ಶೆಟ್ಟಿಹಳ್ಳಿ ಕೆರೆ ವಿನಾಶಕ್ಕೆ ಕಾರಣ ನಗರಸಭೆ

ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ | ನಾಗರಿಕರ ಆಕ್ರೋಶ | ಕೆರೆಗೆ ಒತ್ತುವರಿ ಭೂತ | ಅಭಿವೃದ್ಧಿಗೆ ಒತ್ತಾಯ

Team Udayavani, May 26, 2019, 3:06 PM IST

ಚನ್ನಪಟ್ಟಣದ ಹೃದಯಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆ ಸುತ್ತ ಕಟ್ಟಡಗಳ ತ್ಯಾಜ್ಯ ಸುರಿದಿರುವುದು.

ಚನ್ನಪಟ್ಟಣ: ನಗರದ ಪ್ರಸಿದ್ಧ ಶೆಟ್ಟಿ ಹಳ್ಳಿ ಕೆರೆಗೆ ಕಂಟಕ ಶುರುವಾಗಿದ್ದು, ಅವಸಾನದತ್ತ ಹೆಜ್ಜೆ ಇಟ್ಟಿದೆ. ಕೆರೆಯಲ್ಲಿ ಬೆಳೆದಿರುವ ಜೊಂಡು, ಭೂಮಿ ಅಕ್ರಮ ಒತ್ತುವರಿ, ನಗರದ ಚರಂಡಿ ನೀರು, ಕಸ ಮತ್ತು ಕಟ್ಟಡ ತ್ಯಾಜ್ಯಗಳು ಶೆಟ್ಟಿಹಳ್ಳಿ ಕೆರೆಯ ಒಡಲನ್ನು ಸೇರುತ್ತಿದ್ದು, ಒಂದು ಕಾಲದಲ್ಲಿ ಪಟ್ಟಣದ ನೀರಿನ ದಾಹ ತಣಿಸಿದ್ದ ಕೆರೆ ಈಗ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದಾಗಿ ವಿನಾಶದತ್ತ ಸಾಗಿದೆ.

ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಕೆರೆ ಅಕ್ರಮ ಒತ್ತುವರಿಯಿಂದಾಗಿ ಕೆಲವೇ ಎಕರೆ ಪ್ರದೇಶ ಉಳಿದುಕೊಂಡಿದೆ. ಪಟ್ಟಣದಲ್ಲಿ ನಿತ್ಯವೂ ನೂತನ ಕಟ್ಟಡಗಳ ನಿರ್ಮಾಣದಿಂದಾಗಿ ಉತ್ಪಾದನೆಯಾಗುವ ಕಟ್ಟಡ ತ್ಯಾಜ್ಯವನ್ನು ವ್ಯವಸ್ಥಿತವಾಗಿ ಕೆರೆ ಅಂಚಿನಲ್ಲಿ ಸುರಿಯಲಾಗುತ್ತಿದೆ. ಇದರಿಂದ ನಿತ್ಯವೂ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಲೇ ಇದೆ. ಆದರೆ ಕೆರೆ ಯನ್ನು ರಕ್ಷಿಸಿ, ಅಭಿವೃದ್ಧಿಗೊಳಿಸಿ ನಿರ್ವಹಿಸಬೇಕಾದ ಅಧಿಕಾರಿಗಳು ಸಂಪೂರ್ಣ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

