ರೈತರ ಅನುಕೂಲಕ್ಕೆ ಯೋಜನೆಗೆ ಘೋಷಿಸಲಿ

ಜಿಲ್ಲೆಗೆ ವಿಶೇಷ ಯೋಜನೆ ಘೋಷಿಸುವ ಆಶಯ • ಜನತೆಗೆ ನಿರಾಸೆ ಮೂಡಿಸಿದ ಕಳೆದ ಬಜೆಟ್

Team Udayavani, Jul 5, 2019, 12:00 PM IST

ರಾಮನಗರ: ಜುಲೈ 5ರ ಗುರುವಾರ ಕೇಂದ್ರ ಸರ್ಕಾರ ತನ್ನ ಬಜೆಟ್ ಮಂಡಿಸಲಿದೆ. ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ನಿಂದ ಜಿಲ್ಲೆಯ ಜನತೆ ಹೆಚ್ಚೇನು ನಿರೀಕ್ಷಿಸದಿದ್ದರೂ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಇದೀಗ ವಿತ್ತ ಸಚಿವರಾಗಿರುವ ನಿರ್ಮಲಾ ಅವರಿಂದ ಕೆಲವು ನಿರೀಕ್ಷೆಗಳನ್ನು ಜಿಲ್ಲೆಯ ಜನತೆ ಇರಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಲೇಖಾನುದಾನ ಪಡೆದುಕೊಂಡಿತ್ತು. ಇದೀಗ ಜುಲೈ 5ರಂದು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದೆ. ಕಳೆದ ಬಜೆಟ್‌ನಲ್ಲಿ ವಿಶೇಷವಾಗಿ ರಾಮನಗರ ಜಿಲ್ಲೆಗೆ ಲಾಭವಾಗುವ ಯಾವ ಕಾರ್ಯಕ್ರಮಗಳು, ಯೋಜನೆಗಳು ಸಿಕ್ಕಿರಲಿಲ್ಲ. ವಿಶೇಷ ಅನುದಾನವೂ ಲಭ್ಯವಾಗಿರಲಿಲ್ಲ. ಹೀಗಾಗಿ ಜಿಲ್ಲೆಯ ಜನತೆಗೆ ನಿರಾಸೆ ಇದೆಯಾದರೂ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ನಿರೀಕ್ಷೆಗೂ ಮೀರಿದ ಮತಗಳು ಲಭಿಸಿದ್ದು, ಮತದಾರರ ವಿಶ್ವಾಸಗಳಿಸಲು ವಿಶೇಷ ಯೋಜನೆಗಳನ್ನು ಘೋಷಿಸಿವು ಆಶಯವನ್ನು ಜಿಲ್ಲೆಯ ಜನತೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯನ್ನು ಪ್ರವಾಸಿ ನಕ್ಷೆಯಲ್ಲಿ ಸೇರಿಸಿ: ಸದರಿ ಬಜೆಟ್‌ನಲ್ಲಿ ಸಬ್‌ ಅರ್ಬರ್‌ಬನ್‌ ರೈಲು ಸೇರಿದಂತೆ ಹೊಸ ರೈಲುಗಳ ಘೋಷಣೆ, ಮೇಕೆದಾಟು ಯೋಜನೆಗೆ ಒಪ್ಪಿಗೆ ಮತ್ತು ಅನುದಾನ ಘೋಷಣೆ, ರೈತರ ಇನ್ನಷ್ಟು ಬೆಳೆಗಳಿಗೆ ಗರಿಷ್ಠ ಸಹಾಯ ಬೆಂಬಲ (ಎಂ.ಎಸ್‌.ಪಿ) ಬೆಲೆ ಘೋಷಣೆ, ಜಿಲ್ಲೆಯನ್ನು ದೇಶದ ಪ್ರವಾಸಿ ನಕ್ಷೆಯಲ್ಲಿ ಸೇರಿಸುವ ಬಗ್ಗೆ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

ಆಹಾರ ಉತ್ಪಾದನಾ ಕ್ಷೇತ್ರದತ್ತ ಗಮನಹರಿಸಿ: ಆಹಾರದ ವಿಚಾರದಲ್ಲಿ ದೇಶ ಸ್ವಾವಲಂಬನೆಯನ್ನು ಕಳೆದುಕೊಳ್ಳಬಾರದು. ಒಂದೆಡೆ ನಿರಂತರ ಬರ ಕಾಡುತ್ತಿದೆ. ರೈತರು ಕೃಷಿಯೇತರ ಚಟುವಟಿಕೆಗಳಿಗೆ ಮುಖ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಗಮನಹರಿಸುವಂತೆ ಕೋರಿದ್ದಾರೆ.

