ಔರಾದ್ಕರ್‌ ವರದಿ ಜಾರಿಗಾಗಿ ಪ್ರತಿಭಟನೆ

ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪೊಲೀಸರ ಬೇಡಿಕೆ ಈಡೇರಿಸುವಂತೆ ಒತ್ತಾಯ

Team Udayavani, Jul 9, 2019, 1:22 PM IST

ರಾಮನಗರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಔರಾದ್ಕರ್‌ ವರದಿಯನ್ನು ಜಾರಿ ಮಾಡುವಂತೆ ಪ್ರತಿಭಟನೆ ನಡೆಸಿದರು.

ರಾಮನಗರ: ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಸರ್ಕಾರ ರಚಿಸಿದ್ದ ಎಡಿಜಿಪಿ ಔರಾದ್ಕರ್‌ ನೇತೃತ್ವದ ಸಮಿತಿಯ ವರದಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ನಗರದ ಐಜೂರು ವೃತ್ತದಲ್ಲಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ, ಹ್ಯೂಮನ್‌ ರೈಟ್ಸ್‌ ಪ್ರೊಟೆಕ್ಷನ್‌ ಕಮಿಟಿ, ಕರುನಾಡು ಕನ್ನಡಡಿಗರ ವೇದಿಕೆ, ಸಿಟಿಜನ್‌ ಲೇಬರ್‌ ವೆಲ್ಪೇರ್‌ ಮತ್ತು ಆಂಟಿ ಕರಪ್ಷನ್‌ ಕಮಿಟಿಯ ಪದಾಧಿಕಾರಿಗಳ ಜಮಾಯಿಸಿ, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ, ಪೊಲೀಸರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

1 ಲಕ್ಷ ಕೋಟಿ ಮೊತ್ತ ದೊಡ್ಡದೇನಲ್ಲ: ರಾಜ್ಯದಲ್ಲಿ ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಔರಾದಕ್ಕರ್‌ ವರದಿ ಶೇ.30ರಿಂದ 35ರಷ್ಟು ವೇತನ ಹೆಚ್ಚಿಸುವಂತೆ ವರದಿ ಮಾಡಿದೆ. ಕೆಲ ತಿಂಗಳುಗಳ ಹಿಂದೆ ರಾಜ್ಯದ ಗೃಹ ಸಚಿವರು ವರದಿ ಜಾರಿ ಮಾಡಿದರೆ, ರಾಜ್ಯ ಬೊಕ್ಕಸದ ಮೇಲೆ ಸುಮಾರು 600 ಕೋಟಿ ರೂ. ಹೆಚ್ವುವರಿ ಹೊರೆ ಬಳುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ವಾರ್ಷಿಕ 1 ಲಕ್ಷ ಕೋಟಿಗಿಂತ ಹೆಚ್ಚಿನ ಆಯವ್ಯಯ ಇರುವ ರಾಜ್ಯ ಸರ್ಕಾರಕ್ಕೆ ಈ ಮೊತ್ತ ದೊಡ್ಡದೇನಲ್ಲ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ವರದಿ ಜಾರಿ ಮಾಡುವಂತೆ ಸೂಚ್ಯಕವಾಗಿ ಆಗ್ರಹಿಸಿದರು.

ಹಿರಿಯ ಅಧಿಕಾರಿ ಔರಾದ್ಕರ್‌ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿತ್ತು. ಪೇದೆಯಿಂದ, ಐಪಿಎಸ್‌ಯೇತರ ಅಧಿಕಾರಿಯವರೆಗೆ ಅನ್ವಯಿಸುವಂತೆ ಅನೇಕ ಶಿಪಾರಸುಗಳನ್ನು ಮಾಡಿದ್ದಾರೆ. ವೇತನ ಹೆಚ್ಚಳದ ಜೊತೆಗೆ ದೈಹಿಕ ಕ್ಷಮತೆ ವೃದ್ಧಿ, ವಿಶ್ರಾಂತಿ, ವಿಶ್ರಾಂತಿ ಇಲ್ಲದೇ ದುಡಿಯುವವರಿಗೆ ವಿಶೇಷ ಭತ್ಯೆ ಹೀಗೆ ಅನೇಕ ವಿಚಾರಗಳಲ್ಲಿ ಶಿಪಾರಸು ಮಾಡಿದೆ. ಪೊಲೀಸ್‌ ಕೆಲಸಕ್ಕೆ ಸೇರಿದ ನಂತರ ಶೇ.39 ಮಂದಿ ಬೇರೆ ಉದ್ಯೋಗ ಬಯಸಿ ರಾಜೀನಾಮೆ ನೀಡಿ, ಹೊರಹೋಗಿರುವ ಬಗ್ಗೆಯೂ ಅಂಕಿ – ಅಂಶಗಳನ್ನು ಸಮಿತಿ ಉಲ್ಲೇಖೀಸಿದೆ ಎಂದರು.