ನೀರಿನ ನೆಲೆಯೇ ಕಾಣದಂತೆ ಬೆಳೆದಿರುವ ಜೊಂಡು, ನಗರದ ಕೊಳಚೆ ನೀರನ್ನೆಲ್ಲಾ ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತ ನಲುಗುತ್ತಿರುವ ಶೆಟ್ಟಿಹಳ್ಳಿ ಕೆರೆ ನಾಶಕ್ಕೆ ನಗರಸಭೆಯೇ ಪರೋಕ್ಷವಾಗಿ ಕಾರಣವಾಗಿದೆ. ನಗರದ ಕೊಳಕು ನೀರು ಕೆರೆಯನ್ನು ಸೇರುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಅಲ್ಲದೆ ತ್ಯಾಜ್ಯ ಹಾಗೂ ಕಸವನ್ನು ಕರೆಯ ಅಂಚಿನಲ್ಲಿ ಸುರಿಯಲಾ ಗುತ್ತಿದೆ. ಆದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಭೂ ಒತ್ತುವರಿಯ ಭೂತ: ಸರ್ಕಾರಿ ಭೂಮಿಯನ್ನು ಕಾಡುವ ಅಕ್ರಮ ಒತ್ತುವರಿ ಭೂತ ಕೆರೆಯನ್ನು ಸಹ ಬಿಟ್ಟಿಲ್ಲ. ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿತ್ತು. ಆದರೆ ಕೆರೆಯ ಅಕ್ಕಪಕ್ಕದಲ್ಲಿ ರುವವರು ಬರೋಬ್ಬರಿ 25 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ. ಸರ್ಕಾರಿ ಇಲಾಖೆಗಳೂ ಸೇರಿದಂತೆ ಇಂದಿರಾ ಕಾಟೇಜ್‌ನ ಕೆಲ ವರು ಕೆರೆಯನ್ನು ಮುಚ್ಚುವ ಮೂಲಕ ಮನಸೋಇಚ್ಛೆ ಒತ್ತುವರಿ ಮಾಡಿಕೊಂಡಿದ್ದಾರೆ. ಈಗಲೂ ಒತ್ತುವರಿ ನಿರಂತರವಾಗಿ ಒತ್ತುವರಿ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರದ್ದೇ ಹೆಚ್ಚಿನ ಪಾಲು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಮೊದಲು ಸರ್ಕಾರವೇ ಕೆರೆ ಒತ್ತುವರಿ ಯಲ್ಲಿ ಹೆಚ್ಚಿನ ಪಾಲು ಹೊಂದಿದೆ. ಕೆರೆಯ ಮುಂಭಾಗದಲ್ಲಿರುವ ಕೆಇಬಿ, ತಾಲೂಕು ಕಚೇರಿ, ತಾಪಂ, ರೇಷ್ಮೆ ಮಾರುಕಟ್ಟೆಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿ ದ್ದಾರೆ. ಇತ್ತ ಇಂದಿರಾ ಕಾಟೇಜ್‌ ಬಳಿ ಕೆರೆ ಸಮೀಪದ ಲ್ಲಿರುವ ಕೆಲವರು ಕೆರೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಇಂದಿರಾ ಕಾಟೇಜ್‌ ಹಾಗೂ ಕೆರೆ ಕೋಡಿ ಬೀಳುವ ಅಂಬೇಡ್ಕರ್‌ ನಗರದ ಬಳಿ ಹೆಚ್ಚಿನ ಒತ್ತುವರಿಯಾಗಿರುವುದು ಕಂಡು ಬರುತ್ತದೆ.

ನಗರಸಭೆಯೇ ಕಾರಣ: ಎಲ್ಲಾ ಕೆರೆಗಳಂತೆಯೇ ಮಳೆಗಾಲದಲ್ಲಿ ನೀರು ತುಂಬಿಸಿಕೊಂಡು ಬೇಸಿಗೆ ಯಲ್ಲಿ ಜನಜಾನುವಾರುಗಳಿಗೆ ನೀರುಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆಗೆ ಈ ದುಸ್ಥಿತಿ ಬಂದಿದೆ. ಕೆರೆಯ ಈ ದುಸ್ಥಿತಿಗೆ ಮುಖ್ಯ ಕಾರಣ ನಮ್ಮ ನಗರಸಭೆಯಾಗಿದೆ. ನಗರದ ಕೊಳಚೆ ನೀರನ್ನು ಶೆಟ್ಟಿಹಳ್ಳಿ ಕೆರೆಗೆ ಹರಿಸಿದ ಪರಿಣಾಮ ಕೆರೆ ಗಬ್ಬೆದ್ದು ನಾರುತ್ತಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ ಎಂದು ಸಮೀಪದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಳಚರಂಡಿ ನೀರು ಶುದ್ಧೀಕರಿಸಿ: ಅಥವಾ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ನಂತರ ಆ ನೀರನ್ನು ಕೆರೆಗೆ ಹರಿಸಬೇಕೆಂಬ ಪರಿಸರ ಇಲಾಖೆಯ ನಿಯಮಕ್ಕೆ ಇಲ್ಲಿ ಕಿಂಚಿತ್ತೂ ಬೆಲೆ ಸಿಕ್ಕಿಲ್ಲ. ಚರಂಡಿಯಲ್ಲಿ ಸಾಗಿ ಬಂದ ನೀರು ನೇರವಾಗಿ ಶೆಟ್ಟಿಹಳ್ಳಿ ಕೆರೆ ಸೇರುವಂತೆ ಮಾಡಿ ತನ್ನ ಕೆಲಸ ಮುಗಿಯಿತೆಂದು ನಗರಸಭೆ ಕೈ ತೊಳೆದುಕೊಂಡಿದೆ. ನಗರ ಬೆಳೆದಂತೆಲ್ಲ ಈ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿ ಈಗ ಕೆರೆ ತುಂಬ ಕೊಳಕು ನೀರು ತುಂಬಿ, ಯಾರೊಬ್ಬರೂ ಹತ್ತಿರಕ್ಕೆ ಸುಳಿಯದಂತಾಗಿದೆ.

