ಜೆಡಿಎಸ್ ತೆಕ್ಕೆಗೆ ಕಣ್ಣೂರು ಗ್ರಾಪಂ ಆಡಳಿತ
Team Udayavani, Feb 10, 2021, 2:04 PM IST
ಮಾಗಡಿ: ತಾಲೂಕಿನ ಕಣ್ಣೂರು ಗ್ರಾಪಂ ಆಡಳಿತ ಚುಕ್ಕಾಣಿ ಜೆಡಿಎಸ್ ಪಕ್ಷದ ಪಾಲಾಗಿದ್ದು, ಅವಿರೋಧ ಆಯ್ಕೆಯಾದ ನೂತನ ಅಧ್ಯಕ್ಷ ಜಗದೀಶ್ ಮತ್ತು ಉಪಾಧ್ಯಕ್ಷೆ ಮಮತಾ ಅವರನ್ನು ಜೆಡಿಎಸ್ ಮುಖಂಡರು, ಸದಸ್ಯರು ಅಭಿನಂದಿಸಿದರು.
ಅಧ್ಯಕ್ಷ ಜಗದೀಶ್ ಮಾತನಾಡಿ, ಗ್ರಾಪಂ ಸದಸ್ಯರು ಜಾತ್ಯತೀತವಾಗಿ ನನ್ನ ಅವಿರೋಧ ಆಯ್ಕೆಗೆ ಶ್ರಮಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕ ಎ.ಮಂಜುನಾಥ್ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜನಪಯೋಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ತಾಪಂ ಸದಸ್ಯ ಎಂ.ಜಿ.ನರಸಿಂಹಮೂರ್ತಿ ಮಾತನಾಡಿ, ಶಾಸಕ ಎ.ಮಂಜುನಾಥ್ ಈ ಭಾಗದಲ್ಲಿ ಉತ್ತಮ ರಸ್ತೆ ಮಾಡಿಸಿದ್ದಾರೆ. ಅಗತ್ಯ ಕೊಳವೆ ಬಾವಿ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುದಾನ ತಂದು ಹಿಂದುಳಿದ ಕಣ್ಣೂರು ಗ್ರಾಪಂ ಸರ್ವತೋಮುಖ ಅಭಿವೃದ್ಧಿಗೊಳಿಸಲಾಗು ವುದು ಎಂದು ಹೇಳಿದರು.
ನೂತನ ಅಧ್ಯಕ್ಷ ಜಗದೀಶ್ ಮತ್ತು ಉಪಾಧ್ಯಕ್ಷೆ ಮಮತಾ ಅವರನ್ನು ಗ್ರಾಪಂ ಸದಸ್ಯರು, ಪಕ್ಷದ ಮುಖಂಡರು ಹಾರ ಹಾಕಿ ಅಭಿನಂದಿಸಿದರು. ತಾಪಂ ಸದಸ್ಯ ಹನುಮೇಗೌಡ, ಪುರುಷೋತ್ತಮ್, ಪ್ರಭು, ನಾಗರಾಜು, ವೆಂಕಟೇಶ್, ರಾಜಶೇಖರ್, ಗುಂಡಿಗೆರೆ ಮಂಜುನಾಥ್, ರುದ್ರೇಶ್, ಶಿವರಾಮ್, ಮಹೇಶ್, ಧ್ರುವ, ವಾಸುದೇವ್, ಚಿಕ್ಕರಾಜು, ರವಿಕುಮಾರ್ ಉಪಸ್ಥಿತರಿದ್ದರು.
ಜಾಲಮಂಗಲ ಗ್ರಾಪಂಗೆ ಜೆಡಿಎಸ್ ಸಾರಥ್ಯ :
ರಾಮನಗರ: ತಾಲೂಕಿನ ಜಾಲಮಂಗಲ ಗ್ರಾಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಜು ಹಾಗೂ ಉಪಾಧ್ಯಕ್ಷರಾಗಿ ಪುಟ್ಟಮಾದಮ್ಮ ಆಯ್ಕೆಯಾದರು. ಜಾಲಮಂಗಲ ಗ್ರಾಪಂನ 11 ಸದಸ್ಯರ ಪೈಕಿ ಏಳು ಮಂದಿ ಜೆಡಿಎಸ್ ಹಾಗೂ ನಾಲ್ಕು ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ರಾಜು ಏಳು ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಬೆಂಬಲಿತ ಶ್ರೀಕಾಂತ್ ನಾಲ್ಕು ಮತಗಳು ಪಡೆದು ಪರಾಜಿತರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪುಟ್ಟಮಾದಮ್ಮ ಹೊರತು ಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ರಾಜು ಮಾತನಾಡಿ, ಶಾಸಕ ಎ.ಮಂಜುನಾಥ್, ಗ್ರಾಪಂ ಸದಸ್ಯರು, ಮುಖಂಡರ ಮಾರ್ಗದರ್ಶ
ನದೊಂದಿಗೆ ಜಾಲಮಂಗಲ ಗ್ರಾಪಂ ಅನ್ನು ಮಾದರಿ ಗ್ರಾಪಂ ಆಗಿಸಲು ಶ್ರಮಿಸಲಾಗುತ್ತದೆ. ರಾಜಕೀಯ ಜಿದ್ದಾಜಿದ್ದಿ ಚುನಾವಣೆಗೆ ಮಾತ್ರ ಸೀಮಿತ. ಮುಂದೆ ಎಲ್ಲಾ ಸದಸ್ಯರು, ಮುಖಂಡರು, ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು. ನೂತನ ಅಧ್ಯಕ್ಷ ರಾಜು ಹಾಗೂ ಉಪಾಧ್ಯಕ್ಷೆ ಪುಟ್ಟಮಾದಮ್ಮ ಅವರನ್ನು ಜೆಡಿಎಸ್ ಮುಖಂಡರಾದ ಸುಬ್ಟಾಶಾಸ್ತ್ರಿ, ವೆಂಕಟಾಚಲಯ್ಯ, ಅಪ್ಪಿಗೌಡ, ಶಿವಣ್ಣ, ಜಯಕುಮಾರ್, ರೈತಸಂಘ ಮುಖಂಡ ಕುಮಾರಸ್ವಾಮಿ, ಪಂಚಾಯಿತಿ ಸದಸ್ಯರು ಅಭಿನಂದಿಸಿದರು.