ತಾಲೂಕಲ್ಲಿ ಈ ಬಾರಿಯೂ ಬರಗಾಲದ ಭೀತಿ

ಜುಲೈ ಅಂತ್ಯದ ವೇಳೆಗೆ ಶೇ.80ರಷ್ಟು ಪೂರ್ಣವಾಗಬೇಕಾದ ಬಿತ್ತನೆ ಕಾರ್ಯ ಈ ಬಾರಿ ಶೇ.10 ದಾಟಿಲ್ಲ

Team Udayavani, Jul 24, 2019, 2:46 PM IST

ಚನ್ನಪಟ್ಟಣ ತಾಲೂಕಿನಲ್ಲಿ ರಾಗಿ ಬಿತ್ತನೆ ಮಾಡಲು ಜಮೀನು ಹದಗೊಳಿಸಿರುವುದು.

ಚನ್ನಪಟ್ಟಣ: ಸತತ ಮೂರು ವರ್ಷಗಳಿಂದ ವರುಣನ ಅವಕೃಪೆಗೆ ಒಳಗಾಗಿರುವ ತಾಲೂಕು ಈ ಬಾರಿಯೂ ವಾಡಿಕೆ ಮಳೆಯಿಂದ ವಂಚಿತವಾಗಿ ಬರಗಾಲದ ಮುನ್ಸೂಚನೆ ಭೀತಿ ಎದುರಿಸುತ್ತಿದೆ. ಮಳೆ ತಾಲೂಕಿನ ಪಾಲಿಗೆ ಮರೀಚಿಕೆಯಾಗಿರುವ ಪರಿಣಾಮ ಬಿತ್ತನೆ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಬಿತ್ತನೆ ಆರಂಭವೇ ಆಗಿಲ್ಲ: ಜುಲೈ ಅಂತ್ಯದ ವೇಳೆಗೆ ಶೇ.80ರಷ್ಟು ಪೂರ್ಣವಾಗಬೇಕಾದ ಬಿತ್ತನೆ ಕಾರ್ಯ ಪ್ರಸ್ತುತ ಶೇ.10ರಷ್ಟು ಮಾತ್ರ ನಡೆದಿದ್ದು, ನೀರಾವರಿ ಪ್ರದೇಶದಲ್ಲಿ ಭತ್ತ ಹಾಗೂ ರಾಗಿ ಬಿತ್ತನೆಯಾಗಿರುವುದು ಹೊರತುಪಡಿಸಿದರೆ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ.

ಮಳೆಗಾಗಿ ಕಾಯುತ್ತಿರುವ ರೈತರು: ಜುಲೈ ಮೊದಲನೇ ವಾರದಲ್ಲಿ ಆರಂಭವಾಗಿ ಅಂತ್ಯದೊಳಗೆ ಸಂಪೂರ್ಣವಾಗಿ ಮುಕ್ತಾಯವಾಗುತ್ತಿದ್ದ ಬಿತ್ತನೆ ಪ್ರಕ್ರಿಯೆಗೆ ಮಳೆ ಬೀಳದ ಪರಿಣಾಮ ಚಾಲನೆ ದೊರಕದಿದ್ದು, ಕಳೆದೊಂದು ವಾರದಿಂದ ಬಿದ್ದ ಮಳೆಗೆ ಹೊಲಗಳನ್ನು ಹದಗೊಳಿಸುತ್ತಿರುವ ರೈತರು, ಬಿತ್ತನೆ ಮಾಡಲು ಚಾತಕಪಕ್ಷಿಯಂತೆ ಮಳೆಗಾಗಿ ಕಾದುಕುಳಿತಿದ್ದಾರೆ.

ಮಳೆ ಕೊರತೆ: ಜುಲೈ ಮಾಹೆಯಲ್ಲಿ ತಾಲೂಕಿನಲ್ಲಿ 83 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು ಇದುವರೆಗೆ 41 ಮಿ.ಮೀ. ಮಾತ್ರ ಮಳೆಯಾಗಿದೆ. ಅದು ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ಆಗಿಲ್ಲ, ಘಟ್ಟ ಪ್ರದೇಶಗಳಲ್ಲಿ ಹಾಗೂ ಎರಡು ಹೋಬಳಿಗಳಲ್ಲಿ ಹೊರತು ಪಡಿಸಿದರೆ ಮಿಕ್ಕ ಕಡೆ ಸಮರ್ಪಕವಾಗಿ ಮಳೆ ಸುರಿದಿಲ್ಲ. ವಿರುಪಾಕ್ಷಿಪುರ ಹೋಬಳಿಯಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದೆ.