ಸಾರ್ವಜಕರಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಶೆಟ್ಟಿಹಳ್ಳಿ ಕೆರೆಯನ್ನು ಮುಚ್ಚಿ ಕ್ರೀಡಾಂಗಣ ನಿರ್ಮಾಣ ಮಾಡುವ ಕನಸು ನ್ಯಾಯಾಲಯ ವ್ಯತಿರಿಕ್ತ ಆದೇಶದಿಂದ ಆರಂಭದಲ್ಲೇ ಮುಗ್ಗರಿಸಿತು. ಇದರಿಂದಾಗಿ ಕ್ರೀಡಾಸಕ್ತರೂ ಸೇರಿದಂತೆ ಶೆಟ್ಟಿಹಳ್ಳಿ ಕೆರೆ ವ್ಯಾಪ್ತಿಯ ನಾಗರಿಕರಿಗೆ ನಿರಾಸೆಯಾಗಿತ್ತು. ನಿವಾಸಿಗಳು ಮುಚ್ಚದಿದ್ದರೂ ಕೆರೆಯನ್ನು ಪುನಶ್ಚೇತನಗೊಳಿಸಲು ಸಂಬಂಧಿಸಿದ ನಗರಸಭೆ ಮುಂದಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುಬ್ಬುನಾತ ಬೀರುತ್ತ ಜನರ ನೆಮ್ಮದಿಗೆ ಸಂಚಕಾರ ತಂದಿರುವ ಶೆಟ್ಟಿಹಳ್ಳಿ ಕೆರೆಯನ್ನು ನಗರಸಭೆ ಅಥವಾ ಯೋಜನೆ ಪ್ರಾಧಿಕಾರ ಪುನಶ್ಚೇತನಗೊಳಿಸಲು ಮುಂದಾದರೆ, ಕೆರೆ ವೈಭವ ಮರುಕಳಿಸುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಒತ್ತುವರಿಯಾಗಿರುವ ಜಾಗವನ್ನು ವಶಕ್ಕೆ ತೆಗೆದುಕೊಂಡು ಕೆರೆಯ ಸುತ್ತಲೂ ಉದ್ಯಾನ ನಿರ್ಮಿಸಿದರೆ ನಗರದ ಜನತೆಗೂ ಅನುಕೂಲವಾಗಲಿದೆ. ನಗರಸಭೆ ಅಥವಾ ಪ್ರಾಧಿಕಾರ ಈ ಕಾರ್ಯಕ್ಕೆ ಆದಷ್ಟು ಬೇಗ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

● ಎಂ.ಶಿವಮಾದು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾಗಡಿ: ಬೃಹತ್‌ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ ಜಯಂತಿ ಕೇವಲ ರಾಜಕಾರಣಿಗಳ ಭಾಷಣಕ್ಕೆ ಸಿಮೀತವಾಗಿದೆ. ಅವರು ಕಟ್ಟಿದ ಗುಡಿ, ಗೋಪುರಗಳು, ಕೋಟೆ ಕೊತ್ತಲುಗಳು,...

  • ರಾಮನಗರ: ಜೀತ ಪದ್ಧತಿ ಜೀವಂತ ಇರುವುದಕ್ಕೆ ಕುಟುಂಬಗಳ ಆರ್ಥಿಕ ದುಃಸ್ಥಿತಿ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮುಲ್ಲೈ ಮುಹಿಲನ್‌ ಅಭಿಪ್ರಾಯಪಟ್ಟರು. ಇಲ್ಲಿನ...

  • ಬೆಂಗಳೂರು/ರಾಮನಗರ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಂದ ಬಂಧಿತನಾಗಿರುವ ಜಮಾತ್‌ ಉಲ್ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಹಬೀಬುರ್‌...

  • ರಾಮನಗರ: ಸ್ವತಃ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿನಿಧಿಸುವ ರಾಮನಗರ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸಾಕಷ್ಟು...

  • ಮಾಗಡಿ: ಕುಣಿಗಲ್ನಿಂದ ಮಾಗಡಿಗೆ ರಾತ್ರಿ ವೇಳೆ ಸರ್ಕಾರಿ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ...

ಹೊಸ ಸೇರ್ಪಡೆ