ಮುಕ್ತ ವಿವಿಯಿಂದ ಯೂಟ್ಯೂಬ್‌ ಪಾಠ

ರಾಜ್ಯ ಮುಕ್ತ ವಿವಿಯಲ್ಲಿ ನೂತನ ವ್ಯವಸ್ಥೆ ಜಾರಿ • ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ

Team Udayavani, Jul 23, 2019, 1:55 PM IST

ರಾಮನಗರದಲ್ಲಿ ನಡೆದ ಜನಪರ ಮಾಹಿತಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಮಾತನಾಡಿದರು.

ರಾಮನಗರ: ನುರಿತ ಉಪನ್ಯಾಸಕರಿಂದ ಪಠ್ಯಕ್ರಮಗಳ ಉಪನ್ಯಾಸಗಳ ವೀಡಿಯೋ ರೆಕಾರ್ಡ್‌ಗಳನ್ನು ಯೂಟ್ಯೂಬ್‌ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಹೇಳಿದರು.

ಜಿಲ್ಲಾ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇಲ್ಲಿನ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿ ಆಯೋಜಿಸಿದ್ದ ಜನಪರ ಮಾಹಿತಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೂಟ್ಯೂಬ್‌ನಲ್ಲಿ ಪಾಠಗಳ ಪ್ರವಚನಗಳು ಲಭ್ಯವಾಗುವುದರಿಂದ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇಂದು ಅಂತರ್ಜಾಲ ಎಲ್ಲಡೆ ವ್ಯಾಪಿಸಿದೆ. ಯೂಟ್ಯೂಬ್‌ ಬಗ್ಗೆ ಬಹುತೇಕರು ಬಲ್ಲವರಾಗಿದ್ದಾರೆ. ಪ್ರವಚನಗಳ ವೀಡಿಯೋಗಳನ್ನು ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಿ, ಮಾಹಿತಿ ಪಡೆದುಕೊಳ್ಳಬಹುದು. ಇದಲ್ಲದೇ ಪ್ರತಿ ತಾಲೂಕು ಕೇಂದ್ರಗಳಲ್ಲಿ ಲರ್ನರ್‌ ಸಪೋರ್ಟ್‌ ಸೆಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಪ್ಲೇಸ್‌ ಮೆಂಟ್ ವಿಭಾಗ ಸ್ಥಾಪನೆ: ಬಹುಶಃ ದೂರಶಿಕ್ಷಣದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ಲೇಸ್‌ ಮೆಂಟ್ ವಿಭಾಗ ಸ್ಥಾಪಿಸಲಾಗಿದೆ. ವಿವಿಯು ತನ್ನಲ್ಲಿ ಕಲಿತ ವಿದ್ಯಾರ್ಥಿಗಳ ನೌಕರಿ ಸಂಬಂಧಿತ ಯೋಜನೆ ರೂಪಿಸುವುದು ವಿನೂತನ ಹಾಗೂ ಅಗತ್ಯ ಕ್ರಮವಾಗಿದೆ ಎಂದರು.

ವಿವಿಯಿಂದ ತರಬೇತಿಗೆ ವ್ಯವಸ್ಥೆ: ಐಎಎಸ್‌, ಐಪಿಎಸ್‌ ಮುಂತಾದ ಯುಪಿಎಸ್ಸಿ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಗುಣಮಟ್ಟದ ತಯಾರಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಮೈಸೂರಿನಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಬ್ಯಾಂಕಿಂಗ್‌ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಕೇಂದ್ರದಲ್ಲಿ ತರಬೇತಿ ಲಭ್ಯವಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಕೆಎಸ್‌ಒಯುದ ಹಾಸ್ಟೆಲ್ನಲ್ಲೇ ತಂಗುವ ವ್ಯವಸ್ಥೆ ಕೂಡ ಮಾಡಲಾಗುವುದು. ಯುಪಿಎಸ್ಸಿ ಪರೀಕ್ಷೆಗಳಿಗೆ ದೆಹೆಲಿಯಲ್ಲೇ ತರಬೇತಿ ಪಡೆದರೆ ಯಶಸ್ಸು ಎಂಬ ಭ್ರಮೆಯನ್ನು ರಾಜ್ಯದ ಯುವ ಸಮುದಾಯ ಬಿಡಬೇಕು. ಅತ್ಯಂತ ಕಡಿಮೆ ವೆಚ್ಚದಲ್ಲಿ ವಿವಿ ವತಿಯಿಂದ ತರಬೇತಿ ನೀಡುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಿದರು.