ಮತ್ತೂಮ್ಮೆ ಬರದ ಭೀತಿ: ಜೂನ್‌ ಮಾಹೆಯಲ್ಲಿ 73 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, 64 ಮಿ.ಮೀ. ಮಳೆ ಸುರಿದಿತ್ತು. ರೈತರು ಆರಂಭಿಕ ಹಂತದ ಉಳುಮೆ ಮಾಡಿ, ಈ ಬಾರಿ ಉತ್ತಮ ಇಳುವರಿಯ ಕನಸು ಕಂಡಿದ್ದರು. ಜುಲೈ ಮಾಹೆಯ ಮೂರನೇ ವಾರದ ಆರಂಭದಲ್ಲಿ ದಿಢೀರನೆ ಎರಡು ದಿನ ಮಳೆ ಸುರಿದಿದೆ. ಅದೂ ಎಲ್ಲ ಹೋಬಳಿಗಳಲ್ಲಿಯೂ ಸಮರ್ಪಕವಾಗಿ ಮಳೆಯಾಗಿಲ್ಲ, ಹಾಗಾಗಿ ಬಿತ್ತನೆ ಮಾಡಲಾಗದ ಪರಿಣಾಮ ಮತ್ತೂಮ್ಮೆ ಬರದ ಭೀತಿ ಎದುರಾಗಿದೆ.

ವ್ಯರ್ಥವಾದ ಬಿತ್ತನೆ ಬೀಜ: ಮಳೆಯಾಶ್ರಿತ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುವ ರಾಗಿ ಬೀಜವನ್ನು ಈಗಾಗಲೇ ರೈತರಿಗೆ ವಿತರಣೆ ಮಾಡಲಾಗಿದ್ದು, ಎಂ.ಆರ್‌.1 ತಳಿಯ 95 ಕ್ವಿಂಟಲ್ ರಾಗಿ ಬೀಜ ವಿತರಿಸಲಾಗಿದೆ. ಜುಲೈ ಕೊನೆಯ ವಾರದೊಳಗೆ ಇದನ್ನು ಬಿತ್ತನೆ ಮಾಡಬೇಕಿದ್ದು, ಆಗಸ್ಟ್‌ನಲ್ಲಿ ಬಿತ್ತನೆ ಮಾಡಬೇಕಾದರೆ ರೈತರು ಕಡಿಮೆ ಅವಧಿಯ ರಾಗಿಯನ್ನು ಬಿತ್ತನೆ ಮಾಡಬೇಕಿದೆ.

ಬಿತ್ತನೆ ಮಾಡದಿದ್ದರೆ ಬೀಜ ವ್ಯರ್ಥ: ಬಿತ್ತನೆ ಅವಧಿ ಮುಗಿಯುತ್ತಿರುವುದರಿಂದ ಎಂ.ಆರ್‌.1 ಹಾಗೂ ಎಂ.ಆರ್‌ 6 ತಳಿಯ ರಾಗಿ ಬೀಜ ನೀಡುವುದನ್ನು ಸ್ಥಗಿತಗೊಳಿಸಿದ್ದು, ಕಡಿಮೆ ಅವಧಿಯ ಜಿಪುಯು 28, ಜಿಪಿಯು 26 ಹಾಗೂ ಜಿಪಿಯು 48, ಜಿಪಿಯು 66 ತಳಿಯ ರಾಗಿ ಬೀಜ ವಿತರಿಸಲು ಕೃಷಿ ಇಲಾಖೆ ಮುಂದಾಗಿದೆ. ಆಗಸ್ಟ್‌ ಎರಡನೇ ವಾರದ ಅಂತ್ಯದೊಳಗೆ ಇವುಗಳನ್ನು ಬಿತ್ತನೆ ಮಾಡಬೇಕಿದ್ದು, ಅಷ್ಟರಲ್ಲಿ ಬಿತ್ತನೆಯಾಗದಿದ್ದರೆ ಇವುಗಳೂ ಸಹ ವ್ಯರ್ಥವಾಗಲಿವೆ. ಎಂ.ಆರ್‌ 1 ತಳಿ ನಾಲ್ಕುವರೆ ತಿಂಗಳ ಬೆಳೆಯಾಗಿದ್ದು, ಜಿಪಿಯು 26 ಮೂರುವರೆ ತಿಂಗಳಲ್ಲಿ ಕಟಾವಿಗೆ ಬರುವುದರಿಂದ ಈ ತಳಿಯನ್ನೇ ಬಿತ್ತನೆಮಾಡುವಂತೆ ಕೃಷಿ ಇಲಾಖೆ ರೈತರಿಗೆ ಮನವರಿಕೆ ಮಾಡುವ ಕಾರ್ಯ ಮಾಡುತ್ತಿದೆ.

