ತಿಮ್ಮಕ್ಕ ನೆಟ್ಟು ಬೆಳೆಸಿದ್ದ ಮರಗಳಿಗೆ ಕೊಡಲಿ?

ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ನೆಪ | 287 ಆಲದ ಮರಗಳ ಮಾರಣ ಹೋಮಕ್ಕೆ ರಾಜ್ಯ ಸರ್ಕಾರ ಸಜ್ಜು

Team Udayavani, Jun 4, 2019, 10:15 AM IST

ಕುದೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲು ಮರದ ತಿಮ್ಮಕ್ಕ ನೆಟ್ಟು, ತನ್ನ ಮಕ್ಕಳಂತೆ ಬೆಳೆಸಿದ್ದ ಆಲದ ಮರಗಳಿಗೆ ಕುತ್ತು ಬಂದೊದಗಿದೆ. ರಾಜ್ಯ ಹೆದ್ದಾರಿ 94ರ ಅಭಿವೃದ್ಧಿ ಮತ್ತು ಅಗಲೀಕರಣದ ನೆಪದಲ್ಲಿ ಸರ್ಕಾರ, ಕುದೂರಿನಿಂದ-ಹುಲಿಕಲ್‌ ಗ್ರಾಮದ ಮಾಗದಲ್ಲಿರುವ ಸುಮಾರು 287 ಆಲದ ಮರಗಳಿಗೆ ಕೊಡಲಿಪೆಟ್ಟು ನೀಡುವ ಮೂಲಕ ಮರಗಳ ಮಾರಣ ಹೋಮಕ್ಕೆ ಸಜ್ಜಾಗಿದೆ. ಆದರೆ ಸರ್ಕಾರದ ಈ ನಡೆಗೆ ಸಾರ್ವಜನಿಕರಿಮದ ಭಾರೀ ವಿರೋಧ ವ್ಯಕ್ತವಾಗಿದೆ.

