ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆ

Team Udayavani, Sep 8, 2019, 12:23 PM IST

ಚನ್ನಪಟ್ಟಣದ ಬಸ್‌ ನಿಲ್ದಾಣದ ಸಮೀಪ ಕಾಳಿದಾಸ ಹಾಸ್ಟೆಲ್ ಎದುರು ಟೈಲ್ಸ್ಗಳು ಮೇಲೆದ್ದಿರುವುದು.

ಚನ್ನಪಟ್ಟಣ: ಪಟ್ಟಣ ವ್ಯಾಪ್ತಿಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ವಿಸ್ತರಣೆಗಾಗಿ ಹೊಸದಾಗಿ ನಿರ್ಮಿಸಿರುವ ಚರಂಡಿ, ಚರಂಡಿ ಮೇಲುಹಾಸು, ಟೈಲ್ಸ್ ಹಾಗೂ ಗ್ರಿಲ್ ಅಳವಡಿಕೆಯ ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಹಾಕಿದ್ದ ಕೆಲವೇ ದಿನಗಳಲ್ಲಿ ಕಿತ್ತು ಬಂದಿವೆ.

ಗುಣಮಟ್ಟದ ಕಾಮಗಾರಿ ಕೈಗೊಳ್ಳುವಲ್ಲಿ ಬೇಜವಾಬ್ದಾರಿ ವರ್ತನೆ ತೋರಿರುವ ಗುತ್ತಿಗೆದಾರರು ಹಾಗೂ ಸರಿಮಾಡಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ತರಾತುರಿಯಲ್ಲಿ ಮುಗಿಸುವ ಧಾವಂತದಲ್ಲಿ ಕಾಮಗಾರಿಗಳನ್ನು ಕಳಪೆ ಮಾಡಲಾಗಿದೆ. ಕಾಮಗಾರಿ ಮುಗಿಸಬೇಕಾದ ಅವಧಿ ಮುಕ್ತಾಯವಾಗುತ್ತಾ ಬರುತ್ತಿದ್ದರೂ ಇನ್ನೂ ಕೆಲವೆಡೆ ಕಾಮಗಾರಿಗಳನ್ನೇ ಆರಂಭ ಮಾಡಿಲ್ಲ.

ಹೆದ್ದಾರಿಯ ಎರಡೂ ಬದಿಗಳಲ್ಲಿ ನಿರ್ಮಾಣ ಮಾಡಿರುವ ಚರಂಡಿಗಳ ಮೇಲುಹಾಸು ಹಾಕಲಾಗಿದೆ. ಅಗತ್ಯ ಬಿದ್ದಾಗ ಚರಂಡಿ ಒಳಗೆ ಇಳಿಯಬೇಕಾದ ಸಂದರ್ಭದಲ್ಲಿ ಅನುಕೂಲವಾಗಲೆಂದು ಅಲ್ಲಲ್ಲಿ ಸಿಮೆಂಟ್ ಸ್ಲಾಬ್‌ಗಳನ್ನು ಅಳವಡಿಸಲು ಜಾಗ ಬಿಡಲಾಗಿದೆ. ಅಲ್ಲಿಗೆ ಹಾಕಲು ನಿರ್ಮಾಣ ಮಾಡಿರುವ ಸಿಮೆಂಟ್ ಸ್ಲಾಬ್‌ಗಳು ತೀರಾ ಕಳಪೆಯಿಂದ ಕೂಡಿದೆ. ಈಗಾಗಲೇ ಚರಂಡಿಯೊಳಗೆ ಮುರಿದು ಬಿದ್ದಿವೆ.

ಚರಂಡಿ ಮೇಲುಹಾಸಿನ ಮೇಲೆ ಟೈಲ್ಸ್: ಇನ್ನು ಚರಂಡಿ ಮೇಲುಹಾಸಿನ ಮೇಲೆ ಟೈಲ್ಸ್ಗಳನ್ನು ಹಾಕಲಾಗಿದೆ. ಆ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಟೈಲ್ಸ್ ತಮ್ಮ ನೆಲೆ ಕಳೆದುಕೊಂಡು ಮೇಲೆ ಬಂದಿವೆ. ಟೈಲ್ಸ್ ಅಳವಡಿಸುವಾಗಲೂ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿಲ್ಲ. ಕಾಟಾಚಾರಕ್ಕಾಗಿಯೇ ಟೈಲ್ಸ್ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಅದರ ಮೇಲೆ ನಡೆದಾಡುವ ಮುನ್ನವೇ ಚೂರು ಚೂರಾಗಿವೆ. ಕೆಲವೆಡೆ ಮೇಲೆ ಬಂದಿವೆ.