ಯುಜಿಸಿ ಮಾನ್ಯತೆ ಪಡೆದಿದೆ: ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ಸಿಕ್ಕಿಲ್ಲ ಎಂಬುದೀಗ ಇತಿಹಾಸ. ವಿಶ್ವವಿದ್ಯಾನಿಲಯಕ್ಕೆ 2023ರವರೆಗೆ ಯುಜಿಸಿ ಮಾನ್ಯತೆ ಸಿಕ್ಕಿದೆ. 2023-24ನೇ ಸಾಲಿನಿಂದ ಆಚೆಗೂ ಮಾನ್ಯತೆ ನವೀಕರಣಕ್ಕೆ ಯುಜಿಸಿ ನಿರ್ದೇಶನ ಕೊಟ್ಟಿದೆ. ಹೀಗಾಗಿ ಕೆಎಸ್‌ಒಯು ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಯಾವ ಗೊಂದಲವೂ ಬೇಡ. ಮುಕ್ತ ವಿವಿಯಲ್ಲಿ ಪಡೆವ ಶಿಕ್ಷಣಕ್ಕೂ ನೇರವಾಗಿ ಪಡೆಯುವ ಶಿಕ್ಷಣಕ್ಕೂ ಯಾವ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟಪಡಿಸಿದರು.

6 ನೋಡಲ್ ಅಧಿಕಾರಿಗಳ ನೇಮಕ: ಕೆಎಸ್‌ಒಯುದ ವಿದ್ಯಾರ್ಥಿಗಳ ಪೈಕಿ ಅನೇಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಮ್ಮ ಬಳಿ ಹೇಳಿಕೊಳ್ಳಬಹುದು. ಇ-ಮೇಲ್, ವಾಟ್ಸಪ್‌ ಮೂಲಕವೂ ತಮ್ಮನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಲು 6 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ತಾವು ಕುಲಪತಿಗಳಾದ ನಂತರ ಕಡತ ವಿಲೇವಾರಿ ಸೇರಿದಂತೆ ಹಲವು ಸುಧಾರಣೆಗಳನ್ನು ತಂದಿದ್ದೇವೆ. ವಿವಿಯ ಶುಲ್ಕ ಪಾವತಿಯನ್ನು ಆನ್‌ಲೈನ್‌ ಮೂಲಕವೇ ಪಾವತಿಸುವ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದರು.

ಕೆಎಸ್‌ಒಯುನಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗ ಮುಗಿಸಿರಬೇಕು, ಕೆಲವು ಕೋರ್ಸ್‌ಗಳಿಗೆ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದವರು ಸರ್ಟಿಪಿಕೇಟ್ ಕೋರ್ಸ್‌ ಗಳಿಗೆ ಪ್ರವೇಶ ಪಡೆಯಬಹುದು ಎಂದು ಹೇಳಿದರು.

ರಾಮನಗರದಲ್ಲಿ ಸ್ವಂತ ಕಟ್ಟಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಮನಗರ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸ್ಥಳವನ್ನು ಗುರುತಿಸಲಾಗಿದೆ. ಕನಕಪುರ ವೃತ್ತದ ಬಳಿಯ ಲೇಔಟ್‌ನಲ್ಲಿ ವಿವಿಗೆ ಸ್ಥಳ ಇದ್ದು, ಅಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದರು.

ಈ ವೇಳೆ ಜಿಲ್ಲೆಯ ಪ್ರಾದೇಶಿಕ ಕೇಂದ್ರ ಕಚೇರಿಯ ನಿರ್ದೇಶಕ ಡಾ.ವಿಜಯ್‌ ಪ್ರಕಾಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್‌. ಶಂಕರಪ್ಪ ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚನ್ನಪಟ್ಟಣ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕೆಂಬ ನಿಯಮವನ್ನು ಸಂಚಾರ ಪೊಲೀಸರು ಜಾರಿಗೊಳಿಸಿರುವ ಬೆನ್ನಲ್ಲೇ, ಹೆಲ್ಮೆಟ್ ಮಾರಾಟಗಾರರು ಕಳಪೆ...

  • ರಾಮನಗರ: ಹೆದ್ದಾರಿ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ರಾಮನಗರ ಪ್ರಾದೇಶಿಕ...

  • ಚನ್ನಪಟ್ಟಣ: ರಂಗಭೂಮಿ ಕಲೆ ತನ್ನದೇ ಆದ ಮಹತ್ತರ ಇತಿಹಾಸ ಹೊಂದಿದೆ. ಇತ್ತೀಚಿನ ದೂರದರ್ಶನದಲ್ಲಿ ಪ್ರದರ್ಶನವಾಗುವ ಯಾವ ಕಾರ್ಯಕ್ರಮಗಳೂ ಇದಕ್ಕೆ ಸರಿಸಾಟಿಯಾಗಲಾರದು...

  • ರಾಮನಗರ: ರಾಜ್ಯದಲ್ಲಿ ಉಗ್ರರ ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್‌ ಘೋಷಿಸಿದ್ದು, ಜಿಲ್ಲಾ...

  • ರಾಮನಗರ: ದೇಶದ ಹಲವು ರಾಜ್ಯಗಳಲ್ಲಿ ನೆರೆ ಹಾವಳಿ ಕಾಡಿದೆ. ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಕೇಂದ್ರ ಸರ್ಕಾರ ತಕ್ಷಣ ರಾಷ್ಟ್ರೀಯ ವಿಪತ್ತು...

ಹೊಸ ಸೇರ್ಪಡೆ