ಸ್ವಾಮಿನಾಥನ್‌ ವರದಿ ಜಾರಿ ಮಾಡಿ: ಸ್ವಾಮಿನಾಥನ್‌ ವರದಿಯನ್ನು ಈ ಬಾರಿಯಾದರೂ ಜಾರಿ ಮಾಡುವಂತೆ ರೈತಾಪಿ ವರ್ಗ ಮನವಿ ಮಾಡಿದೆ. 2019ರ ಫೆಬ್ರವರಿಯಲ್ಲಿ ಮಂಡನೆಯಾದ ಲೇಖಾನುದಾನದಲ್ಲಿ 22 ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿತ್ತು. ಆದರೆ, ರಾಜ್ಯ ಮತ್ತು ಜಿಲ್ಲೆಯ ಬೆಳೆಗಳಿಗೆ ಹೆಚ್ಚೇನು ಉಪಯೋಗವಾಗಿರಲಿಲ್ಲ. ಹೀಗಾಗಿ ಸ್ಥಳೀಯ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್‌.ಪಿ) ವಿಸ್ತರಿಸುವಂತೆ ರೈತರು ಆಗ್ರಹಿಸಿದ್ದಾರೆ.

ಕೃಷಿ, ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಯಾವ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಪಡುತ್ತಿಲ್ಲ ಎಂಬ ನೋವನ್ನು ರೈತರು ವ್ಯಕ್ತಪಡಿಸಿದ್ದಾರೆ. ಕೃಷಿ ಸಮ್ಮಾನ್‌ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಿರುವುದನ್ನು ರೈತರು ಸ್ವಾಗತಿಸಿದ್ದಾರೆ.

ಸಿಲ್ಕ್, ಮಿಲ್ಕ್ಗೆ ಪ್ರೋತ್ಸಾಹ ದೊರೆಯಲಿ: ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯ ರೈತರನ್ನು ಸಿಲ್ಕ್ ಮತ್ತು ಮಿಲ್ಕ್ (ರೇಷ್ಮೆ ಮತ್ತು ಹೈನೋದ್ಯಮ) ಕೈ ಹಿಡಿದಿದೆ. ದೇಶಿ ರೇಷ್ಮೆಯ ಬೆಲೆಯಲ್ಲಿ ಹಲವಾರು ವರ್ಷಗಳಿಂದ ಹೆಚ್ಚಳ ಕಾಣುತ್ತಲೇ ಇಲ್ಲ. ಈ ವಿಚಾರದಲ್ಲಿ ಲೇಖಾನುದಾನದ ವೇಳೆಯೂ ಯಾವ ವಿಶೇಷತೆಯನ್ನು ಘೋಷಿಸಿಲ್ಲ. ಆಮದು ರೇಷ್ಮೆಯ ದರಗಳನ್ನು ಹೆಚ್ಚಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಗೆ ಸರಳ ತಂತ್ರಜ್ಞಾನ ರೂಪಿಸಲು ರೀಲರ್‌ಗಳು ಒತ್ತಾಯಿಸಿದ್ದಾರೆ.

