ಕಾಲುವೆಯಲ್ಲಿದ್ದವು ಸಜೀವ ಬಾಂಬ್‌

Team Udayavani, Jun 27, 2019, 6:00 AM IST

ಬೆಂಗಳೂರು/ರಾಮನಗರ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಂದ ಬಂಧಿತನಾಗಿರುವ ಜಮಾತ್‌ ಉಲ್ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಹಬೀಬುರ್‌ ರೆಹಮಾನ್‌ ಶೇಕ್‌ ಅಲಿಯಾಸ್‌ ಶೇಖ್‌ ಬಂಧನ ಪ್ರಕರಣ ಕಳೆದ ಒಂದು ವರ್ಷದಿಂದ ಭೂಮಿ ಯೊಳಗೆ ಬಚ್ಚಿಟ್ಟಿದ್ದ’ ಸ್ಫೋಟಕ ರಹಸ್ಯ’ ಬಿಚ್ಚಿಟ್ಟಿದೆ.

ನ್ಯಾಯಾಲಯದ ಅನುಮತಿಯೊಂದಿಗೆ ಐದು ದಿನ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದ ಎನ್‌ಐಎ ಅಧಿಕಾರಿಗಳ ಮುಂದೆ ರಾಮನಗರದಲ್ಲಿ ಬಚ್ಚಿಟ್ಟಿದ್ದ ಎಂಟು ಬಾಂಬ್‌ಗಳ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಎನ್‌ಐಎ, ರಾಮನಗರ ದಲ್ಲಿನ ರಾಜಕಾಲುವೆಯಲ್ಲಿ ಬಚ್ಚಿಟ್ಟಿದ್ದ ಎರಡು ಸಜೀವ ಬಾಂಬ್‌ ಜಪ್ತಿಪಡಿಸಿಕೊಂಡಿದ್ದಾರೆ. ಉಳಿದ ಆರು ಬಾಂಬ್‌ಗಳ ಪತ್ತೆಗೆ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳದ ಜತೆ ಸಹ ಕಾರ್ಯಾಚರಣೆ ನಡೆಯುತ್ತಿದೆ.

ಜೆಎಂಬಿ ಉಗ್ರ ಸಂಘಟನೆಯ ಪ್ರಮುಖ ಕೌಸರ್‌ನ ಸಂಬಂಧಿಯೂ ಆಗಿದ್ದ ಹಬೀಬುರ್‌ 2014ರಿಂದಲೂ ಆತನ ಜತೆಗೆ ವಾಸಿಸುತ್ತಿದ್ದ. ಕಳೆದ ವರ್ಷ ಆಗಸ್ಟ್‌ನಲ್ಲಿ ಕೌಸರ್‌ ಬಂಧನವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ರಾಜಧಾನಿಯ ಹೊರವಲಯ ಪ್ರದೇಶಗಳಲ್ಲಿ ಆಶ್ರಯಪಡೆದುಕೊಂಡಿದ್ದ. ಕೌಸರ್‌ ಬಂಧನಕ್ಕೂ ಮುನ್ನ ಎಚ್ಚೆತ್ತುಕೊಂಡಿದ್ದ ಆತನ ಪತ್ನಿ ಹಾಗೂ ಹಬೀಬುರ್‌ ಮನೆಯಲ್ಲಿಟ್ಟಿದ್ದ ಬಾಂಬ್‌ಗಳನ್ನು ಪಡೆದು ಹೊರಗಡೆ ಬಂದಿದ್ದರು. ಈ ವೇಳೆ ರಾಜಕಾಲುವೆ ಸೇರಿದಂತೆ ಹಲವು ಕಡೆ ಬಚ್ಚಿಟ್ಟಿರುವ ಸಾಧ್ಯತೆಯಿದೆ.

