ಸಿಎಂ ಕ್ಷೇತ್ರದಲ್ಲಿ ಚರಂಡಿ ಕಾಮಗಾರಿ ಕಳಪೆ

ಎಚ್ಚರ ತಪ್ಪಿದರೆ ಚರಂಡಿಯೊಳಗೆ ಬೀಳುವ ಪರಿಸ್ಥಿತಿ • ಕೊಳಚೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ

Team Udayavani, Jun 16, 2019, 1:39 PM IST

ಚನ್ನಪಟ್ಟಣದಲ್ಲಿ ಮೇಲುಹಾಸು ನಿರ್ಮಾಣದ ವೇಳೆ ಸೆಂಟ್ರಿಂಗ್‌ ಬಿಚ್ಚದೇ ಚರಂಡಿ ಕಟ್ಟಿಕೊಂಡಿದೆ.

ಚನ್ನಪಟ್ಟಣ: ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ಎರಡೂ ಬದಿಯಲ್ಲಿ ನಿರ್ಮಾಣ ಮಾಡಿರುವ ಚರಂಡಿ ಕಾಮಗಾರಿ ಕಳಪೆಯಾಗಿದೆ. ಗುಣಮಟ್ಟಕ್ಕೆ ಆದ್ಯತೆ ನೀಡದೆ ಮನಬಂದಂತೆ ಕಾಮಗಾರಿ ನಡೆಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿದೆ.

ಪಟ್ಟಣದ ಚಿಕ್ಕಮಳೂರು ಬಳಿಯಿಂದ ಷೇರೂ ಹೋಟೆಲ್ ವೃತ್ತದ ವರೆಗೆ ಎರಡೂ ಕಡೆಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ಈ ಕಾಮಗಾರಿಗಳಲ್ಲಿ ಗುಣಮಟ್ಟ ತೀರಾ ಕಳಪೆಯಾಗಿದೆ. ಅಲ್ಲಲ್ಲಿ ಚರಂಡಿಗಳಿಗೆ ಮೇಲುಹಾಸುಗಳು ಈಗಾಗಲೇ ಕಿತ್ತುಹೋಗುತ್ತಿದ್ದು, ಇನ್ನೂ ಕೆಲವೆಡೆ ಚರಂಡಿ ಕಾಮಗಾರಿ ಅರ್ಧ ನಡೆಸಿ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.

ಸಿಮೆಂಟ್ ಕಿತ್ತು ಹೋಗುವ ಸ್ಥಿತಿ: ಚರಂಡಿಗಳ ನಿರ್ಮಾಣ ಸಂದರ್ಭದಲ್ಲಿ ಹಾಕುವ ಕಾಂಕ್ರೀಟ್‌ಗೆ ಸಮರ್ಪಕವಾಗಿ ಕ್ಯೂರಿಂಗ್‌ ಮಾಡದಿರುವುದು ಹಾಗೂ ಕಡಿಮೆ ಪ್ರಮಾಣದ ಸಿಮೆಂಟ್ ಬಳಸಿರುವುದರಿಂದ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎನ್ನಲಾಗಿದ್ದು, ವಾಹನಗಳು ಸ್ವಲ್ಪ ತಗುಲಿದರೂ ಸಿಮೆಂಟ್ ಕಿತ್ತುಬರುತ್ತಿದೆ. ಹಾಗೆಯೇ ಮೇಲುಹಾಸುಗಳನ್ನು ಅಲ್ಲಲ್ಲಿ ನಿರ್ಮಾಣ ಮಾಡದೆ ಬಿಡಲಾಗಿದೆ. ಇದು ಹೆದ್ದಾರಿ ಬದಿಯಲ್ಲಿ ಓಡಾಡುವವರಿಗೆ ಅನಾನುಕೂಲ ಸೃಷ್ಟಿಸಿದೆ. ಎಚ್ಚರ ತಪ್ಪಿದರೆ ಚರಂಡಿಯೊಳಗೆ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ.