ಪೊಲೀಸರದ್ದು ಹಗ್ಗದ ಮೇಲಿನ ನಡಿಗೆ: ಯುವ ಸಮುದಾಯಕ್ಕೆ ಪೊಲೀಸ್‌ ಕೆಲಸ ಕೊನೆಯ ಆಯ್ಕೆ. ಕಾರಣ ವೇತನ ಮಾತ್ರವಲ್ಲ. ವೃತ್ತಿ ಘನತೆವೃದ್ಧಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರ ಸೋತಿರುವುದು, ಸಮಾಜದಲ್ಲಿ ನಡೆಯುವ ಬಹುತೇಕ ಕೃತ್ಯಗಳಿಗೆ ಪೊಲೀಸರನ್ನೇ ಹೊಣೆ ಮಾಡುವುದು ವಾಡಿಕೆಯಾಗಿ ಬಿಟ್ಟಿದೆ. ಪೊಲೀಸರದ್ದು ಹಗ್ಗದ ಮೇಲಿನ ನಡಿಗೆಯಾಗಿದೆ. ತರ್ತು ಸಂದರ್ಭಗಳಲ್ಲಿ ಲಾಟಿ ಬೀಸಿದರೆ ಮನುಷ್ಯತ್ವ ಇಲ್ಲದವರು ಎಂದು ಜರಿಸಿಕೊಳ್ಳಬೇಕಾಗಿದೆ. ಮೇಲಾಗಿ ಪೊಲೀಸರು ಎಂದರೆ ಭ್ರಷ್ಟರು ಎಂಬುದು ಎಲ್ಲರ ಸಮಾನ್ಯ ಗ್ರಹಿಕೆಯಾಗಿ ಬಿಟ್ಟಿದೆ. ಔರದ್ಕರ್‌ ಸಮಿತಿ ವರದಿ ಜಾರಿಯನ್ನು ಕೇವಲ ಭರವಸೆಗೆ ಸೀಮಿತಗೊಳಿಸದೆ ತಕ್ಷಣ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಘಟನೆ ಹೆಚ್ಚಿಸಲು ಕ್ರಮ ಕೈಗೊಳ್ಳಿ: ಈ ವೇಳೆ ಸಾಮಾಜಿಕ ಕಾರ್ಯಕರ್ತ ಎಸ್‌.ಶಿವಕುಮಾರ್‌ ಮಾತನಾಡಿ, ವೇತನ ಸವಲತ್ತು ಹೆಚ್ಚಳದ ಜೊತೆಗೆ ಪೊಲೀಸ್‌ ವೃತ್ತಿ ಮತ್ತು ಬದುಕಿನ ಘಟನೆಯನ್ನು ಹೆಚ್ಚಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹ್ಯೂಮನ್‌ ರೈಟ್ಸ್‌ ಪ್ರೊಟೆಕ್ಷನ್‌ ಕಮಿಟಿ ರಾಜ್ಯಾಧ್ಯಕ್ಷ ಚಿಕ್ಕಣ್ಣ, ಕರುನಾಡು ಕನ್ನಡಿಗರ ವೇದಿಕೆ ರಾಜ್ಯಾಧ್ಯಕ್ಷ ನವೀನಾ ನವಿ, ಸಿಟಿಜನ್‌ ಲೇಬರ್‌ ವೆಲ್ಪೇರ್‌ ಮತ್ತು ಆಂಟಿ ಕರಪ್ಷನ್‌ ಕಮಿಟಿಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್‌, ತಾಲೂಕು ಅಧ್ಯಕ್ಷ ಎಂ.ಆರ್‌.ಶಿವಕುಮಾರ್‌ ಮುಂತಾದವರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