ರಸ್ತೆ ಇಕ್ಕೆಲಗಳಲ್ಲಿರವ ಮರಗಳನ್ನು ಉರುಳಿಸಲಿರುವ ಸರ್ಕಾರ: ಸರ್ಕಾರ, ಹಲಗೂರು-ಬಾಗೇಪಲ್ಲಿ ಸಂಪರ್ಕದ ರಾಜ್ಯ ಹೆದ್ದಾರಿ ರಸ್ತೆಅಗಲೀಕರಣ ಕಾರ್ಯಕ್ಕೆ ಮುಂದಾಗಿದೆ. ಇದರಿಂದ ರಾಮನಗರ ಜಿಲ್ಲೆಯ ಹುಲಿಕಲ್‌ ಗ್ರಾಮದಲ್ಲಿರುವ ಸಾಲು ಮರದ ತಿಮ್ಮಕ್ಕನವರು ಬೆಳೆಸಿದ ಬೃಹತ್‌ ಗಾತ್ರದ ಮರಗಳು ಧರೆಗುರುಳಲಿವೆ. ಕುದೂರಿ ನಿಂದ ಹುಲಿಕಲ್‌ ಗ್ರಾಮದವರೆಗೆ 4 ಕಿಮೀ. ರಸ್ತೆಯ ಎರಡು ಬದಿಗಳಲ್ಲಿ ಸಾಲು ಮರದ ತಿಮ್ಮಕ್ಕನವರು ಬೆಳೆಸಿರುವ ಬೃಹತ್‌ ಆಲದ ಮರಗಳು ಇವೆ. ರಸ್ತೆಯ ಇಕ್ಕೆಲಗಳಲ್ಲಿ ಕಷ್ಟ ಪಟ್ಟು ಬೆಳೆಸಿರುವ ಮರಗಳೇ ತಿಮ್ಮಕ್ಕನ ಜೀವಾಳ. ಅವರ ಈ ಅದ್ಭುತ ಕಾರ್ಯವನ್ನು ರಾಜ್ಯ,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ.ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮರಗಳನ್ನು ಕಡಿಯಲು ಬಿಡುವುದಿಲ್ಲ: ರಸ್ತೆ ಅಗಲೀಕರಣ ಕಾರ್ಯ ಆರಂಭವಾದರೆ, ಈಗಿರುವ 287 ಮರಗಳ ಕುರುಹು ಇಲ್ಲದಂತೆ ಆಗುತ್ತದೆ. ಇದರೊಂದಿಗೆ ಹುಲಿಕಲ್‌ ಗ್ರಾಮದಲ್ಲಿರುವ ಸಾಲು ಮರದ ತಿಮ್ಮಕ್ಕನವರ ಮನೆಯೂ ಸಹ ನೆಲಸಮವಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಲು ಮರದ ತಿಮ್ಮಕ್ಕ, ಮರಗಳು ನನ್ನ ಮಕ್ಕಳಿದ್ದಂತೆ. ನಾನು ಯಾವುದೇ ಕಾರಣಕ್ಕೂ ಸಾಲು ಮರಗಳನ್ನು ಕಡಿಯಲು ಬಿಡುವುದಿಲ್ಲ. ನನ್ನ ಮಾತಿಗೆ ಬೆಲೆ ಕೊಡದೆ ಹೋದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕುದೂರಿನ ಹೃದಯ ಭಾಗವೇ ಕಣ್ಮರೆ: ರಾಜ್ಯ ಹೆದ್ದಾರಿ ಕಾಯ್ದೆ 1964 ಅಧ್ಯಾಯ-3 ಕ್ಲಾಸ್‌ 7(1)ರ ಅಡಿಯಲ್ಲಿ ಹೆದ್ದಾರಿ ರಸ್ತೆಗಡಿಗಳನ್ನು ಗುರುತಿಸುವ ಬಗ್ಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ರಾಮನಗರ ವಿಭಾಗದಿಂದಜೂ.1ರಂದು ಹೆದ್ದಾರಿ ವಿಸ್ತರಣೆ ಸಂಬಂಧಿಸಿದಂತೆ, ರಾಮನಗರ ತಾಲ್ಲೂಕು, ಮಾಗಡಿ, ಕಲ್ಯಾ, ಮರೂರು, ಕುದೂರು, ಹುಲಿಕಲ್‌,ಕಣನೂರು, ಸುಗ್ಗನಹಳ್ಳಿ ಗ್ರಾಮಗಳ ಸರ್ವೇ ನಂಬರ್‌ಗಳ ಬಗ್ಗೆ ಜಾಹೀರಾತು ಪ್ರಕಟಿಸಿದ್ದರು.ಇದರ ಅನ್ವಯ ರಸ್ತೆ ಮಧ್ಯ ಭಾಗದಿಂದ40 ಮೀ. ವರೆಗೆ ಇರುವ ಜಮೀನು ರಸ್ತೆ ವಿಸ್ತರಣೆಗಾಗಿ ಬಳಕೆಯಾಗುತ್ತದೆ. ಲೋಕೋಪಯೋಗಿ ಇಲಾಖೆಯವರು ಪ್ರಕಟಿಸಿರುವ ಸರ್ವೇ ನಂಬರುಗಳು ಕುದೂರು ಗ್ರಾಮದ ಮುಖ್ಯ ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಸರ್ವೇ ನಂಬರ್‌ಗಳು ಇದಾಗಿದೆ.

ಗ್ರಾಮದ ಚಿತ್ರಣವೇ ಬದಲು: ರಸ್ತೆ ಅಗಲೀಕರಣ ಯೋಜನೆಯಂತೆ ರಸ್ತೆ ವಿಸ್ತರಣೆಯಾದರೆ ಕುದೂರು ಗ್ರಾಮದ ಚಿತ್ರಣವೇಇಲ್ಲದಂತಾಗುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ವ್ಯಾಪಾರ ಮಳಿಗೆಗೆಳು ಇರುವುದರಿಂದ ವ್ಯಾಪಾರಸ್ತರು ಕಂಗಾಲಾಗಿದ್ದಾರೆ.ಒಂದು ವೇಳೆ ರಸ್ತೆ ಅಗಲೀಕರಣ ಮಾಡುವುದಾದರೆ ಕುದೂರು ಗ್ರಾಮದ ಹೊರವಲಯದಲ್ಲಿರುವ ಬೈಪಾಸ್‌ ಮೂಲಕ ಮಾಡಲಿ ಎಂದು ಗ್ರಾಮಸ್ಥರು ಅಭಿಪ್ರಾಯವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