ಕೊಳಚೆ ನೀರು ಹರಿಯುತ್ತಿಲ್ಲ: ಇನ್ನು ಕಾಮಗಾರಿ ನಡೆಸುವವರ ನಿರ್ಲಕ್ಷ್ಯ ಹೇಗಿದೆ ಎಂದರೆ, ಚರಂಡಿಗೆ ಮೇಲುಹಾಸು ನಿರ್ಮಾಣ ಮಾಡುವಾಗ ಆಧಾರಕ್ಕೆ ಹಾಕಿದ್ದ ಸೆಂಟ್ರಿಂಗ್‌ ಮರಗಳನ್ನೂ ಸಹ ತೆಗೆಯದೆ, ಅಡ್ಡಲಾಗಿ ಮರಗಳಿದ್ದರೂ ಮೇಲುಹಾಸು ನಿರ್ಮಾಣ ಮಾಡಲಾಗಿದೆ. ಇದರಿಂದ ಚರಂಡಿಯಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯಲಾದೆ ಅಲ್ಲೇ ನಿಂತು ಕೊಳೆಯುತ್ತಿದೆ. ಪ್ಲಾಸ್ಟಿಕ್‌ ಸೇರಿದಂತೆ ಹಲವು ವಸ್ತುಗಳು ಅಡ್ಡಲಾಗಿ ಹೊಸ ಚರಂಡಿಗಳು ಈಗಾಗಲೇ ಕಟ್ಟಿಕೊಂಡು, ಗಬ್ಬುನಾಥ ಬೀರುತ್ತಿವೆ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ವಾಸನೆ ಸಹಿಸಿಕೊಂಡೇ ವ್ಯವಹಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಯಾಮಾರಿದ್ರೆ ಅಪಾಯ: ಹೆದ್ದಾರಿ ಬದಿಯಲ್ಲಿ ಇರುವ ಈ ಚರಂಡಿಗಳು ಅಲ್ಲಲ್ಲಿ ಬಾಯ್ತೆರೆದು ಕುಳಿತಿದ್ದು, ನಡೆದುಹೋಗುವಾಗ ಎಚ್ಚರ ತಪ್ಪಿದರೆ ಚರಂಡಿಯೊಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವ ಅಪಾಯವಿದೆ. ಕೆಲವೆಡೆ ಕಬ್ಬಿಣದ ಕಂಬಿಗಳು ಸಹ ತೆರೆದ ಕಡೆಗಳಲ್ಲಿ ಇಣುಕುತ್ತಿದ್ದು, ಅಕಸ್ಮಿಕವಾಗಿ ಕಾಲಿಗೆ ತಗುಲಿದರೂ ಅಪಾಯ ಎದುರಾಗುವ ಸಂಭವ ಹೆಚ್ಚಾಗಿದೆ. ಅದನ್ನು ಮುಚ್ಚುವ ಕೆಲಸಕ್ಕೆ ಗುತ್ತಿಗೆದಾರರು ಹೋಗಿಲ್ಲ, ಈಗಾಗಲೇ ಟಿಎಪಿಸಿಎಂಎಸ್‌ ಕಾಂಪ್ಲೆಕ್ಸ್‌ ಎದುರಿಗಿರುವ ಇಂಥಹುದೇ ಮೇಲುಹಾಸು ಇಲ್ಲದೇ ಚರಂಡಿಗೆ ಬಿದ್ದ ಉದಾಹರಣೆಯೂ ಕಣ್ಣಮುಂದಿದೆ.

ಅಲ್ಲಲ್ಲಿ ಮೇಲುಹಾಸಿನ ಮೇಲೆ ಟೈಲ್ಸ್ ಅಳವಡಿಸುವ ಕೆಲಸವಾಗಿದ್ದು, ಆ ಟೈಲ್ಸ್ ಹಾಕುವಾಗಲೂ ಬೇಕಾಬಿಟ್ಟಿ ಕಾಮಗಾರಿ ನಡೆಸಲಾಗಿದೆ. ಅದಕ್ಕೂ ಕ್ಯೂರಿಂಗ್‌ ಮಾಡದಿರುವುದರಿಂದ ಆಗಲೇ ಕಿತ್ತುಬರುವ ಸ್ಥಿತಿಗೆ ತಲುಪಿವೆ. ಇನ್ನು ಕೆಲವೆಡೆ ಟೈಲ್ಸ್ ಹಾಕಿರುವ ಮೇಲೆಯೇ ಕೆಲ ಅಂಗಡಿಗಳ ಮಾಲೀಕರು ತಮ್ಮ ಮಾರಾಟದ ವಸ್ತುಗಳನ್ನಿಟ್ಟು ಪಾದಚಾರಿಗಳಿಗೆ ಓಡಾಡದಂತೆ ಮಾಡಿದ್ದಾರೆ.