ರಾಮನಗರದಲ್ಲಿ ಬಾಂಬ್‌ ತಯಾರಿ!: ಸುಧಾರಿತ ಸ್ಫೋಟಕ ಸಾಧನ (ಐಇಡಿ)ತಯಾರಿಸುವಲ್ಲಿ ನಿಪುಣ ನಾಗಿದ್ದ ಕೌಸರ್‌, ಬಾಂಬ್‌ ತಯಾರಿಕೆಯನ್ನು ಹಬೀ ಬುರ್‌ಗೂ ಕಲಿಸಿದ್ದ.2014ರ ಬುಧ್ರ್ವಾನ್‌ ಮನೆ ಯೊಂದರಲ್ಲಿ ಬಾಂಬ್‌ ಸ್ಫೋಟ ಘಟನೆ ಬಯಲಿಗೆ ಬರುತ್ತಿದ್ದಂತೆ ಇಬ್ಬರೂ ಜತೆಯಾಗಿ ದಕ್ಷಿಣ ರಾಜ್ಯಗಳತ್ತ ತಲೆಮರೆಸಿಕೊಳ್ಳಲು ಬಂದಿದ್ದರು.

ರಾಜಧಾನಿಯ ಹಲವೆಡೆ ತಂಗಿದ್ದ ಅವರು ಅಂತಿಮವಾಗಿ ರಾಮನಗರದಲ್ಲಿ ಬಂದು ನೆಲೆಸಿದ್ದರು.

ಕೌಸರ್‌ ಹಾಗೂ ಹಬೀಬುರ್‌ ಮೇಲೆ ಕಣ್ಣಿದ್ದ ಎನ್‌ಐಎ 2018ರ ಆಗಸ್ಟ್‌ 7ರಂದು ರಾಮನಗರದಲ್ಲಿ ಕೌಸರ್‌ನನ್ನು ಬಂಧಿಸುವ ಕೆಲವೇ ದಿನಗಳ ಮುನ್ನ, ಹಬೀಬುರ್‌ ಬಾಂಬ್‌ಗಳನ್ನು ಬಚ್ಚಿಡಲಾಗಿತ್ತು.

ಐಇಡಿ ಸ್ಫೋಟಕ ತಯಾರಿಕೆಯಲ್ಲಿ ನಿಪುಣರಾಗಿದ್ದ ಆರೋಪಿಗಳಿಬ್ಬರು ರಾಮನಗರದಲ್ಲಿ ಉಳಿದುಕೊಂಡಿದ್ದ ಮನೆಯಲ್ಲಿ ಬಾಂಬ್‌ ತಯಾರಿಸಿ, 2018ರಲ್ಲಿ ನಡೆದ ಬೋಧ್‌ಗಯಾ ಸ್ಫೋಟಕ್ಕೆ ರವಾನಿಸಿದ್ದರೇ ಅಥವಾ ಬೇರೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜತೆಗೆ, ಬೆಂಗಳೂರು ಹೊರವಲಯದಲ್ಲಿ ದರೋಡೆ ಕೃತ್ಯಗಳಲ್ಲಿ ಕೌಸರ್‌ ಭಾಗಿಯಾಗಿರುವುದು ಈಗಾಗಲೇ ತನಿಖೆಯಲ್ಲಿ ಗೊತ್ತಾಗಿದ್ದು, ಹಬೀಬುರ್‌ ಪಾತ್ರದ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಧಾರ್‌ ಕಾರ್ಡ್‌ ಹೊಂದಿದ್ದ ಹಬೀಬುರ್‌!: ರಾಮನಗರದಿಂದ ವಾಸ್ತವ್ಯ ಬದಲಿಸಿದ್ದ ಹಬೀಬುರ್‌ ಕೆಲತಿಂಗಳು ಆಶ್ರಯಪಡೆದುಕೊಂಡಿದ್ದ. ಇತ್ತೀಚೆಗಷ್ಟೇ ಮೌಲ್ವಿಯೊಬ್ಬರ ಸಹಕಾರದಿಂದ ದೊಡ್ಡಬಳ್ಳಾಪುರಕ್ಕೆ ಬಂದು ನೆಲೆಸಲು ಸಿದ್ಧತೆ ನಡೆಸಿದ್ದ. ಆತ ಆಧಾರ್‌ ಕಾರ್ಡ್‌ ಕೂಡ ಹೊಂದಿದ್ದ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಸ್ಥಳೀಯವಾಗಿ ಸಿದ್ಧವಾಗಿದ್ದ ಬಾಂಬ್‌