ದ್ವಿದಳ ಧಾನ್ಯಗಳದ್ದೂ ಇದೇ ಸ್ಥಿತಿ: ಇನ್ನು ರಾಗಿ ಹೊರತುಪಡಿಸಿ ತೊಗರಿ, ನೆಲಗಡಲೆ, ಅವರೆ ಸೇರಿದಂತೆ ಯಾವ ದ್ವಿದಳ ಧಾನ್ಯಗಳೂ ಸಹ ಬಿತ್ತನೆಯಾಗಿಲ್ಲ. ಹಿಂಗಾರು ಮಳೆಗೆ ಬಿತ್ತನೆ ಮಾಡಿದ್ದ ಎಳ್ಳು ಕಟಾವಿಗೆ ಬಂದಿದ್ದು, ನೀರಾವರಿ ಪ್ರದೇಶದಲ್ಲಿ ನೆಲಗಡಲೆ, ತೊಗರಿ ಹೊರತುಪಡಿಸಿದರೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆಯಾಗಿಲ್ಲ.

ದಾಸ್ತಾನಿದ್ದರೂ ಕೇಳುವರಿಲ್ಲ: ಇನ್ನು ಬಿತ್ತನೆ ಕಾಲದಲ್ಲಿ ಅವಶ್ಯವಾಗಿ ಬೇಕಾಗಿರುವ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದರೂ ಬಿತ್ತನೆಯಾಗದಿರು ವುದರಿಂದ ಕೇಳುವರಿಲ್ಲದಂತಾಗಿದೆ. ಖಾಸಗಿ ವ್ಯಕ್ತಿಗಳೂ ಸಹ ರಸಗೊಬ್ಬರವನ್ನು ದಾಸ್ತಾನು ಮಾಡಿದ್ದು ಮಳೆ ಬಿದ್ದರೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ ಮೂರು ವರ್ಷಗಳಿಂದ ನಿರಂತರವಾಗಿ ಬರಗಾಲ ಎದುರಿಸುತ್ತಾ ಶೇ.50ರಷ್ಟು ಇಳುವರಿ ಕಳೆದುಕೊಳ್ಳುತ್ತಾ ಬಂದಿರುವ ತಾಲೂಕು ಈ ಬಾರಿಯೂ ಅದೇ ಪರಿಸ್ಥಿತಿ ಎದುರಿಸುವ ಭೀತಿಯಲ್ಲಿದ್ದು, ಮಳೆರಾಯ ಇನ್ನೆರಡು ವಾರದಲ್ಲಿ ಕರುಣೆ ತೋರದಿದ್ದರೆ ಬರದ ಛಾಯೆ ಈ ಬಾರಿಯೂ ತಾಲೂಕನ್ನು ಆವರಿಸಲಿದೆ.

 

● ಎಂ.ಶಿವಮಾಧು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚನ್ನಪಟ್ಟಣ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕೆಂಬ ನಿಯಮವನ್ನು ಸಂಚಾರ ಪೊಲೀಸರು ಜಾರಿಗೊಳಿಸಿರುವ ಬೆನ್ನಲ್ಲೇ, ಹೆಲ್ಮೆಟ್ ಮಾರಾಟಗಾರರು ಕಳಪೆ...

  • ರಾಮನಗರ: ಹೆದ್ದಾರಿ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ರಾಮನಗರ ಪ್ರಾದೇಶಿಕ...

  • ಚನ್ನಪಟ್ಟಣ: ರಂಗಭೂಮಿ ಕಲೆ ತನ್ನದೇ ಆದ ಮಹತ್ತರ ಇತಿಹಾಸ ಹೊಂದಿದೆ. ಇತ್ತೀಚಿನ ದೂರದರ್ಶನದಲ್ಲಿ ಪ್ರದರ್ಶನವಾಗುವ ಯಾವ ಕಾರ್ಯಕ್ರಮಗಳೂ ಇದಕ್ಕೆ ಸರಿಸಾಟಿಯಾಗಲಾರದು...

  • ರಾಮನಗರ: ರಾಜ್ಯದಲ್ಲಿ ಉಗ್ರರ ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್‌ ಘೋಷಿಸಿದ್ದು, ಜಿಲ್ಲಾ...

  • ರಾಮನಗರ: ದೇಶದ ಹಲವು ರಾಜ್ಯಗಳಲ್ಲಿ ನೆರೆ ಹಾವಳಿ ಕಾಡಿದೆ. ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಕೇಂದ್ರ ಸರ್ಕಾರ ತಕ್ಷಣ ರಾಷ್ಟ್ರೀಯ ವಿಪತ್ತು...

ಹೊಸ ಸೇರ್ಪಡೆ