ರೈಲು ಯೋಜನೆ ಶೀಘ್ರ ಅನುಷ್ಠಾನವಾಗಲಿ: ರಾಮನಗರ ಜಿಲ್ಲೆಯಲ್ಲಿ ಮುಖ್ಯವಾಗಿ ರೈಲ್ವೆ ಸೌಲಭ್ಯದ ವಿಚಾರದಲ್ಲಿ ಕೊರತೆಯೇ ಹೆಚ್ಚಾಗಿದೆ. ಕಳೆದ ಬಜೆಟ್ನಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಯಾವುದೇ ಹೊಸ ಘೋಷಣೆಗಳು ಆಗಿರಲಿಲ್ಲ. ಬೆಂಗಳೂರಿನಿಂದ ರಾಮನಗರ ತಾಲೂಕಿನ ಹೆಚ್ಚಾಲ, ಕನಕಪುರ ತಾಲೂಕಿನ ಮೂಲಕ ಚಾಮರಾಜನಗರಕ್ಕೆ ಹೊಸ ರೈಲು ಮಾರ್ಗಕ್ಕೆ ಹಲವಾರು ವರ್ಷಗಳ ಹಿಂದೆಯೇ ಸರ್ವೆ ನಡೆಸಲು ಅನುಮತಿ ಸಿಕ್ಕಿದೆ. ಸರ್ವೆ ಕಾರ್ಯವೂ ಮುಗಿದಿದೆ. ಈ ಯೋಜನೆಗೆ ಹಣ ಬಿಡುಗಡೆಯಾಗುವ ನಿರೀಕ್ಷೆಯನ್ನು ಈ ಭಾಗದ ಜನತೆ ಹೊಂದಿದ್ದಾರೆ. ಬೆಂಗಳೂರು – ರಾಮನಗರ-ಚನ್ನಪಟ್ಟಣ- ಮೈಸೂರು ಮಾರ್ಗದಲ್ಲಿ ಇನ್ನೊಂದಿಷ್ಟು ಹೊಸ ರೈಲುಗಳ ಓಡಾಟಕ್ಕೆ ಮನವಿ ಮಾಡಿದ್ದಾರೆ. ಸಬ್‌ ಅರ್ಬನ್‌ ರೈಲು ಯೋಜನೆ ಶೀಘ್ರ ಅನುಷ್ಠಾನವಾಗಲಿ ಎಂದು ಜನತೆ ಒತ್ತಾಯಿಸಿದ್ದಾರೆ.

ಜಿಎಸ್‌ಟಿ ಬೆಲೆ ಇಳಿಸಲು ಒತ್ತಾಯ: ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಯಗಿ ವರ್ಷ ಕಳೆದಿದೆ. ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳು ವ್ಯಕ್ತವಾಗಿದೆ. ಆದರೂ ಜಿಎಸ್‌ಟಿ ತೆರಿಗೆ ದರದ ಹಂತಗಳನ್ನು (ಸ್ಲಾಬ್‌) ಕೇವಲ ಒಂದಕ್ಕೆ ಅಥವಾ ಗರಿಷ್ಟ ಮೂರಕ್ಕೆ ಇಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಪದಾರ್ಥಗಳು ಮತ್ತು ಸೇವೆಗಳು ಶೂನ್ಯ ಅಥವಾ ಶೇ.5 ತೆರಿಗೆ ವಿಧಿಸುವ ಎರಡು ಹಂತಗಳು ಇರಲಿ ಎಂಬುದು ಬಹು ಜನರ ಅಪೇಕ್ಷೆ.

ಡಿಜಿಟಲ್ ಪೇಮೆಂಟ್ ಇನ್ನಷ್ಟು ಸುರಕ್ಷತೆ ಅಗತ್ಯ: ಡಿಜಿಟಲ್ ಪೇಮೆಂಟ್ಸ್‌ ಮತ್ತು ಬ್ಯಾಂಕಿಂಗ್‌ ಪದ್ಧತಿಗೂ ಜನ ಒಗ್ಗಿಕೊಳ್ಳಲಾರಂಭಿಸಿದ್ದಾರೆ. ಆದರೆ, ಎಟಿಎಂಗಳನ್ನು ಹಂತ, ಹಂತವಾಗಿ ತೆಗೆದುಹಾಕುವ ಉದ್ದೇಶವನ್ನು ನಾಗರಿಕರು ವಿರೋಧಿಸಿದ್ದಾರೆ. ಮೊಬೈಲ್ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಕೆಲವರು ಹಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಜಾರಿಯಾಗಬೇಕು. ಆದರೆ, ಈ ಕ್ರಮಗಳು ಜನಸ್ನೇಹಿಯಾಗಿರಬೇಕು ಎಂದು ಸಾಮಾನ್ಯ ಜನತೆ ಒತ್ತಾಯಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