ರಾಮನಗರ ಜಿಲ್ಲೆಯ ಟಿಪ್ಪುನಗರದಲ್ಲಿ ಪತ್ತೆಯಾದ ಬಾಂಬ್‌ಗಳು ಬಂಧನಕ್ಕೊಳಗಾಗಿರುವ ಜೆಎಂಬಿ ಉಗ್ರ ಹಬ್ಬೀಬುರ್‌ ರೆಹಮಾನ್‌ ಹಾಗೂ ಆತನ ಸಹಚರರು ಸ್ಥಳೀಯವಾಗಿಯೇ ಸಿದ್ದಪಡಿಸಿದ್ದರು ಎಂಬುದು ತಿಳಿದು ಬಂದಿದ್ದು, ಬಾಂಬ್‌ಗಳನ್ನು ಗ್ರೆನೇಡ್‌ ಮಾದರಿಯಲ್ಲಿ ತಯಾರಿಸಿದ್ದಾರೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
2018ರ ಅಕ್ಟೋಬರ್‌ನಲ್ಲಿ ರಾಮನಗರದಲ್ಲೇ ಬಂಧನಕ್ಕೊಳಗಾದ ಜೆಎಂಬಿ ಶಂಕಿತ ಉಗ್ರ ಕೌಸರ್‌ ಜತೆಯೇ ರೆಹಮಾನ್‌ ಕೂಡ ಬಾಂಗ್ಲಾದೇಶದಿಂದ ತಪ್ಪಿಸಿಕೊಂಡು ಬಂದಿದ್ದು, ಆರಂಭದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರು. ಈ ವೇಳೆಯೇ ಆರೋಪಿಗಳು ಬಾಂಬ್‌ಗಳನ್ನು ತಯಾರಿಸಿದ್ದಾರೆ. ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ರಾಜ್ಯದಲ್ಲಿಯೇ ಖರೀದಿಸಿದ್ದಾರೆ ಎಂಬುದು ಗೊತ್ತಾಗಿದೆ.
ಗ್ರೆನೇಡ್‌ ಮಾದರಿಯಲ್ಲಿರುವುದರಿಂದ ಸದ್ಯ ಬಾಂಬ್‌ ನಿಷ್ಕ್ರೀಯ ದಳ ಅವುಗಳನ್ನು ಕೊಂಡೊಯ್ದಿದ್ದು, ಪರಿಶೀಲನೆ ನಡೆಸುತ್ತಿದೆ. ಕಳೆದ ವರ್ಷ ಕೌಸರ್‌ ಬಂಧನವಾಗುತ್ತಿದ್ದಂತೆ ಆರೋಪಿ ರೆಹಮಾನ್‌ ತಲೆಮರೆಸಿಕೊಂಡಿದ್ದು, ಕೆಲ ಮಸೀದಿಗಳಲ್ಲಿ ವಾಸವಾಗಿದ್ದು, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ರಾಮನಗರದಲ್ಲಿ ಸಜೀವ ಬಾಂಬ್‌ ಹಾಗೂ ಶಂಕಿತ ಉಗ್ರ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸುತ್ತೇನೆ.
-ಎಂ.ಬಿ. ಪಾಟೀಲ್ ಗೃಹ ಸಚಿವ

ರಾಮನಗರದಲ್ಲಿ ದೊರೆತಿರುವ ವಸ್ತುಗಳಿಂದ ಸಾರ್ವಜನಿಕರಿಂದ ಯಾವುದೇ ತೊಂದರೆಯಿಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುತ್ತಿದೆ.
-ಡಾ. ಚೇತನ್‌ಸಿಂಗ್‌ ರಾಥೋಡ್‌, ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