ಒಡವೆ ಅಡವಿಟ್ಟು ತಂದ ಹಣ ಸಿನಿಮೀಯ ರೀತಿಯಲ್ಲಿ ದರೋಡೆ
Team Udayavani, Mar 5, 2021, 5:53 PM IST
ಕನಕಪುರ: ವಿಳಾಸ ಕೇಳುವ ನೆಪದಲ್ಲಿ 1.10ಲಕ್ಷ ರೂ. ಹಣವನ್ನು ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿರುವ ಘಟನೆ ಸಾತನೂರು ಠಾಣೆ ವ್ಯಾಪ್ತಿಯ ಕಾಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಾತನೂರು ಹೋಬಳಿಯ ಕಾಡಹಳ್ಳಿ ಗ್ರಾಮದ ಶಿವಮಾದೇಗೌಡ ಹಣ ಕಳೆದುಕೊಂಡರು. ಇವರು, ಗುರುವಾರ ಹೊನ್ನಿಗನಹಳ್ಳಿ ಗ್ರಾಮದಲ್ಲಿನ ಕೆನರಾ ಬ್ಯಾಂಕಿನಲ್ಲಿ 49 ಗ್ರಾಂ ಚಿನ್ನದ ಒಡೆವೆಯನ್ನು 1.11ಲಕ್ಷ ರೂ.ಗೆ ಅಡವಿಟ್ಟು ಹಣ ಡ್ರಾ ಮಾಡಿಕೊಂಡು ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದರು. ಶಿವಮಾದು ಅವರ ಬಳಿ ಇದ್ದ ಹಣವನ್ನು ದರೋಡೆ ಮಾಡಲು ಸಂಚು ಮಾಡಿದ್ದ ಮುಸುಕು ವೇಷಧಾರಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಕೊಂಡು ಬಂದಿದ್ದಾರೆ. ಶಿವಮಾದು ಅವರು ಬ್ಯಾಂಕ್‌ನಿಂದ ಡ್ರಾ ಮಾಡಿದ್ದ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಕಾಡಹಳ್ಳಿ ಗ್ರಾಮದಲ್ಲಿರುವ ತಮ್ಮ ಮನೆಗೆ ಹೊಗ ಬೇಕು ಎನ್ನುವಷ್ಟರಲ್ಲಿ ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ವಿಳಾಸ ಕೇಳುವ ನೆಪದಲ್ಲಿ ಶಿವಮಾದು ಅವರನ್ನು ಕರೆದಿದ್ದಾರೆ. ಖದೀಮರ ಸಂಚನ್ನು ಅರಿಯದೆ ಶಿವಮಾದು ಸಹಾಯ ಮಾಡಲು ವಾಪಸ್ಸು ಬಂದಿದ್ದಾರೆ.
ಯಾವುದೋ ವಿಳಾಸ ಕೇಳುವಂತೆ ನಾಟಕವಾಡಿದ ದರೋಡೆಕೋರರು ಶಿವಮಾದು ಕೈಯ ಲ್ಲಿದ್ದ1.11ಲಕ್ಷ ರೂ.ಗಳನ್ನು ಕಿತ್ತು ಪರಾರಿಯಾಗಿದ್ದಾರೆ. ಸಹಾಯಕ್ಕಾಗಿ ಕೂಗಿದರಾದರೂ ಖದೀಮರು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಡ್ಡಿ ಕಟ್ಟಲಾಗದೆ ಮಾಡಿದ ಸಾಲ ತೀರಿಸಲು ಮನೆಯಲ್ಲಿದ್ದ49 ಗ್ರಾಂ ಚಿನ್ನದ ಒಡೆವೆ ಅಡಮಾನವಿಟ್ಟು ತಂದಿದ್ದ ಹಣ ಕಳ್ಳರಪಾಲಾಗಿದೆ. ಇತ್ತ ಸಾಲವೂ ತೀರಲಿಲ್ಲ. ಅತ್ತ ಒಡವೆಯೂ ಇಲ್ಲಎಂದು ಕಂಗಾಲಾಗಿರುವ ಶಿವಮಾದು ಚಿಂತಾಕ್ರಾಂತರಾಗಿದ್ದಾರೆ.