ಹಾಗೆಯೇ ಪಾದಚಾರಿ ರಸ್ತೆಗೆ ವಾಹನಗಳು ಬಾರದಂತೆ ತಡೆಯಲು ಚರಂಡಿಗೆ ಹೊಂದಿಕೊಂಡಂತೆಯೇ ಕಬ್ಬಿಣದ ಗ್ರಿಲ್ಗಳನ್ನು ಹಾಕಲಾಗಿದೆ. ಅದು ಹಾಳಾಗದಂತೆ ನೆಲಮಟ್ಟದಿಂದ ಚರಂಡಿ ಹಾಗೂ ಗ್ರಿಲ್ಗೆ ಸೇರಿದಂತೆ ಸಿಮೆಂಟ್ ಇಟ್ಟಿಗೆಯನ್ನು ಕಟ್ಟಿ, ಮಧ್ಯೆ ಕಾಂಕ್ರೀಟ್ ಸುರಿದು ಗಟ್ಟಿಗೊಳಿಸಬೇಕಾಗಿರುವುದು ನಿಯಮವಾಗಿದೆ. ಆದರೆ, ಉದ್ದೇಶವನ್ನೇ ಮರೆತು ತೋರಿಕೆಗಾಗಿ ಸಿಮೆಂಟ್ ಇಟ್ಟಿಗೆ ಕಟ್ಟಿ ಗ್ರಿಲ್ಗೂ ಇಟ್ಟಿಗೆಗೂ ಸಂಬಂಧವಿಲ್ಲದಂತೆ ಕಾಮಗಾರಿ ಮುಗಿಸಿ ಕೈತೊಳೆದುಕೊಳ್ಳಲಾಗಿದೆ.

ತುಕ್ಕು ಹಿಡಿಯುವ ಮಟ್ಟಕ್ಕೆ ತಲುಪಿದೆ ಕಬ್ಬಿಣ: ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವ ಚರಂಡಿ ಬಳಿ ಗ್ರಿಲ್ಗಳ ಕೆಳಭಾಗಕ್ಕೆ ಆಸರೆಯೇ ಇಲ್ಲವಾಗಿದೆ. ಚರಂಡಿಯ ಕಬ್ಬಿಣವನ್ನು ಆಶ್ರಯಿಸಿವೆ. ಸಿಮೆಂಟ್ ಇಟ್ಟಿಗೆಯನ್ನು ತೋರ್ಪಡಿಕೆಗೆ ಕೆಳಗೆ ಕಟ್ಟಿ ಕಾಮಗಾರಿಯನ್ನು ಮುಗಿಸಲಾಗಿದೆ. ಇದ್ಯಾವ ಗುಣಮಟ್ಟದ ಕಾಮಗಾರಿ ಎಂಬುದನ್ನು ಅಧಿಕಾರಿಗಳೇ ಹೇಳಬೇಕಿದೆ. ಕಳಪೆ ಗುಣಮಟ್ಟದ ಕಬ್ಬಿಣ ಹಾಕಿರುವುದರಿಂದ ತುಕ್ಕು ಹಿಡಿಯುವ ಮಟ್ಟಕ್ಕೆ ತಲುಪಿದೆ. ಅಲ್ಲಲ್ಲಿ ಕಿತ್ತು ಬಂದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿವೆ.

ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ: ಇನ್ನು ಕೋಟ್ಯಂತರ ರೂ. ವ್ಯಯಿಸಿ ನಡೆಸಲಾಗುತ್ತಿರುವ ಕಾಮಗಾರಿಯನ್ನು ತಮಗೆ ಇಷ್ಟ ಬಂದಂತೆ ನಿರ್ವಹಿಸಲಾಗುತ್ತಿದ್ದು, ಅಧಿಕಾರಿಗಳು, ಎಂಜಿನಿಯರುಗಳು ಕೇಳುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹತ್ತಾರು ವರ್ಷ ಇರಬೇಕಾದ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿವೆ ಎಂದರೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.

