಿದೆ ಎಂದರು. ಹಾಪ್‌ಕಾಮ್ಸ್‌ ಮೂಲಕ ಸಿರಿಧಾನ್ಯ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದರು.

ಹಾಸ್ಟೆಲ್‌ಗ‌ಳಲ್ಲಿ ಅವ್ಯವಸ್ಥೆ: ಜಿಲ್ಲೆಯ ಸರ್ಕಾರಿಹಾಸ್ಟೆಲ್‌ಗ‌ಳಲ್ಲಿನ ಆಹಾರ ವ್ಯವಸ್ಥೆಯ ಬಗ್ಗೆ ಗಮನ ಸೆಳೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಪ್ರಸನ್ನಕುಮಾರ್‌, ಹಾಸ್ಟೆಲ್‌ ನಿವಾಸಿಗಳಿಗೆ ಗುಣ ಮಟ್ಟದ ಆಹಾರ ಮತ್ತು ಮೆನು ಪ್ರಕಾರ ಆಹಾರ ನೀಡಲಾಗುತ್ತಿಲ್ಲ ಎಂದು ದೂರಿದರು. ಸೊಪ್ಪು, ತರಕಾರಿಗಳನ್ನು ಬಳಸುತ್ತಿಲ್ಲ, ಹೀಗಾದರೆ ಹಾಸ್ಟೆಲ್‌ವಾಸಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಹಲವಾರು ಸಭೆಗಳಲ್ಲಿ ವಿಷಯ ಪ್ರಸ್ತಾಪವಾಗಿದ್ದರು ಏನೂ ಕ್ರಮ ಜರುಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಅಧ್ಯಕ್ಷ ಎಚ್‌.ಬಸಪ್ಪ, ಜಿಲ್ಲೆಯ ಎಲ್ಲಾ ಸರ್ಕಾರಿ ಹಾಸ್ಟೆಲ್‌ಗ‌ಳಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿ ವಾರ್ಡ್‌ನ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ನೀಡಲಾಗುವ ಗುರುತಿನ ಚೀಟಿ ಪಡೆಯಲು ಕಾರ್ಮಿಕರು ಪರದಾಡುತ್ತಿದ್ದಾರೆ. ಮಧ್ಯವರ್ತಿಗಳು ಹೆಚ್ಚಿನ ಹಣ ಪಡೆದು ಅವರಿಗೆ ಗುರುತಿನ ಚೀಟಿ ನೀಡುತ್ತಿರುವ ಬಗ್ಗೆ ದೂರು ಬರುತ್ತಿದೆ ಎಂದು ಉಪಾಧ್ಯಕ್ಷೆ ವೀಣಾ ಕುಮಾರಿ ಅವರ ದೂರಿಗೆ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸರ್ಕಾರಿ ಕಾರ್ಯಕ್ರಮಗಳಿಗೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗರತ್ನ ಆರೋಪಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಉಮೇಶ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಈ ವಿಭಾಗದಿಂದ ಇನ್ನಷ್ಟು

  • ರಾಮನಗರ: ಗ್ರಾಮ ಪಂಚಾಯ್ತಿಗಳೇ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಸಾಧ್ಯ ವಾಗುವಂತಹ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತಾಲೂಕು ಪಂಚಾಯ್ತಿ ಸ್ಥಾಪಿಸಲು ಮುಂದಾಗಿದೆ. ತಾಲೂಕಿನ...

  • ಕನಕಪುರ: ರಾಮನಗರ ಜಿಲ್ಲೆಗೆ ಬಿಡುಗಡೆ ಯಾದ ಅನುದಾನವನ್ನು ಯಾವುದೇ ಸರ್ಕಾರ ಸ್ಥಗಿತಗೊಳಿಸಿದರೂ, ರಾಜ್ಯ ರೈತ ಸಂಘ ಅಂತಹ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ...

  • ರಾಮನಗರ: ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ತಾಲೂಕಿನ ಬಿಡದಿ ಹೋಬಳಿ ಕಂಚುಗಾರನಹಳ್ಳಿ ,ಗ್ರಾಮದಲ್ಲಿ ನಿರ್ಮಿಸಿರುವ ಶಾಲೆಯ ಕಟ್ಟಡಕ್ಕೆ ಹೆಚ್ಚುವರಿ ಕೊಠಡಿಗಳನ್ನು...

  • ಚನ್ನಪಟ್ಟಣ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಡಂಬಳ್ಳಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ಸೂಕ್ತವಾಗಿ ವಿಲೇವಾರಿ ಮಾಡದೇ, ಪಂಚಾಯಿತಿ...

  • ರಾಮನಗರ: ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷವಹಿಸುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಪಾರಸ್ಸು ಮಾಡುವುದಾಗಿ ಮಾಗಡಿ ಕ್ಷೇತ್ರದ ಶಾಸಕ...

ಹೊಸ ಸೇರ್ಪಡೆ