ಬೇಕಾಬಿಟ್ಟಿ ಡಾಂಬರು: ಇನ್ನು ಹೆದ್ದಾರಿ ವಿಸ್ತರಣೆ ಮಾಡಿ, ಡಾಂಬರು ಹಾಕುವ ವಿಚಾರದಲ್ಲಿಯೂ ನಿಯಮಗಳನ್ನು ಗಾಳಿಗೆ ತೂರಿಹೋಗಿವೆ. ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿಗಳು ತಾಲೂಕಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಕಡೆಗಳೆಲ್ಲ ಡಾಂಬರು ಹಾಕುವ ಕೆಲಸಕ್ಕೆ ಗುತ್ತಿಗೆದಾರರು ಚಾಲನೆ ನೀಡಿದ್ದಾರೆ. ರಾತ್ರೋರಾತ್ರಿ ಇಷ್ಟಬಂದಂತೆ ಡಾಂಬರು ಹಾಕುವ ಕೆಲಸ ನಡೆಯುತ್ತಿದೆ. ಯಾವ ಪ್ರಮಾಣದಲ್ಲಿ ವಸ್ತುಗಳನ್ನು ಹಾಕಬೇಕೋ ಅದೆಲ್ಲಾ ಆಗುತ್ತಿಲ್ಲ. ತರಾತುರಿಯಲ್ಲಿ ಡಾಂಬರು ಹಾಕಲಾಗುತ್ತಿದೆ. ಅಧಿಕಾರಿಗಳು ಗುಣಮಟ್ಟ ಪರಿಶೀಲನೆ ಮಾಡುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಈ ಡಾಂಬರು ಆರು ತಿಂಗಳಲ್ಲೇ ಕಿತ್ತುಹೋಗುವುದು ಮಾತ್ರ ನಿಶ್ಚಿತವಾಗಿದೆ.

ಸಿಎಂ ಕ್ರಮ ಕೈಗೊಳ್ಳಲಿ: ಮುಖ್ಯಮಂತ್ರಿಗಳ ದಿಕ್ಕುತಪ್ಪಿಸಲು ಮನಬಂದಂತೆ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರು, ಅದನ್ನು ಪರಿಶೀಲಿಸದೇ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಗಮನಕ್ಕೆ ಇದು ಬಂದು, ಕ್ರಮಕ್ಕೆ ಮುಂದಾಗುವರೇ ಎಂಬುದನ್ನು ಕಾದುನೋಡಬೇಕಿದೆ.

● ಎಂ.ಶಿವಮಾದು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕುದೂರು: ಗ್ರಾಮದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಿ, ಜನರು ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು...

  • ರಾಮನಗರ: ಜಿಲ್ಲೆಯಲ್ಲಿ ಕೈಗೊಂಡಿರುವ ಕರೆಗಳಿಗೆ ನೀರು ಹರಿಸುವ ಯೋಜನೆಯ ಬಗ್ಗೆ ಭಾರತ ಸರ್ಕಾರದ ಗಮನ ಸೆಳೆದು, ಇತರ ರಾಜ್ಯಗಳು ಸಹ ಈ ಮಾದರಿಯನ್ನು ಅನುಸರಿಸುವಂತೆ...

  • ರಾಮನಗರ: ರಾಜಕೀಯೇತರ ಸಂಸ್ಥೆ ಯಾಗಿ, ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಲು ರೋಟರಿ ಸಂಸ್ಥೆ ಮೂಲಕ ಸಾಕಷ್ಟು ಅವಕಾಶಗಳಿವೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌...

  • ರಾಮನಗರ: ಜಿಲ್ಲೆಯ 4 ತಾಲೂಕುಗಳ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದ್ದ 4133 ಪ್ರಕರಣಗಳು ಲೋಕ್‌ ಅದಾಲತ್‌ ಮುಂದೆ ಬಂದಿದ್ದು ಈ ಪೈಕಿ 1607 ಪ್ರಕರಣಗಳನ್ನು ಅದಾಲತ್‌ನಲ್ಲಿ...

  • ಕನಕಪುರ: ಕೆಲವು ಅಧಿಕಾರಿಗಳು, ದಲ್ಲಾಳಿಗಳು ಹಣ ಪಡೆದು ಕೆಲಸ ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ತಾಲೂಕು ಕಚೇರಿ ಹಾಗೂ ಸರ್ವೆ ಇಲಾಖೆಗಳಲ್ಲಿ...

ಹೊಸ ಸೇರ್ಪಡೆ