ಇನ್ನೂ ಆರಂಭವಾಗಿಲ್ಲ ಕಾಮಗಾರಿ: ಇದೆಲ್ಲದರ ನಡುವೆ ಪಟ್ಟಣ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಹೆದ್ದಾರಿ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯೇ ಆರಂಭವಾಗಿಲ್ಲ. ನ್ಯಾಯಾಲಯದಲ್ಲಿ ಜಾಗದ ಪ್ರಕರಣ ಇರುವ ಕಾರಣದಿಂದ ಕೆಲವೆಡೆ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಆ ಬದಿಯಲ್ಲಿ ಸ್ವಲ್ಪದೂರ ಹೆದ್ದಾರಿ ಮಣ್ಣಿನಿಂದಲೇ ಕೂಡಿದೆ. ಇದು ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ.

ಹೆದ್ದಾರಿಯಲ್ಲೇ ಸಂಚಾರಿಸುವ ಪರಿಸ್ಥಿತಿ: ಮಳೆಬಂದ ಸಂದರ್ಭದಲ್ಲಿ ಬದಿಯಲ್ಲೇ ನಡೆದುಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ನಿರ್ಮಾಣವಾಗಿರುವ ಚರಂಡಿಯ ಮೇಲೆ ಪಕ್ಕದಲ್ಲಿರುವ ಅಂಗಡಿ ಮಳಿಗೆಗಳ ಮಾಲೀಕರು ಮಾರಾಟದ ವಸ್ತುಗಳನ್ನು ಇಟ್ಟುಕೊಂಡಿರುವುದರಿಂದ ಅಲ್ಲಿ ನಡೆಯಲಾಗದೆ, ಹೆದ್ದಾರಿ ಮೇಲೆಯೇ ನಡೆದಾಡುತ್ತಿದ್ದಾರೆ. ಇದನ್ನು ತೆರವುಗೊಳಿಸುವ ಕೆಲಸವನ್ನು ನಗರಸಭೆ ಮಾಡಬೇಕಿದೆ.

ಸಂಬಂಧಪಟ್ಟ ಮೇಲಧಿಕಾರಿಗಳು ಇನ್ನಾದರೂ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ, ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರಿಂದ ಮಾಡಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಕೆಲವೇ ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಲಿದೆ. ಅದಾಗುವ ಮುನ್ನ ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ವಿನಿಯೋಗವಾಗುವಂತೆ ಮಾಡಬೇಕಿದೆ.

 

● ಎಂ.ಶಿವಮಾದು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾಮನಗರ: ಅಂತರ್ಜಲ ವೃದ್ಧಿಗೆ ರಾಮನಗರ ತಾಲೂಕಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಲ್ಯಾಣಿಗಳು, ಗೋಕಟ್ಟೆಗಳನ್ನು ಗುರುತಿಸಿ ಅಭಿವೃದ್ಧಿ ಹಾಗೂ...

  • ರಾಮನಗರ: ಅಂತರ್ಜಲ ಕಾಪಾಡಲು 2016-17ನೇ ಸಾಲಿನಲ್ಲಿ ಸರ್ಕಾರ ನೀಲಗಿರಿ ಮರಗಳನ್ನು ಕಟಾವು ಮಾಡಲು ಆದೇಶ ನೀಡ ಲಾಗಿತ್ತಾದರೂ, ರಾಮನಗರ ಜಿಲ್ಲೆಯಲ್ಲಿ ಈಗಷ್ಟೇ ನೀಲಗಿರಿ...

  • ಚನ್ನಪಟ್ಟಣ: ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡ ಬೇಕಾಗಿದೆ ಎಂದು ಮುಖ್ಯ ಶಿಕ್ಷಕ...

  • ಚನ್ನಪಟ್ಟಣ: ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಲಿಯೋನ್‌ ವಿರುದ್ಧ ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿ ಆಕೆಯ ಪ್ರತಿಕೃತಿ...

  • ಕನಕಪುರ: ಹೈಕೋರ್ಟ್‌ ಆದೇಶ ಪಾಲಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವುದು ಅಸಂಬದ್ಧ ಎಂದು ಬಿಜೆಪಿ ನಗರ ಅಧ್ಯಕ್ಷ ನಾಗಾನಂದ್‌ ಕಾಂಗ್ರೆಸ್‌ ಕಾರ್ಯಕರ್ತರ...

ಹೊಸ ಸೇರ್ಪಡೆ